ಬೆಂಗಳೂರು: ಕಳೆದ ಕೆಲವು ದಿನಗಳಿಂದ ಒಂದೇ ಗೂಡಿನ ಹಕ್ಕಿಗಳಂತೆ ವಿಹರಿಸುತ್ತಿರುವ (Karnataka Politics) ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನು (Joint Pressmeet) ಮಾಡುವ ಮೂಲಕ ತಾವೆಷ್ಟು ಹತ್ತಿರ ಎನ್ನುವುದನ್ನು ಮತ್ತೆ ತೋರಿಸಿಕೊಟ್ಟರು. ಅತ್ಯಂತ ತುರ್ತಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ (HD Kumaraswamy) ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಹಾಲು ಜೇನಿನಂತೆ ಬೆರೆತು ಖುಷಿಪಟ್ಟರು. ಅದರಲ್ಲೂ ಅವರಿಬ್ಬರೂ ಪತ್ರಿಕಾಗೋಷ್ಠಿಗೆ ಆಯ್ಕೆ ಮಾಡಿಕೊಂಡ ವಿಷಯವೂ ಪರಸ್ಪರ ಸಹಕಾರಕ್ಕೆ ಪೂರಕವಾಗಿತ್ತು. NICE (Nandi Infrastructure corridor Enterprises) ಕಾರಿಡಾರ್‌ಗೆ ನೀಡಿರುವ ಹೆಚ್ಚುವರಿ ಜಮೀನನ್ನು ಹಿಂದಕ್ಕೆ ಪಡೆಯಬೇಕು, ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂಬ ಉಭಯ ಸಾಮಾನ್ಯ ಅಜೆಂಡಾದೊಂದಿಗೆ ಪತ್ರಿಕಾಗೋಷ್ಠಿಯನ್ನು ನೈಸಾಗಿ ನಡೆಸಿದರು.
ಪತ್ರಿಕಾಗೋಷ್ಠಿಯ ಆರಂಭದಲ್ಲೇ ತಾವೆಷ್ಟು ಕುಚಿಕು ಗೆಳೆಯರು ಎನ್ನುವುದನ್ನು ಇಬ್ಬರೂ ಪ್ರದರ್ಶಿಸಿದರು. ಪತ್ರಿಕಾಗೋಷ್ಠಿ ಸ್ಥಳಕ್ಕೆ ಬಂದ ಎಚ್.ಡಿ ಕುಮಾರಸ್ವಾಮಿ ಅವರು ಬಸವರಾಜ ಬೊಮ್ಮಾಯಿ ಬಾರದಿರುವುದನ್ನು ನೋಡಿ ಅವರಿಗೆ ಕರೆ ಮಾಡಿದರು. ʻಬ್ರದರ್ ನಿಮಗೆ ವೇಯ್ಟಿಂಗ್. ಇಲ್ಲಿ ಪ್ರೆಸ್‌ನವರು ಜಾಮ್ ಪ್ಯಾಕ್ ಆಗಿದ್ದಾರೆʼʼ ಎಂದರು.
ಆರಂಭದಲ್ಲಿ ವಿಧಾನಸಭಾ ಕಲಾಪದ ಬಗ್ಗೆ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ ಅವರು, ಮಧ್ಯಾಹ್ನ ಊಟಕ್ಕೂ ಬಿಡದೆ ಶಾಲಾ ಮಕ್ಕಳಿಗೆ ಪಾಠ ಕಲಿಸಿದಂತೆ ಕಲಿಸುತ್ತೇವೆ ಎಂದು ಉದ್ದಟತನ ತೋರಿದರೆ ಒಪ್ಪೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಕಳೆದ ಮೂರು ದಿನಗಳಿಂದ ವಿಪಕ್ಷಗಳಿಲ್ಲದೆ ಸದನದ ಕಲಾಪ ಮೌಲ್ಯಗಳು ಕುಸಿದಿವೆ ಎಂದು ಆರೋಪಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ಒಗ್ಗಟ್ಟಾಗಿ ಹೋರಾಟ ಮಾಡುವ ನಿರ್ಧಾರ ಮಾಡಿದ್ದೇವೆ. ಇದೆಲ್ಲವೂ ರಾಜ್ಯದ ಜನರ ಹಿತದೃಷ್ಟಿಯಿಂದಾಗಿ ಎಂದು ಕುಮಾರಸ್ವಾಮಿ ಹೇಳಿಕೊಂಡರು.
ನೈಸ್ ವಿವಾದವೇ ಜಂಟಿ ಸುದ್ದಿಗೋಷ್ಠಿಯ ವಿಷಯ
ಅಧಿವೇಶನದಲ್ಲಿ ನೈಸ್ ಕಾರಿಡಾರ್ ಕರ್ಮಕಾಂಡದ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ದೆವು. ಆದರೆ, ನಾವು ಕೇಳಿದ ದಿನ ಲಿಸ್ಟ್ ಮಾಡಿರಲಿಲ್ಲ. ನಾವು ಸದನದಲ್ಲಿ ಇಲ್ಲದ ದಿನ ಲಿಸ್ಟ್ ಮಾಡಿದ್ದಾರೆ. ಹೀಗಾಗಿ ಸದನದಲ್ಲಿ ಹೇಳಬೇಕಾದ ವಿಚಾರವನ್ನು ಹೇಳಲು ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದರು.
ನೈಸ್ ವಿಷಯದಲ್ಲಿ ಕುಮಾರಸ್ವಾಮಿ ಅವರು ಹೇಳಿದ್ದೇನು?
1.ನೈಸ್ ಸಂಸ್ಥೆ ಹೆಚ್ಚುವರಿ ಭೂಮಿಯನ್ನು ಸರ್ಕಾರದಿಂದ ಪಡೆದುಕೊಂಡಿದೆ.
2.ರಸ್ತೆ ನಿರ್ಮಾಣ ಮಾಡುವುದಾಗಿ ಭೂಮಿಯನ್ನು ಪಡೆದುಕೊಂಡಿದೆ.
3. ಹೆಚ್ಚುವರಿ ಭೂಮಿ 13 ಸಾವಿರ ಎಕರೆ ವಾಪಸ್ ಪಡೆದುಕೊಳ್ಳಬೇಕು ಎಂದು ಸಂಪುಟ ಉಪಸಮಿತಿ, ಸದನ ಸಮಿತಿ ವರದಿ ನೀಡಿದೆ. ಆದರೆ, ಸರ್ಕಾರ ಕ್ರಮ ಕೈಗೊಂಡಿಲ್ಲ.
4. ನೈಸ್ ಸಂಸ್ಥೆ ನಿರಂತರ ಟೋಲ್ ಸಂಗ್ರಹದ ಮೂಲಕ ಹೆಚ್ಚುವರಿಯಾಗಿ 1325 ಕೋಟಿ ರೂ. ಸಂಗ್ರಹಿಸಿದೆ. ಇದನ್ನು ಸರ್ಕಾರ ವಾಪಸ್ ಪಡೆಯಬೇಕು. ನಾವು ಯಾಕೆ ಇನ್ನೂ ಟೋಲ್ ಕಟ್ಟಬೇಕು ಎಂದು ಜನ ಕೇಳುತ್ತಿದ್ದಾರೆ.
5. ನೈಸ್ ರಸ್ತೆಗಾಗಿ ಸರ್ಕಾರ ನೀಡಿದ ಭೂಮಿಯನ್ನು ಮನೆ ಕಟ್ಟಲು ಮಾರಾಟ ಮಾಡಲಾಗಿದೆ. ರೈತರ ಭೂಮಿಯನ್ನು ಒತ್ತುವರಿ ಮಾಡಿದ್ದು ಅದಕ್ಕೆ ಹಣ ಕಟ್ಟಿಲ್ಲ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
- ಬೆಂಗಳೂರು-ಮೈಸೂರು ನಡುವೆ ಅಭಿವೃದ್ಧಿ ಮಾಡಬೇಕು ಎಂದು ಫ್ರೇಮ್ ವರ್ಕ್ ಆಗಿತ್ತು. ಆದರೆ ಅದು ಆಗಿಲ್ಲ. ಆದರೆ, ಹೆಚ್ಚುವರಿ ಭೂಮಿಯನ್ನೂ ವಾಪಸ್ ಕೊಟ್ಟಿಲ್ಲ. ಈಗ ಅದನ್ನು ವಾಪಸ್ ಪಡೆಯಬೇಕು.
- ಬೆಲೆ ಬಾಳುವ ಜಾಗವನ್ನು ಅರ್ಧ ಬೆಲೆಗೆ ಕೊಡಲಾಗಿದೆ. ಇದರಿಂದ ಲ್ಯಾಂಡ್ ಮಾಫಿಯಾ ಹುಟ್ಟಿಕೊಂಡಿದೆ.
- ಟೋಲ್ ಆಡಿಟ್ ಆಗಬೇಕು, ಇನ್ನೂ ಎಷ್ಟು ದಿನ ಟೋಲ್ ಸಂಗ್ರಹ ಎಂಬ ಜನರ ಪ್ರಶ್ನೆಗೆ ಉತ್ತರಿಸಬೇಕು.
ಇದನ್ನೂ ಓದಿ: HD Kumaraswamy : ಬಿಜೆಪಿ ಕಡೆ JDS ನಡೆ; ಇನ್ನೊಂದು ಹೆಜ್ಜೆ ಇಟ್ಟ HDK, ಬೊಮ್ಮಾಯಿ ಜತೆ ಜಂಟಿ ಸುದ್ದಿಗೋಷ್ಠಿ