ಬಳ್ಳಾರಿ: ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರಿಸು-ಮುರಿಸು ಆಗಿದೆ. ಅವರನ್ನು ಪಕ್ಷಕ್ಕೆ ಆಹ್ವಾನಿಸಿ, ಹಿಂದುಳಿದ ವರ್ಗದವರನ್ನು ಒಂದು ಮಾಡಲು ಅಂದು ಮಾತನಾಡಿದ್ದೇನೆಯೇ ಹೊರತು ಬೇರೆ ಯಾವ ವಿಚಾರವೂ ಇದರ ಹಿಂದೆ ಇಲ್ಲ. ಹೀಗಾಗಿ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ, ಬೇರೆ ರಾಜಕೀಯ ಬೇಡ (Karnataka Politics) ಎಂದು ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಪರವಾಗಿ ತಮ್ಮ ಹೇಳಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಆ ಪಕ್ಷದ ಇತರರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ನಮ್ಮ ಪಕ್ಷಕ್ಕೆ ಆಹ್ವಾನಿಸುವ ಸಂಬಂಧ ಭೇಟಿ ಮಾಡಿ ಮಾತನಾಡಿದ್ದೇನೆ. ಈ ವಿಚಾರದಲ್ಲಿ ರಾಜ್ಯಾಧ್ಯಕ್ಷರಿಗೆ ಏನು ಹೇಳಬೇಕೋ ಅದನ್ನು ನಾನು ಹೇಳಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಧೀಮಂತ ನಾಯಕ, ಪಕ್ಷ ಮತ್ತು ಜನರಿಗಾಗಿ ಜೀವನ ತ್ಯಾಗ ಮಾಡಿದ್ದಾರೆ. ಮೊದಲಿನಿಂದಲೂ ಯಡಿಯೂರಪ್ಪ ಮತ್ತು ಈಶ್ವರಪ್ಪ ಪಕ್ಷವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ನನಗೆ ಈ ಸ್ಥಾನ ಸಿಗಲು ಯಡಿಯೂರಪ್ಪ ಅವರೇ ಕಾರಣ ಎಂದು ಶ್ರೀರಾಮುಲು ಹೇಳಿದರು.
ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ
ಯಡಿಯೂರಪ್ಪ ಅವರಿಗೆ ಕೇಂದ್ರದಲ್ಲಿ ಪ್ರಮುಖ ಸ್ಥಾನ ಸಿಕ್ಕಿದ್ದರಿಂದ ಮುಂದಿನ ಚುನಾವಣೆಯಲ್ಲಿ ಪಕ್ಷ ಮತ್ತು ಕಾರ್ಯಕರ್ತರಿಗೆ ಆನೆಬಲ ಬಂದಂತಾಗಿದೆ. ದಕ್ಷಿಣ ಭಾರತದಲ್ಲಿ ಈ ಸ್ಥಾನ ಪಡೆದವರಲ್ಲಿ ಬಿಎಸ್‌ವೈ ಅವರೇ ಪ್ರಥಮ. ಬಿಜೆಪಿಯನ್ನು ಎರಡು ಸ್ಥಾನದಿಂದ 120 ಸ್ಥಾನಕ್ಕೆ ತಂದಿರುವ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಸಾಮೂಹಿಕ ನಾಯಕತ್ವದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಪಾಲಣ್ಣ, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಶ್ರೀನಿವಾಸ ಮೋತ್ಕರ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ | ಬಾದಾಮಿಯಲ್ಲಿ ಅಡ್ಜಸ್ಟ್‌ಮೆಂಟ್ ?: ಚುನಾವಣೆಗೆ ಎರಡು ದಿನ ಮೊದಲು ಶ್ರೀರಾಮುಲು ಎಲ್ಲಿದ್ದರು?