Site icon Vistara News

Karnataka Politics : ಬಿಎಸ್‌ವೈ-ಎಚ್‌ಡಿಕೆ ಟೂರ್‌; ಯುರೋಪ್‌ನಲ್ಲಿ ಕರ್ನಾಟಕ ಪಾಲಿಟಿಕ್ಸ್!

HD kumarswamy DK Shivakumar CM Siddaramaiah and BS Yediyurappa

ಬೆಂಗಳೂರು: ವಿಧಾನಸಭಾ ಚುನಾವಣೆ (Assembly elections) ನಡೆದು ಬಹುಮತದಿಂದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದರೂ ರಾಜ್ಯ ಸರ್ಕಾರ ಉರುಳುವ ಬಗ್ಗೆ ಸದ್ಯ ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ವಿಚಾರಗಳು ಚರ್ಚೆಯಲ್ಲಿದೆ. ಮೊದಲಿಗೆ ಅವರದ್ದೇ ಪಕ್ಷದ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ (MLC BK Hariprasad) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸಿಂಗಾಪುರ ಪ್ರವಾಸದಲ್ಲಿದ್ದಾರೆಂಬ ಸುದ್ದಿ ಹರಡಿ, “ಆಪರೇಶನ್‌ ಸಿಂಗಾಪುರ”ದ (Operation Singapore) ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಈಗ ಎಚ್‌.ಡಿ. ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರ ಜತೆ ಯುರೋಪ್ ಪ್ರವಾಸದಲ್ಲಿರುವುದು ಖಚಿತವಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಕುಟುಂಬದೊಂದಿಗೆ ಯುರೋಪ್‌ಗೆ (Europe Tour) ತೆರಳಿದ್ದಾರೆ. ಹೀಗಾಗಿ ಯುರೋಪ್‌ನಲ್ಲಿ ಕರ್ನಾಟಕ ಪಾಲಿಟಿಕ್ಸ್ (Karnataka Politics in Europe) ಶುರುವಾದಂತೆ ಆಗಿದೆ.

ಹಾಗಾದಾರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೀಡಿದ ಹೇಳಿಕೆ ನಿಜವೇ ಎಂಬ ಅನುಮಾನ ಮೂಡತೊಡಗಿದೆ. ಸರ್ಕಾರ ಉರುಳಿಸುವ ಬಗ್ಗೆ ಯುರೋಪ್‌ನಲ್ಲಿ ಸಂಚು ನಡೆಯುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಟ್ರ್ಯಾಕ್‌ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ಸರ್ಕಾರ ಉರುಳಿಸಲು ಯುರೋಪ್‌ನಲ್ಲಿ ಚರ್ಚೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

HD Kumaraswamy in Europe

ಇದನ್ನೂ ಓದಿ: KG DJ Halli case : ತನ್ವೀರ್‌ ಸೇಠ್ ಪತ್ರದ ಹಿಂದೆ ಡಿಕೆಶಿ ಕೈವಾಡ: ಅಖಂಡ‌ ಶ್ರೀನಿವಾಸ ಮೂರ್ತಿ

ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಅವರು ಯುರೋಪ್‌ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರೂ ಅಲ್ಲಿಗೇ ಹೊರಟಿದ್ದಾರೆ. ಹೀಗಾಗಿ ಉಭಯ ನಾಯಕರು ರಾಜಕೀಯ ಬೆಳವಣಿಗೆ ಬಗ್ಗೆ ಅಲ್ಲಿ ಚರ್ಚೆ ನಡೆಸಲಿದ್ದಾರೆಯೇ? ಯಾವುದಾದರೂ ಹೊಸ ಬೆಳವಣಿಗೆ ನಡೆಯಲಿದೆಯೇ? ಎಂಬ ಅನುಮಾನ ಮೂಡಿದೆ.

HD Kumaraswamy in Europe

ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ

ಇತ್ತ ಕಾಕತಾಳೀಯ ಎಂಬಂತೆ ರಾಜ್ಯ ಸರ್ಕಾರದಲ್ಲಿ ಸಹ ಎಲ್ಲವೂ ಸರಿಯಾಗಿಲ್ಲ. ವಿಧಾನ ಪರಿಷತ್‌ ಸದಸ್ಯರಾಗಿರುವ ಬಿ.ಕೆ. ಹರಿಪ್ರಸಾದ್‌ ಅವರು ಬಹಿರಂಗವಾಗಿಯೇ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. “ನನಗೆ ಮುಖ್ಯಮಂತ್ರಿಯನ್ನು ಕೂರಿಸುವುದೂ ಗೊತ್ತು, ಇಳಿಸುವುದೂ ಗೊತ್ತು” ಎಂದು ಹೇಳಿದ್ದರು. ಇದು ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ಈ ನಡುವೆ ಆಳಂದ ಶಾಸಕ ಬಿ.ಆರ್‌ . ಪಾಟೀಲ್‌ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದ್ದು, ಸಚಿವರು ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ. ಹಿರಿಯ ಶಾಸಕರಿಗೆ ಗೌರವ ಕೊಡುತ್ತಿಲ್ಲ. ಇಲಾಖೆಯಿಂದ ಅಭಿವೃದ್ಧಿ ಹಣ ಬಿಡುಗಡೆ ಮಾಡುತ್ತಿಲ್ಲ. ಕೂಡಲೇ ಸಿಎಲ್‌ಪಿ ಸಭೆ ನಡೆಸಿ ಎಂದು ಕೋರಿದ್ದರು.

ಇದನ್ನೂ ಓದಿ: BJP Karnataka : ಒಕ್ಕಲಿಗರಿಗೇ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ?

ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವಿಲ್ಲ ಎಂದಿದ್ದ ಡಿ.ಕೆ. ಶಿವಕುಮಾರ್

ಇನ್ನೊಂದೆಡೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಕ್ಷೇತ್ರ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದಾರೆ. ಈ ನಡುವೆ ಶಾಸಕರಲ್ಲಿ ಅಸಮಾಧಾನ ಮೂಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯದ ಪ್ರಮುಖ ಪಕ್ಷಗಳ ನಾಯಕರಿಬ್ಬರು ಯುರೋಪ್‌ನಲ್ಲಿ ಪ್ರವಾಸದಲ್ಲಿದ್ದಾರೆ. ಈ ಪ್ರವಾಸಕ್ಕೆ ಈಗ ರೆಕ್ಕೆಪುಕ್ಕಗಳು ಹುಟ್ಟಿಕೊಂಡಿದ್ದು, ಸರ್ಕಾರ ಬೀಳಿಸುವ ತಂತ್ರ ಎಂಬ ಮಾತು ಚಾಲ್ತಿಯಲ್ಲಿದೆ.

Exit mobile version