Site icon Vistara News

Karnataka Politics : ರಾಜ್ಯದಲ್ಲಿ ಶುರುವಾಯ್ತಾ ಸರ್ಕಾರ VS ಗವರ್ನರ್?;‌ ಹರಿಪ್ರಸಾದ್‌ ವಿಚಾರಣೆಗೆ ಯಾರ ಆದೇಶ?

Cabinet Meeting

ಬೆಂಗಳೂರು: ವಿರೋಧ ಪಕ್ಷದ ಆಡಳಿತ ಇರುವ‌ ರಾಜ್ಯಗಳಲ್ಲಿ ರಾಜ್ಯಪಾಲರು‌ ಹಸ್ತಕ್ಷೇಪ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುವುದು ಸಾಮಾನ್ಯವಾಗಿದೆ. ಈಗಲೂ ಬಿಜೆಪಿಯೇತರ ಮುಖ್ಯಮಂತ್ರಿಗಳಿರುವ ರಾಜ್ಯಗಳಲ್ಲಿ ಕೆಲವು ಕಡೆ ಸರ್ಕಾರ ಮತ್ತು ರಾಜ್ಯಪಾಲರ (Government VS Governor) ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಅಂಥಹುದೊಂದು ಸಂಘರ್ಷ ರಾಜ್ಯದಲ್ಲೂ (Karnataka Government) ಆರಂಭವಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಸಚಿವ ಪ್ರಿಯಾಂಕ್‌ ಖರ್ಗೆ (Minister Priyank Kharge) ಅವರು ವ್ಯಕ್ತಪಡಿಸಿದ ಅನುಮಾನ (Karnataka Politics).

ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಗೋಧ್ರಾ ಮಾದರಿಯ ಗಲಭೆ ನಡೆಯಬಹುದು ಎಂಬ ಸಂಶಯವನ್ನು ‌ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ವಿರುದ್ಧ ಸಿಸಿಬಿ ವಿಚಾರಣೆ ನಡೆಸಿದೆ. ರಾಜ್ಯ ಸರ್ಕಾರವೇ ಆದೇಶ ಮಾಡಿ ವಿಚಾರಣೆಗೆ ಸೂಚಿಸಿದೆ ಎಂದು ಸ್ವತಃ ಬಿ.ಕೆ. ಹರಿಪ್ರಸಾದ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇದರ ಹಿಂದೆ ರಾಜ್ಯ ಸರ್ಕಾರದ ಕೈವಾಡವಿಲ್ಲ. ಬದಲಾಗಿ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಸೂಚನೆಯ ಮೇರೆಗೆ ನಡೆದಿದೆ ಎಂಬ ಅನುಮಾವನ್ನು ಸಚಿವ ಪ್ರಿಯಾಂಕ್‌ ಖರ್ಗೆ ವ್ಯಕ್ತಪಡಿಸಿದ್ದಾರೆ.

ʻʻನೀವು ಗಮನಿಸಬೇಕು, ಯಾರು ಈ ತನಿಖೆಗೆ ನಿರ್ದೇಶನ ಮಾಡುತ್ತಿದ್ದಾರೆ ಎಂದು. ರಾಜ್ಯಪಾಲರು ಪದೇಪದೆ ಇದರ ಬಗ್ಗೆ ಕೇಳ್ತಾ ಇದ್ದಾರೆ. ಬಿ.ಕೆ. ಹರಿಪ್ರಸಾದ್‌ ಅವರ ಹೇಳಿಕೆಯ ಬಗ್ಗೆ ತನಿಖೆ ಆಗುತ್ತಿದೆಯಾ? ಇಲ್ವಾ ಎಂದು ಆಗಾಗ ಕೇಳುತ್ತಿದ್ದಾರೆ. ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯವರು ವಿಚಾರಣೆ ನಡೆಸಿದ್ದಾರೆ. ಇದು ಅಷ್ಟಕ್ಕೇ ಸೀಮಿತವಾಗಿದೆʼʼ ಎಂದು ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ ಅವರು ಹೇಳಿದ್ದಾರೆ.

ಬಿ.ಕೆ. ಹರಿಪ್ರಸಾದ್‌ ಅವರ ಬಗ್ಗೆ ತನಿಖೆ ನಡೆಸಿ ಅವರನ್ನು ಮುಜುಗರಕ್ಕೆ ಒಳಪಡಿಸುವ ಯಾವ ಉದ್ದೇಶವೂ ಇಲ್ಲ. ಖಂಡಿತವಾಗಿಯೂ ಸರ್ಕಾರವೇ ಸ್ವತಃ ಅವರ ವಿಚಾರಣೆಗ ಆದೇಶ ನೀಡಿದ್ದಲ್ಲ. ರಾಜ್ಯಪಾಲರು ಆಗಾಗ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿರುವುದರಿಂದ ಒಂದು ಸಾಮಾನ್ಯ ಪ್ರಕ್ರಿಯೆಯಾಗಿ ವರದಿ ನೀಡಲು ಅವರ ವಿಚಾರಣೆ ನಡೆದಿದೆ ಎಂದು ಪ್ರಿಯಾಂಕ್‌ ಖರ್ಗೆ ಅವರು ಹೇಳಿದರು.

ʻʻಯಾಕೆ ರಾಜ್ಯಪಾಲರು ಯಾಕೆ ಅಷ್ಟು ಆಸಕ್ತಿ ವಹಿಸುತ್ತಿದ್ದಾರೆ ಎಂದು ಗಮನಿಸಬೇಕು. ಅವರಿಗೆ ಕೇಂದ್ರ ಸರ್ಕಾರದಿಂದ ನಿರ್ದೇಶನವಿದೆಯಾ? ಅವರಿಗೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಬೇಕು, ಹರಿಪ್ರಸಾದ್ ಅವರಿಗೆ ಮುಜುಗರ ಮಾಡಬೇಕು ಎಂಬ ಉದ್ದೇಶವಿದೆಯಾ?ʼʼ ಎಂದು ಪ್ರಿಯಾಂಕ್‌ ಖರ್ಗೆ ಸಂಶಯ ವ್ಯಕ್ತಪಡಿಸಿದರು.

ʻʻದೇಶದಲ್ಲಿ ಒಂದು ಪ್ಯಾಟರ್ನ್ ಇದೆ, ಎಲ್ಲೆಲ್ಲಿ ಬಿಜೆಪಿ ಇಲ್ಲವೋ ಅಲ್ಲೆಲ್ಲ ರಾಜ್ಯಪಾಲರ ಮೂಲಕ ಆಳ್ವಿಕೆ ಮಾಡಲು ಹೊರಟಿದ್ದಾರೆ. ನಾವು ಏನೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಸರ್ಕಾರವನ್ನು ನಡೆಸುತ್ತೇವೆ. ಕಾನೂನು ಸುವ್ಯವಸ್ಥೆಗೂ, ರಾಜ್ಯಪಾಲರಿಗೆ ಏನು ಸಂಬಂಧವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯಾ?ʼʼ ಎಂದು ಪ್ರಶ್ನಿಸಿರುವ ಪ್ರಿಯಾಂಕ್‌ ಖರ್ಗೆ ಅವರು, ಹಿಂದಿನ ಸರ್ಕಾರ ಇದ್ದಾಗ ಯಾವತ್ತೂ ಈ ರೀತಿ ಆಗಿಲ್ಲ.. ಈ ಬಾರಿ ಯಾಕೆ ಈ ರೀತಿ ಆಗುತ್ತದೆ.. ಜನ ಇದರ ಬಗ್ಗೆ ವಿಚಾರ ಮಾಡಬೇಕುʼʼ ಎಮದು ಹೇಳಿದರು.

Exit mobile version