Site icon Vistara News

Karnataka Politics : ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಫಿಕ್ಸಾಯ್ತಾ? ಬೊಮ್ಮಾಯಿ ಶಕ್ತಿ ಪ್ರದರ್ಶನವಾಯ್ತಾ?

Basavaraja Bommai HD Kumaraswamy

ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ (BJP JDS Alliance) ಸದನದ ಒಳಗೂ ಹೊರಗೂ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ (Fighting jointly) ಮಾಡಲಿದೆ- ಹೀಗೆಂದು ಜಂಟಿ ಪತ್ರಿಕಾಗೋಷ್ಠಿಯಲ್ಲೇ ಘೋಷಣೆ ಮಾಡಿದರು ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H.D Kumaraswamy). ಕಳೆದ ಹಲವು ದಿನಗಳಿಂದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ನಡೆದುಕೊಳ್ಳುತ್ತಿರುವ ರೀತಿಗೆ ಸ್ಪಷ್ಟನೆಯ ರೂಪದಲ್ಲಿ ಕುಮಾರಸ್ವಾಮಿ ಮಾತು ಹೇಳಿದರು. ವಿಧಾನ ಮಂಡಲದ ಕಲಾಪದ (Budget session) ಆರಂಭದ ದಿನದಿಂದಲೂ ಎರಡೂ ಪಕ್ಷಗಳು ಒಟ್ಟಾಗಿಯೇ ಸರ್ಕಾರದ ವಿರುದ್ಧ ಸೆಣಸಾಟ Karnataka Politics) ನಡೆಸಿವೆ.

ಸರ್ಕಾರದಲ್ಲಿ ಆಗುತ್ತಿರುವ ಟ್ರಾನ್ಸ್‌ಫರ್ ದಂಧೆಯನ್ನು‌ ಎಚ್‌.ಡಿ ಕುಮಾರಸ್ವಾಮಿ ಅವರು ಬೆಳಕಿಗೆ ತಂದರೆ ಹೋರಾಟವನ್ನು ಕೈಗೆತ್ತಿಕೊಂಡಿದ್ದು ಬಿಜೆಪಿ. ಐಎಎಸ್ ಅಧಿಕಾರಿಗಳನ್ನು ವಿಪಕ್ಷ ಮಿತ್ರಕೂಟ ಸಭೆಗೆ ನಿಯೋಜಿಸಿದ ಸರ್ಕಾರದ ವಿರುದ್ಧ ಮೊದಲು ಧ್ವನಿ ಎತ್ತಿದ್ದು ಕುಮಾರಸ್ವಾಮಿ. ಅದರೆ, ಇದರ ವಿರುದ್ಧ ಹೋರಾಟ ಮಾಡಿ, ಕಾಗದ ಹರಿದುಹಾಕಿ ಅಮಾನತಾಗಿದ್ದು ಬಿಜೆಪಿ ಸದಸ್ಯರು. ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್‌ ಕ್ರಮದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಜತೆಯಾಗಿ ರಾಜ್ಯಪಾಲರ ಬಳಿಗೆ ಹೋಗಿವೆ. ರಾಜ್ಯಪಾಲರಿಗೆ ನೀಡಿದ ಬಿಜೆಪಿ ಲೆಟರ್‌ಹೆಡ್‌ನ ಮನವಿ ಪತ್ರದಲ್ಲಿ ಕುಮಾರಸ್ವಾಮಿಯೇ ಮೊದಲಿಗರಾಗಿ ಸಹಿ ಹಾಕಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಜಂಟಿ ಸುದ್ದಿಗೋಷ್ಠಿ ನಡೆದಿದೆ.

ಹಾಗಿದ್ದರೆ ಮೈತ್ರಿ ಪಕ್ಕಾನಾ? ಕುಮಾರಸ್ವಾಮಿ ಹೇಳುವುದೇನು?

ಹಾಗಿದ್ದರೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಪಕ್ಕಾನಾ ಎಂಬ ಪ್ರಶ್ನೆಗೆ ನೇರವಾಗಿಯೇ ಉತ್ತರ ನೀಡಿದ ಎಚ್.‌ಡಿ ಕುಮಾರಸ್ವಾಮಿ ಅವರು, ಇದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಶಾಸಕರು ಕೂಡ ಒಂದಿಷ್ಟು ಚರ್ಚೆ ಮಾಡಿದ್ದಾರೆ. ದೇವೆಗೌಡರು ಸಲಹೆ ಸೂಚನೆ ನೀಡಿದ್ದಾರೆ. ಸೂಕ್ತವಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೂಡ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ರಾತ್ರಿ ದೇವೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲ ಎಲ್ಲಾ ವಿಷಯ ಪ್ರಸ್ತಾಪವಾಗಿದೆ. ಕಾಂಗ್ರೆಸ್ ನಡವಳಿಗೆ ಹೇಗಿದೆ, ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದ ಕುಮಾರಸ್ವಾಮಿ, ʻʻಮೈತ್ರಿಗೆ ಸಮಯವಿದೆ. ಈಗಲೇ ಪ್ರಿಮೆಚ್ಯುರ್ ಆಗಲಿದೆ. ಪಕ್ಷ ಸಂಘಟನೆಗೆ ಸಮಯ ಕೊಡಿ ಎಂದು ಹೇಳಿದ್ದಾರೆʼʼ ಎಂದರು.

ಇದು ಮೈತ್ರಿಯೋ ಬೊಮ್ಮಾಯಿ‌ ಶಕ್ತಿ ಪ್ರದರ್ಶನವೋ?

ಈ ನಡುವೆ, ಈ ಎಲ್ಲ ಬೆಳವಣಿಗೆಗಳು ಕುಮಾರಸ್ವಾಮಿ ಅವರನ್ನು ಕಟ್ಟಿಕೊಂಡು ಓಡಾಡುವ ಈ ನಡೆಗಳು ನಿಜಕ್ಕೂ ಮೈತ್ರಿಯೋ ಅಥವಾ ಬೊಮ್ಮಾಯಿಯವರ ಶಕ್ತಿ ಪ್ರದರ್ಶನವೋ ಎನ್ನುವ ಇನ್ನೊಂದು ಪ್ರಶ್ನೆಯೂ ಕೇಳಿಬರುತ್ತಿದೆ.

ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್‌ ಜತೆ ಸೇರಿ ಹೋರಾಟ ಮಾಡುತ್ತೇವೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಹಾಗಿದ್ದರೆ ಈ ಸುದ್ದಿಗೋಷ್ಠಿ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾದರಾ ಬೊಮ್ಮಾಯಿ‌ ಎಂಬ ಚರ್ಚೆಯೂ ಇದೆ.

ಜೆಡಿಎಸ್‌ ಅನ್ನು ಬಿಜೆಪಿ ಜತೆಗೆ ಕರೆದೊಯ್ಯಲು ತಮಗೆ ಮಾತ್ರ ಶಕ್ತಿ ಇದೆ ಎಂದು ತೋರಿಸುವ ಪ್ರಯತ್ನವನ್ನು ಬೊಮ್ಮಾಯಿ ಮಾಡಿರುವಂತೆ ಕಾಣಿಸುತ್ತಿದೆ.

ವಿಧಾನಸಭೆಯಲ್ಲಿ ಸರ್ಕಾರಕ್ಕೆ ಯಾವುದೇ ಹೊಂದಾಣಿಕೆ, ಯಾರ ಮೈತ್ರಿಯೂ ಬೇಕಾಗಿಲ್ಲ. ಅಷ್ಟರ ಮಟ್ಟಿಗೆ ಬಹುಮತ ಸರ್ಕಾರಕ್ಕೆ ಇದೆ. ಆದರೆ, ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತ ಇಲ್ಲ, ಸಭಾಪತಿಯೂ ಬಿಜೆಪಿ ಹಿನ್ನೆಲೆಯವರು. ಪರಿಷತ್‌ನಲ್ಲಿ ಜೆಡಿಎಸ್-ಬಿಜೆಪಿ ಒಟ್ಟಾದರೆ ಮಾತ್ರ ಸರ್ಕಾರದ ಮಸೂದೆಗಳನ್ನು ತಡೆಯಬಹುದು. ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಲು ಈಗ ಇರುವ ದಾರಿ ಇದೊಂದೇ. ಹೀಗಾಗಿ ಈ ವಿಚಾರದಲ್ಲಿ ಜೆಡಿಎಸ್‌ನ್ನು ಸ್ನೇಹಿತನಂತೆ ಬಳಸಿಕೊಳ್ಳುವುದು ಬೊಮ್ಮಾಯಿ ಅವರ ಪ್ಲ್ಯಾನ್‌ ಎನ್ನಲಾಗುತ್ತಿದೆ.

ಬಸವರಾಜ ಬೊಮ್ಮಾಯಿ ಅವರು ತಮ್ಮ ಜನತಾ ಹಿನ್ನೆಲೆಯನ್ನು ಬಳಸಿಕೊಂಡು‌ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ. ಇದೇ ಉದ್ದೇಶದಿಂದ ಜಂಟಿ ಪತ್ರಿಕಾಗೋಷ್ಠಿಗೆ ಸಮಾನ ವಿಷಯವಾಗಿ ಜೆಡಿಎಸ್‌ಗೆ ಪ್ರಿಯವಾಗಿರುವ ನೈಸ್‌ ವಿವಾದವನ್ನು ಎತ್ತಿಕೊಂಡಿದ್ದಾರೆ ಎನ್ನಲಾಗಿದೆ.

ಜಂಟಿ ಸುದ್ದಿಗೋಷ್ಠಿಗೆ ಹೈಕಮಾಂಡ್‌ ಅನುಮತಿ ಇತ್ತಾ?

ನಾನು ಬೊಮ್ಮಾಯಿ‌ ಮಾತಾಡಿಕೊಂಡು ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ ಎಂದು ಸ್ವತಃ ಕುಮಾರಸ್ವಾಮಿ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ನಿಜವೆಂದರೆ ಜಂಟಿ ಸುದ್ದಿಗೋಷ್ಠಿಗೆ ಬಿಜೆಪಿ ಹೈಕಮಾಂಡ್‌ ಅನುಮತಿ ಕೇಳಿಲ್ಲ ಎಂಬ ಮಾತೂ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಜಂಟಿ ಪ್ರತಿಭಟನೆವರೆಗೆ ಎರಡೂ ಪಕ್ಷಗಳು ಜತೆಯಾಗಿ ಹೋಗಲು ಹೈಕಮಾಂಡ್‌ ಒಪ್ಪಿತ್ತು. ಆದರೆ, ಜಂಟಿ ಸುದ್ದಿಗೋಷ್ಠಿ ತುರ್ತು ನಿರ್ಧಾರ ಎನ್ನಲಾಗುತ್ತಿದೆ. ಬೊಮ್ಮಾಯಿವರು ತಾನು ಪಕ್ಷವನ್ನು ಮಾತ್ರವಲ್ಲ, ಅಗತ್ಯವಿರುವಾಗ ಇತರ ಪಕ್ಷಗಳ ನಾಯಕರನ್ನೂ ಜತೆಗೆ ತೆಗೆದುಕೊಂಡು ಹೋಗಬಲ್ಲೆ. ಹೀಗಾಗಿ ವಿರೋಧ ಪಕ್ಷ ನಾಯಕನ ಸ್ಥಾನವನ್ನು ತನಗೇ ನೀಡಬೇಕು ಎಂದು ಬೊಮ್ಮಾಯಿ ಈ ಶಕ್ತಿ ಪ್ರದರ್ಶನದ ಮೂಲಕ ವಾದ ಮಂಡನೆ ಮಾಡಿದ್ದಾರೆ ಎಂಬ ಮಾತೂ ಇದೆ.

ಇದನ್ನೂ ಓದಿ : Karnataka Politics : NICE ಹೆಸರಲ್ಲಿ ನೈಸಾಗಿ ಬೆಸೆದುಕೊಂಡ ಕುಮಾರಸ್ವಾಮಿ, ಬೊಮ್ಮಾಯಿ! ಜಂಟಿ ಮಾತೇನು?

Exit mobile version