ಬೆಂಗಳೂರು: ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಸೇರಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳ ಜಾರಿ ಸದ್ಯಕ್ಕಿಲ್ಲ ಎಂಬ ಸುಳಿವನ್ನು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕೆಗಳ ಕುರಿತು ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದಾರೆ. ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿ ಎಂದು ಹೇಳಿದ್ದವರು ಈಗ, ಬೀದೀಲಿ ಹೋಗೋರಿಗೆಲ್ಲ ಕೊಡೋಕೆ ಆಗುತ್ತ ಎನ್ನುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕೂಸು ಹುಟ್ಟಿದ ಕೂಡಲೇ ಓಡಬೇಕು, ನಡಿಬೇಕು ಆಡಬೇಕು ಅಂದ್ರೆ ಹೇಗೆ ಆಗುತ್ತಾ? It takes time. ಕುಮಾರಸ್ವಾಮಿ ಅವರು ಸರ್ಕಾರ ನಡೆಸಿದವರು. ಒಂದು ಯೋಜನೆ ಅನುಷ್ಠಾನಕ್ಕೆ ಎಷ್ಟು ಸಮಯ ಬೇಕು ಅಂತ ಅವರಿಗೆ ಗೊತ್ತಿದೆ. ಆರ್ಥಿಕವಾಗಿ ಏನೇನಾಗತ್ತೆ ಅಂತ ನೋಡಬೇಕು, ಅನುಷ್ಠಾನ ವಿಚಾರಕ್ಕೆ ಏನೇನಾಗತ್ತೆ ನೋಡಬೇಕು. ಗ್ಯಾರಂಟಿ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
ಮೊದಲ ಸಂಪುಟದಲ್ಲೇ ಐದೂ ಗ್ಯಾರಂಟಿಗಳ ಕುರಿತು ಮೇ 20ರಂದು ಚರ್ಚೆ ಮಾಡಲಾಗಿತ್ತು. ಎಲ್ಲ ಐದು ಯೋಜನೆಗಳನ್ನೂ ಜಾರಿ ಮAಡಲು ತಾತ್ವಿಕ ಒಪ್ಪಿಗೆಯನ್ನು ಮಾತ್ರ ನೀಡಲಾಯಿತು. ಆ ಯೋಜನೆಗಳ ಜಾರಿಗೆ ಅಗತ್ಯ ಅಂಕಿ ಅಂಶ, ಫಲಾನುಭವಿಗಳ ಮಾಹಿತಿ, ಹಣಕಾಸಿನ ಲೆಕ್ಕಾಚಾರದ ನಂತರ ಮಾರ್ಗಸೂಚಿ ಹೊರಡಿಸಲು ನಿರ್ಧಾರ ಮಾಡಲಾಗಿತ್ತು.
ಮೊದಲ ಸಂಪುಟದಲ್ಲೇ ಜಾರಿ ಎಂದಿದ್ದ ಕಾಂಗ್ರೆಸ್ ಇದೀಗ ಆದಷ್ಟೂ ಶೀಘ್ರವಾಗಿ ಜಾರಿ ಮಾಡುವ ಇಕ್ಕಟ್ಟಿಗೆ ಸಿಲುಕಿದೆ. ಮುಂದಿನ ಸಂಪುಟ ಸಭೆಯಲ್ಲಿ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಮೊದಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: Karnataka Election: ಸೋಲಿಗೆ 10 ಕಾರಣ ಹುಡುಕಿದ ಬಿಜೆಪಿ; ಮೊದಲ 3 ಸ್ಥಾನದಲ್ಲಿ 40%, ಲಿಂಗಾಯತ, ಗ್ಯಾರಂಟಿ!