ರಂಗಸ್ವಾಮಿ ಎಂ.ಮಾದಾಪುರ, ವಿಸ್ತಾರ ನ್ಯೂಸ್, ಮೈಸೂರು
ರಾಜಕೀಯ ಅಸ್ತಿತ್ವಕ್ಕೆ ಹೆಣಗಾಡುತ್ತಿರುವ ಹೊಸ ಮುಖಗಳ ಪೈಪೋಟಿ ಎಚ್.ಡಿ. ಕೋಟೆ ರಾಜಕೀಯವನ್ನು ರಂಗೇರಿಸಿದ್ದು, ಜೆಡಿಎಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.
ಕರ್ನಾಟಕ- ಕೇರಳ ಗಡಿ ಭಾಗವನ್ನು ಒಳಗೊಂಡ ಎಚ್.ಡಿ.ಕೋಟೆ ಪರಿಶಿಷ್ಟ ವರ್ಗಕ್ಕೆ ಮೀಸಲಾದ ಕ್ಷೇತ್ರ. ಮಾಜಿ ಶಾಸಕ ದಿವಂಗತ ಚಿಕ್ಕಮಾದು ಅವರ ಪುತ್ರ ಅನಿಲ್ ಚಿಕ್ಕಮಾದು ಹಾಲಿ ಶಾಸಕರು. ಕಾಂಗ್ರೆಸ್ ಟಿಕೆಟ್ಗಾಗಿ ಅನಿಲ್ ಚಿಕ್ಕಮಾದು, ನಾಯಕ ಸಮುದಾಯದ ಮುಖಂಡ ದೊಡ್ಡನಾಯಕ, ಕೊಳ್ಳೇಗಾಲ ಮೂಲದ ಬಾಬು ನಾಯಕ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಹಾಲಿ ಶಾಸಕ ಅನಿಲ್ ಚಿಕ್ಕಮಾದು ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ. ಆದರೆ, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಬೇಕಾದ ಸನ್ನಿವೇಶವಿದೆ.
ಗೊಂದಲ ಸೃಷ್ಟಿಸಿದ ಜೆಡಿಎಸ್ ಪಟ್ಟಿ
ಜೆಡಿಎಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಲ್ಲಿ ಮೈಸೂರು ಒಂದು. ಆದ್ದರಿಂದಲೇ ದಳಪತಿಗಳು ಪ್ರಕಟಿಸಿದ ಮೊದಲ ಪಟ್ಟಿಯಲ್ಲೇ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಎಚ್.ಡಿ.ಕೋಟೆ, ನಂಜನಗೂಡು, ನರಸಿಂಹರಾಜ, ಚಾಮರಾಜ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಈ ನಾಲ್ಕು ಕ್ಷೇತ್ರಗಳ ಪೈಕಿ ಎಚ್.ಡಿ.ಕೋಟೆ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗದೇ ಇರುವುದು ಜಿಲ್ಲೆಯಲ್ಲಿ ಅಚ್ಚರಿ ಮೂಡಿಸಿದೆ.
ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಹಾಗೂ ತುಮಕೂರು ಮೂಲದ ಉದ್ಯಮಿ ಕೃಷ್ಣನಾಯಕ ಪ್ರಬಲ ಆಕಾಂಕ್ಷಿಗಳು. ದಳಪತಿಗಳು ಜಯಪ್ರಕಾಶ್ ಹೆಸರನ್ನು ಮೊದಲ ಪಟ್ಟಿಯಲ್ಲೇ ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗುತ್ತಿತ್ತು. ವರಿಷ್ಠರ ಸೂಚನೆ ಮೇರೆಗೆ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿರುವ ಜಯಪ್ರಕಾಶ್ಗೆ ಭ್ರಮನಿರಸನವಾಗಿದೆ.
ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ಸಾ.ರಾ.ಮಹೇಶ್ ಸೂಚನೆ ಮೇರೆಗೆ ಕೊರೊನಾ ಸಂದರ್ಭದಲ್ಲಿ ಎಚ್.ಡಿ.ಕೋಟೆಗೆ ಬಂದ ಕೃಷ್ಣನಾಯಕ, ಆಹಾರ ಕಿಟ್ ವಿತರಣೆ, ಆಂಬ್ಯುಲೆನ್ಸ್ ದಾನ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ಅಪ್ಪಾಜಿ ಕ್ಯಾಂಟೀನ್ ಸ್ಥಾಪಿಸಿ ಈಗಲೂ ಮುನ್ನಡೆಸುತ್ತಿದ್ದಾರೆ. ಕೃಷ್ಣನಾಯಕ ಅವರಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆ ಸಂದರ್ಭದಲ್ಲೇ ಅಭ್ಯರ್ಥಿಯಾಗುವಂತೆ ಆಫರ್ ನೀಡಲಾಗಿತ್ತು. ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಸಾ.ರಾ.ಮಹೇಶ್ ಸಿಟ್ಟಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಅವರ ತಂಗಿ ರಂಜಿತಾ ಜೆಡಿಎಸ್ ಸೇರಿಕೊಂಡಿದ್ದಾರೆ. ಅನಿಲ್ ಅವರು ಚಿಕ್ಕಮಾದು ಅವರ ಮೊದಲ ಪತ್ನಿ ನಾಗಮ್ಮ ಅವರ ಪುತ್ರನಾದರೆ, ರಂಜಿತಾ ಅವರು ಎರಡನೇ ಪತ್ನಿ ಜಯಮ್ಮ ಅವರ ಪುತ್ರಿ. ರಂಜಿತಾ ಸೇರ್ಪಡೆ ಹುಣಸೂರಿನಲ್ಲಿ ಜಿ.ಟಿ.ದೇವೇಗೌಡ ಪುತ್ರ ಹರೀಶ್ಗೌಡರಿಗೆ ಬೆಂಬಲ ನೀಡಲು ಮಾತ್ರ ಸೀಮಿತವಾಗಲಿದೆ ಎನ್ನಲಾಗುತ್ತಿತ್ತು. ಇದೀಗ ರಂಜಿತಾ ಅವರನ್ನೇ ಎಚ್.ಡಿ.ಕೋಟೆ ಜೆಡಿಎಸ್ ಅಭ್ಯರ್ಥಿಯಾಗಲು ದಳಪತಿಗಳು ಚಿಂತನೆ ನಡೆಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಆದರೆ ಎಷ್ಟೇ ಅಳೆದು ತೂಗಿದರೂ ಜಯಪ್ರಕಾಶ್ಗೆ ಟಿಕೆಟ್ ನೀಡಿದರೆ ಮಾತ್ರ ಜೆಡಿಎಸ್ಗೆ ಅನುಕೂಲ ಎಂಬುದು ವಾಸ್ತವ.
ಬಿಜೆಪಿ ಸಂಪರ್ಕದಲ್ಲಿ ಆಕಾಂಕ್ಷಿಗಳು
ಒಂದು ವೇಳೆ ರಂಜಿತಾ ಜೆಡಿಎಸ್ ಅಭ್ಯರ್ಥಿಯಾದರೆ ಜಯಪ್ರಕಾಶ್ ಹಾಗೂ ಕೃಷ್ಣನಾಯಕ ಬಂಡಾಯ ಏಳುವುದು ಸಹಜ. ಇಬ್ಬರಲ್ಲಿ ಒಬ್ಬರು ಬಿಜೆಪಿ ಅಭ್ಯರ್ಥಿಯಾಗಬಹುದು. ತಂದೆ ಚಿಕ್ಕಣ್ಣ ಹಾಗೂ ಮಗ ಜಯಪ್ರಕಾಶ್ ಇಬ್ಬರೂ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗೆ ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ವಿಸ್ತಾರ ನ್ಯೂಸ್ಗೆ ಗೊತ್ತಾಗಿದೆ.
ಮತ್ತೊಂದೆಡೆ, ಜೆಡಿಎಸ್ ಆಕಾಂಕ್ಷಿಯಾದ ಕೃಷ್ಣ ನಾಯಕ ಕೂಡ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಕೊನೆ ಕ್ಷಣದಲ್ಲಿ ಕಮಲ ಮುಡಿದು ಕ್ಷೇತ್ರದ ಕಲರ್ ಹೆಚ್ಚಿಸುವ ಹಂಬಲದಲ್ಲಿದ್ದಾರೆ. ಸದ್ಯ ಬಿಜೆಪಿ ಟಿಕೆಟ್ಗೆ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಮಾಜಿ ಅಧ್ಯಕ್ಷ ಅಪ್ಪಣ್ಣ, ಸ್ಥಳೀಯ ಮುಖಂಡ ಕೃಷ್ಣಸ್ವಾಮಿ ಪ್ರಬಲ ಆಕಾಂಕ್ಷಿಗಳು. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ, ಮಾಜಿ ಎಂಎಲ್ಸಿ ಸಿದ್ದರಾಜು ನಿರಾಸಕ್ತಿ ಹೊಂದಿದ್ದಾರೆ. ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳೊಂದಿಗೆ ಚಾಲ್ತಿಯಲ್ಲಿರುವ ವ್ಯಕ್ತಿಗೆ ಟಿಕೆಟ್ ನೀಡಿ ಲಾಭ ಪಡೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ | GT Devegowda | ರಾತ್ರಿ ಕಾರ್ಯಾಚರಣೆ: ಸಿದ್ದರಾಮಯ್ಯ ಪಾಳಯ ಸೇರಿದ್ದ ಜೆಡಿಎಸ್ ನಾಯಕ ಮರಳಿ ಜಿ.ಟಿ. ದೇವೇಗೌಡ ಟೀಮಿಗೆ