Site icon Vistara News

Karnataka Politics : ಕರ್ನಾಟಕ ಮಿನಿ ಪಾಕಿಸ್ತಾನ ಆದೀತು, ರಾಜ್ಯ ಒಂದೇ ವರ್ಷದಲ್ಲಿ ದಿವಾಳಿ; ಬಿಜೆಪಿ ಎಚ್ಚರಿಕೆ

R AShok press meet

#image_title

ಬೆಂಗಳೂರು: ಮತಾಂತರ ನಿಷೇಧ ಕಾಯಿದೆ (Anti conversion bill) ಯನ್ನು ಹಿಂದಕ್ಕೆ ಪಡೆಯುವ ಉದ್ಧಟತನ ಮೆರೆದಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು (Congress Government) ಮಿನಿ ಪಾಕಿಸ್ತಾನ (Mini pakistan) ಮಾಡಲು ಹೊರಟಂತಿದೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ (R Ashok) ಅವರು ಆರೋಪಿಸಿದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಒಂದೇ ವರ್ಷದಲ್ಲಿ ದಿವಾಳಿಯಾಗಲಿದೆ (Karnataka politics) ಎಂದು ಎಚ್ಚರಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಜೂನ್‌ 16 (ಶುಕ್ರವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪುವಿನ ಮತಾಂತರದ ಸಿದ್ಧಾಂತಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರ ಹೊರಟಿದೆ. ಕಾಂಗ್ರೆಸ್ ಪಕ್ಷವು ಪಿಎಫ್‍ಐ, ಕೆಎಫ್‍ಡಿ ಪರವಾಗಿದೆಯೇ? ಎಂದು ಪ್ರಶ್ನಿಸಿದರು. ಈ ರೀತಿ ಜನಾದೇಶದ ದುರ್ಬಳಕೆಗೆ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.

40 ಲಕ್ಷಕ್ಕೂ ಹೆಚ್ಚು ಹಿಂದೂಗಳ ಮತಾಂತರ

ʻʻರಾಜ್ಯದಲ್ಲಿ ನೀವು ಯಾರ ಪರ ಇದ್ದೀರಿ?ʼʼ ಎಂದು ಪ್ರಶ್ನಿಸಿದ ಮಾಜಿ ಸಚಿವ ಆರ್.‌ ಅಶೋಕ್‌, 30ರಿಂದ 40 ಲಕ್ಷಕ್ಕೂ ಹಿಂದೂಗಳು ದುಡ್ಡಿನ ಆಮಿಷ, ಲವ್ ಜಿಹಾದ್‌ಗೆ ಒಳಗಾಗಿ ಮತಾಂತರ ಆಗಿದ್ದಾರೆ ಎಂಬ ಮಾಹಿತಿ ಇದೆ. ಕೆಲವರು ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಆಗದೆ ಮತಾಂತರ ಆದ ಬಗ್ಗೆಯೂ ವರದಿಗಳಿವೆ ಎಂದು ಆಪಾದಿಸಿದರು.

ʻʻಬಲವಂತದ ಮತಾಂತರ ಸಲ್ಲದು ಎಂಬ ಭಾವನೆ ಹಾಗೂ ನಿಲುವನ್ನು ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರು ಹೊಂದಿದ್ದರು. ಮತಾಂತರ ಆಗುವುದಾದರೆ ಕಾನೂನು ಪ್ರಕಾರ ಆಗಬೇಕೆಂದು ನಾವು ನಮ್ಮ ಕಾನೂನಿನಲ್ಲಿ ಹೇಳಿದ್ದೇವೆ. ಇದರಲ್ಲಿ ತಪ್ಪೇನಿದೆ?ʼʼ ಎಂದು ಅಶೋಕ್‌ ಪ್ರಶ್ನಿಸಿದರು.

ಟಿಪ್ಪು ಕೊಡಗಿನಲ್ಲಿ 50ರಿಂದ 60 ಸಾವಿರ ಜನರನ್ನು ಮತಾಂತರ ಮಾಡಿದ್ದ. ಆತನನ್ನು ವೈಭವೀಕರಿಸಿ ಅವನ ಜಯಂತಿ ಮಾಡಿದರು. ಗಲಭೆಗೆ ಕಾರಣರಾದರು ಎಂದು ಟೀಕಿಸಿದ ಅವರು, ಈ ಕಾಯ್ದೆ ವಾಪಸ್ ಪಡೆಯಬಾರದು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದರು. ಮತಬ್ಯಾಂಕಿಗಾಗಿ, ಒಂದು ಸಮುದಾಯದವರನ್ನು ಓಲೈಸಲು ಈ ಕಾಯ್ದೆ ಹಿಂದಕ್ಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಓಟಿಗೋಸ್ಕರ ಯಾವ ಹಂತಕ್ಕಾದರೂ ಹೋಗುತ್ತದೆ ಎಂದು ವ್ಯಂಗ್ಯವಾಡಿದರು.

ದಲ್ಲಾಳಿಗಳಿಗೆ ಲಾಭ ಮಾಡಲು ಕಾಂಗ್ರೆಸ್‌ ಹುನ್ನಾರ

ಎಪಿಎಂಸಿ ತಿದ್ದುಪಡಿ ಕಾಯಿದೆಯನ್ನು ಹಿಂದೆ ಪಡೆದ ನಿಲುವನ್ನೂ ಆಕ್ಷೇಪಿಸಿದ ಅವರು, ʻʻಹಿಂದೆ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಎಪಿಎಂಸಿ ಆರಂಭವಾಗಿತ್ತು. ಅದೊಂದು ರೀತಿಯ ಗುತ್ತಿಗೆ ಕೊಡುವ ಪ್ರಯತ್ನ. ದಲ್ಲಾಳಿಗಳು ಗೇಟಿನಲ್ಲೇ ನಿಂತು ಖರೀದಿಸಿ ಲಾಭ ಮಾಡುವ ವ್ಯವಸ್ಥೆ ಅದು. ನಾವು ಮಾಡಿದ ತಿದ್ದುಪಡಿಯಡಿ ದೇಶದ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಇದೆ. ರೈತರಿಗೆ ಸಾವಿರಾರು ಕೋಟಿ ಆದಾಯ ಸಿಗಬೇಕೇ? ಅಥವಾ ಎಪಿಎಂಸಿಗೆ ಲಾಭ ಆಗಬೇಕೇ? ದಲ್ಲಾಳಿಗಳ ಲಾಭ ಹೆಚ್ಚಬೇಕೇ?ʼʼ ಎಂದು ಕೇಳಿದರು.

ʻʻಎಪಿಎಂಸಿ ಕಾಯಿದೆ ಹಿಂಪಡೆದುದರ ಹಿಂದೆ ದಲ್ಲಾಳಿಗಳಿಗೆ ಉಪಯೋಗ ಮಾಡುವ ಹುನ್ನಾರ ಇದೆʼʼ ಎಂದು ಹೇಳಿದ ಅಶೋಕ್‌, ದಲ್ಲಾಳಿಗಳು ತೂಕದಲ್ಲೇ ವ್ಯತ್ಯಾಸ ಮಾಡುತ್ತಿದ್ದರು. ಆದರೆ, ನಾವು ತಕ್ಕಡಿಯನ್ನು ರೈತರ ಕೈಗೆ ಕೊಟ್ಟಿದ್ದೆವು. ಆದರೆ ಈಗ ಕಾಂಗ್ರೆಸ್, ದಲ್ಲಾಳಿಗಳ ರಾಜ್ಯ ಮಾಡಲು ಹೊರಟಿದೆʼʼ ಎಂದು ಆಕ್ಷೇಪಿಸಿದರು.

ಪಠ್ಯ ಬದಲಾವಣೆಯಿಂದ ಕೆಟ್ಟ ಸಂದೇಶ ರವಾನೆ

ʻʻರಾಜ್ಯದಲ್ಲಿ ಪಠ್ಯಪುಸ್ತಕ ಬದಲಾವಣೆ ಬಗ್ಗೆ ತರಾತುರಿ ಸಲ್ಲದು. ಏಕಾಏಕಿ ಮಕ್ಕಳಿಗೆ ತೊಂದರೆ ಕೊಡುವ ಉದ್ದೇಶ ನಿಮ್ಮದು. ಜತೆಗೆ ನಿಮ್ಮ ಸಿದ್ಧಾಂತ ಹೇರುವ ಪ್ರಯತ್ನ ಮಾಡಿದ್ದೀರಿ. ಇದರಿಂದ ಕೆಟ್ಟ ಸಂದೇಶ ಕೊಟ್ಟಿದ್ದೀರಿʼʼ ಎಂದು ಅಶೋಕ್‌ ಆಕ್ಷೇಪಿಸಿದರು.

ವಿದ್ಯುತ್‌ ದರ ಏರಿಕೆಯಿಂದ ಕೈಗಾರಿಕೆಗಳು ಗುಳೆ

ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗುವ ಮಾತು ಕೇಳುತ್ತಿದೆ. 10 ರೂ. ಕೊಟ್ಟು 20 ರೂ. ಕಿತ್ತುಕೊಳ್ಳುವ ಗ್ಯಾರಂಟಿ ವ್ಯವಸ್ಥೆಯನ್ನು ಕಾಂಗ್ರೆಸ್ ಸರಕಾರ ಜಾರಿ ಮಾಡುತ್ತಿದೆ ಎಂದ ಅವರು, “ಏಯ್ ಮಹದೇವಪ್ಪ ನಿನಗೂ ಫ್ರೀ, ನನಗೂ ಫ್ರೀ; ಕಾಕಾ ಪಾಟೀಲ್ ನಿನಗೂ ಫ್ರೀ” ಎಂದಿದ್ದರು. ಕಂಡಿಷನ್ ಅಪ್ಲೈ ಎಂದಿದ್ದೀರಾ? ಈಗ ಹೊಸ ಮನೆಗೆ ಒಂದು, ಸರಾಸರಿ ಎಂಬ ಕಂಡಿಷನ್ ಹಾಕುತ್ತೀರಿ. ಠೇವಣಿ ಶೇ 65ರಷ್ಟು ಹೆಚ್ಚಳ ಮಾಡಿದ್ದಾರೆ. ತಾತ್ಕಾಲಿಕ ಸಂಪರ್ಕಕ್ಕೆ ಶೇ 70ರಷ್ಟು ಠೇವಣಿ ಸಂಗ್ರಹ ಮಾಡಲಾಗುತ್ತಿದೆ ಎಂದು ಅಶೋಕ್‌ ಟೀಕಿಸಿದರು.

ಕೇಂದ್ರ ಸರ್ಕಾರವೇನು ಅತ್ತೆ ಮನೆಯೇ?

ಕೇಂದ್ರವು ಅಕ್ಕಿ ವಿಚಾರದಲ್ಲಿ ಸಮಸ್ಯೆ ತಂದೊಡ್ಡಿದೆ ಎಂದರೆ, ಕೇಳಿದೊಡನೆ ಕೊಡಲು ಕೇಂದ್ರ ಎಂದರೆ ಅತ್ತೆ ಮನೆಯೇ? ಘೋಷಿಸುವ ಮೊದಲೇ ನಿಮಗೆ ಜ್ಞಾನ, ಪ್ರಜ್ಞೆ ಇರಲಿಲ್ಲವೇ? ನಾಳೆ ಕರ್ನಾಟಕವನ್ನು ಮಾರಾಟ ಮಾಡುತ್ತೇವೆ ಎಂದರೆ ಕೇಂದ್ರ ಎಸ್ ಎನ್ನಬೇಕೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಬಿಜೆಪಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಮಾತುಗಳನ್ನು ಖಂಡಿಸಿದರು.

ಇನ್ನೊಂದು ವರ್ಷದಲ್ಲಿ ದಿವಾಳಿ ಖಚಿತ

‘ಊಟಕ್ಕೆ ಕೂತರೆ ನಂದೂ ನಂದೇ; ನಿನ್ನದೂ ನಂದೇ’ ಎಂಬಂತಾಗಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ 1 ಲಕ್ಷದ 10 ಸಾವಿರ ಕೋಟಿ ಹಣ ಬೇಕು. ರಾಜ್ಯ ಇನ್ನೊಂದು ವರ್ಷದಲ್ಲಿ ದಿವಾಳಿ ಆಗಲಿದೆ. ಕಾನೂನನ್ನು ಎಲ್ಲರೂ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಅಂಗನವಾಡಿ, ಸಣ್ಣ ಕೈಗಾರಿಕೆ, ಸ್ತ್ರೀಶಕ್ತಿ ಸಂಘಗಳ ಗಲಾಟೆ ಮುಂದುವರೆಯುವಂತಾಗಿದೆ. ಇದು ಕಾಂಗ್ರೆಸ್ ಪಕ್ಷದ ಅಜಾಗರೂಕತೆಯ ಸೃಷ್ಟಿ ಎಂದು ಟೀಕಿಸಿದರು.

ಎಲ್ಲ ಕಡೆ ಅರಾಜಕತೆ ಸೃಷ್ಟಿ

ಶಕ್ತಿ ಯೋಜನೆಯಿಂದಾಗಿ ಆಟೋ, ಟ್ಯಾಕ್ಸಿಯವರಿಗೂ ಸಮಸ್ಯೆಯಾಗಿದೆ. ಅವರು ಬೀದಿಗೆ ಇಳಿಯುವಂತಾಗಿದೆ. ಮಾನ ಮರ್ಯಾದೆ ಇದ್ರೆ ಯೋಚನೆ ಮಾಡಿ ಇದನ್ನು ಜಾರಿಗೊಳಿಸಬೇಕಿತ್ತು ಎಂದು ತಿಳಿಸಿದರು. ಕೇವಲ ಮತಕ್ಕಾಗಿ ಏನೇನು ಮಾಡಬಹುದು ಎಂಬುದನ್ನು ಕಾಂಗ್ರೆಸ್ ಮಾಡಿ ತೋರಿದೆ ಎಂದು ನುಡಿದರು.

ರಾಜ್ಯಾದ್ಯಂತ ಪ್ರತಿಭಟನೆ, ಸ್ವರೂಪ ಜೂನ್‌ 19ರಂದು ನಿರ್ಧಾರ

ಕಾಂಗ್ರೆಸ್ ಪಕ್ಷದ ತನ್ವೀರ್ ಸೇಠ್, ಶ್ಯಾಮನೂರು ಶಿವಶಂಕರಪ್ಪ ಅವರೇ ಕಾಂಗ್ರೆಸ್ ಸರಕಾರದ ನೀತಿಯನ್ನು ಪ್ರಶ್ನೆ ಮಾಡುವಂತಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಈ ಕ್ಯಾಬಿನೆಟ್ ನಿರ್ಧಾರ ಮಾಡಿದ್ದಾರೆ. ಇವುಗಳ ವಿರುದ್ಧ ವಿಧಾನಸಭೆ ಹೊರಗೆ ಮತ್ತು ಒಳಗಡೆ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್, ಟಿಪ್ಪು ಆಡಳಿತವನ್ನು ಜಾರಿಗೊಳಿಸಲು ಹೊರಟಿದೆ. ಕಾಂಗ್ರೆಸ್ ದುರಾಡಳಿತ, ಅರಾಜಕತೆ, ಗ್ಯಾರಂಟಿ ವಿಚಾರದಲ್ಲಿ ಕಂಡಿಷನ್, ವಿವಿಧ ಕಾಯ್ದೆಗಳ ಹಿಂತೆಗೆತದ ನಿರ್ಧಾರವನ್ನು ಖಂಡಿಸಿ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ 19ರಂದು ಆಂದೋಲನದ ಕುರಿತು ಸಭೆ ನಡೆಸಲಿದೆ ಎಂದು ಆರ್.ಅಶೋಕ್ ಅವರು ಪ್ರಕಟಿಸಿದರು. ಬಳಿಕ ಜನಾಂದೋಲನ ರೂಪಿಸಲಿದ್ದೇವೆ ಎಂದರು.

ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : BJP Politics : ಮತ್ತೆ ಪ್ರತಾಪ ತೋರಿದ ʻಸಿಂಹʼ; ಈ ಬಾರಿ ಬೊಮ್ಮಾಯಿಯೇ ನೇರ ಟಾರ್ಗೆಟ್‌!

Exit mobile version