ಬೆಳಗಾವಿ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಜತೆ ನಾನು ಮಾತನಾಡಿದ್ದು ನಿಜ.
ನನಗೆ ಸುಳ್ಳು ಹೇಳುವ ಚಟವಿಲ್ಲ. ದಿನನಿತ್ಯ ಕುಮಾರಸ್ವಾಮಿ ನನ್ನ ಜತೆ ಫೋನ್ ಮೂಲಕ ಟಚ್‌ನಲ್ಲಿ ಇದ್ದಾರೆ. ಆದರೆ, ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಈ ಮೂಲಕ ರಾಜ್ಯ ರಾಜಕಾರಣದಲ್ಲಿ (Karnataka Politics) ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ತಾಲೂಕಿನ ಬೆಳಗುಂದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನಸ್ಸಿಗೆ ಬೇಸರವಾಗಿರುವುದರಿಂದ ಕಳೆದ ಒಂದು ವರ್ಷದಿಂದ ನಾನು ಮಾಧ್ಯಮದವರಿಂದ ದೂರವೇ ಇದ್ದೆ. ಆದರೆ, ಇಂದು ಅನಿವಾರ್ಯವಾಗಿ ಈ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತಿದ್ದೇನೆ. ಬಿಜೆಪಿಯನ್ನು ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಈ ಮೂಲಕ ರಮೇಶ್ ಜಾರಕಿಹೊಳಿ ಅವರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆಂಬ ಮಾತುಗಳಿಗೆ ಬ್ರೇಕ್ ಹಾಕಿದ್ದಾರೆ.
ಲಾಬಿ ಮಾಡುವ ಮನುಷ್ಯ ನಾನಲ್ಲ
ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಒಂದು ವರ್ಷದಿಂದ ನಾನು ಹೇಳುತ್ತಾ ಬಂದಿದ್ದೇನೆ. ಈವರೆಗೂ ಒಬ್ಬರ ಮನೆಗೂ ನಾನು ಮಂತ್ರಿ ಮಾಡಿ ಎಂದು ಕೇಳಿಕೊಂಡು ಹೋಗಿಲ್ಲ. ಆದರೂ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿ ಲಾಬಿ ಮಾಡುತ್ತಿದ್ದಾರೆಂದು ಸುದ್ದಿ ಬರುತ್ತಿದೆ. ಆದರೆ, ನಾನು ಲಾಬಿ ಮಾಡುವ ಮನುಷ್ಯನಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಮಾಡಿದ್ದು ನಾನು ಅಲ್ಲ ನಾವು!
ಈಗ ರಚನೆಯಾಗಿರುವ ಬಿಜೆಪಿ ಸರ್ಕಾರವನ್ನು ಮಾಡಿದವರು ನಾವು ಎಂದು ಹೇಳಿದ ರಮೇಶ್ ಜಾರಕಿಹೊಳಿ, ನಾನು ಅಲ್ಲ, ನಾವು ಎಂಬ ಪದವನ್ನು ಒತ್ತಿ ಹೇಳಿದರು. ನಾನು ಹೋಗಿ ಬಯೋಡೇಟಾ ತಗೆದುಕೊಂಡು ಮಂತ್ರಿ ಮಾಡಿ ಎಂದು ಕೇಳಿಕೊಳ್ಳುವಷ್ಟು ಕೆಳ ಮಟ್ಟಕ್ಕೆ ಇಳಿದಿಲ್ಲ. ಹೈಕಮಾಂಡ್ ಯಾವಾಗ ಮಂತ್ರಿ ಮಾಡುತ್ತಾರೋ ಮಾಡಲಿ, ಬೇಕಾದರೆ ಬಿಡಲಿ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದ ರಮೇಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ | Politics | ಜಾತಿ, ಧರ್ಮಗಳ ಮಧ್ಯೆ ರಾಜಕಾರಣಿಗಳು ಜಗಳ ಹಚ್ಚುತ್ತಿದ್ದಾರೆ: ಬಾಳೆಹೊನ್ನೂರು ರಂಭಾಪುರಿ ಶ್ರೀ