Site icon Vistara News

Karnataka Politics : ಕಳ್ಳತನ ಆಗಿರೋ ಮನೆಗೆ ಮತ್ತೆ ಹಣ ಹಾಕ್ತಾರಾ? ಅನುದಾನ ವಾಪಸ್‌ ಸಮರ್ಥಿಸಿಕೊಂಡ ಕುಸುಮಾ!

muniratna and kusuma ravi

ಬೆಂಗಳೂರು: ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರಕ್ಕೆ (RR Nagar Assembly Constituency) ಬಿಜೆಪಿ ಸರ್ಕಾರ ನೀಡಿದ್ದ ಅನುದಾನವನ್ನು ವಾಪಸ್‌ ತೆಗೆದುಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಆ ಕ್ಷೇತ್ರದ ಶಾಸಕ ಮುನಿರತ್ನ (MLA Munirathna) ಅವರು ಬುಧವಾರ (ಅಕ್ಟೋಬರ್‌ 11) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿರುವುದನ್ನು ಆರ್‌ ಆರ್‌ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ರವಿ (Kusuma Ravi) ಖಂಡಿಸಿದ್ದಾರೆ. ಜನರು ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಳ್ಳಲಿ, ಅದು ಬಿಟ್ಟು ನಾಟಕ ಮಾಡುವುದು ಬೇಡ ಎಂದು ಹೇಳಿದ್ದಾರೆ. ಅಲ್ಲದೆ, ಕಳ್ಳತನ ಆಗಿರುವ ಮನೆಗೆ ಮತ್ತೆ ಹಣ ಹಾಕುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ತಾವು ರಾಜ್ಯ ರಾಜಕಾರಣದಲ್ಲಿಯೇ (Karnataka Politics) ಇರುವ ಸುಳಿವನ್ನು ನೀಡಿದ್ದಾರೆ.

ಈ ಬಗ್ಗೆ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಕುಸುಮಾ ರವಿ, ಮುನಿರತ್ನ ಅವರಿಗೆ ಜನ ಮತ್ತೊಮ್ಮೆ ಅವಕಾಶ ಕೊಟ್ಟಿದ್ದಾರೆ. ಅದನ್ನು ಉಪಯೋಗಿಸಿಕೊಂಡು ಜನರಿಗಾಗಿ ಕೆಲಸ ಮಾಡಬೇಕು. ಹೀಗೆ ನಾಟಕಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

2013ರಲ್ಲಿ ಮುನಿರತ್ನ ಏನು ಮಾಡಿದ್ದರು?

ಆರ್ ಆರ್ ನಗರ ಕ್ಷೇತ್ರದ ಅನುದಾನವನ್ನು ಬೇರೆ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಅಂತ ಈಗ ಮುನಿರತ್ನ ಹೇಳುತ್ತಾ ಇದ್ದಾರೆ. ಈ ಹಿಂದೆ ಅಂದರೆ 2013 -14ರಲ್ಲಿ ಮುನಿರತ್ನ ಏನು ಮಾಡಿದ್ದರು ಅಂತ ಅವರನ್ನು ಕೇಳಬೇಡವೇ? ಆರ್ ಆರ್ ನಗರ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ನಡೆದಿವೆ. ಕೆಲಸಗಳು ಆಗದೆ ಬಿಲ್ ಆಗಿವೆ ಅಂತ ಲೋಕಾಯುಕ್ತಾ ವರದಿ ನೀಡಿದೆ. 120 ಕೋಟಿ ರೂಪಾಯಿಯಷ್ಟು ಕಳಪೆ ಕಾಮಗಾರಿ ನಡೆದಿದೆ. ಆ ಬಗ್ಗೆ ತನಿಖೆ ನಡೆಯುತ್ತಿವೆ. ಕಳ್ಳತನ ಆಗಿರುವ ಮನೆಗೆ ಮತ್ತೆ ಹಣ ಹಾಕುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಯಾವಾಗಲೂ ಅಭಿವೃದ್ಧಿ ಪರ ಇರುತ್ತಾರೆ ಎಂದೂ ಕುಸುಮಾ ಹೇಳಿದ್ದಾರೆ.

ಆರ್.ಆರ್. ನಗರ ಕ್ಷೇತ್ರದಲ್ಲಿ ಶಾಸಕರಿಗಿಂತ ಕುಸುಮಾ ಅವರೇ ಪ್ರಭಾವಿ ಎಂದು ಶಾಸಕ ಮುನಿರತ್ನ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಸುಮಾ, ಮುನಿರತ್ನ ಅವರ ಈ ಆರೋಪಕ್ಕೆ ನಾನು ಏನೂ ಮಾಡಲು ಸಾಧ್ಯವಿಲ್ಲ. ನನಗೂ ಜನರು ಮತ ನೀಡಿದ್ದಾರೆ. ಹಾಗಾಗಿ ಒಂದಷ್ಟು ಕೆಲಸ ಮಾಡಿಸಬೇಕು ಅಲ್ವಾ? ಅವರ ಕೈಯಲ್ಲಿ ಆಗುವುದಿಲ್ಲ ಎಂದು ಹೇಳಿದರೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಲಿ ನಾವು ನಿಭಾಯಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಬೆಂಬಲ ಕೊಡುತ್ತೇವೆ. ಆದರೆ, ಅಭಿವೃದ್ಧಿ ಮುಖವಾಡದಲ್ಲಿ ಬೇರೆ ಏನೋ ಆಗಬಾರದು ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Cauvery Water Dispute : ಜಲಾಘಾತ ನೀಡಲೇ ಕಾವೇರಿ ಪ್ರಾಧಿಕಾರ – ನಿಯಂತ್ರಣ ಸಮಿತಿ ಇದೆಯೇ? ಎಚ್‌ಡಿಕೆ ಕಿಡಿ

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ

ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಕುಸುಮಾ ಹೇಳಿದ್ದಾರೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಕುಸುಮಾ ಸ್ಪರ್ಧೆ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

ಲೋಕಸಭಾ ಸ್ಪರ್ಧೆ ವಿಚಾರ ಏಕೆ ಬಂದಿತ್ತು?

ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ವಾಪಸ್‌ ಆಗಲು ಡಿ.ಕೆ. ಸುರೇಶ್ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಅವರು ಹಲವು ಬಾರಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ಬಾರಿ ವಿಧಾನಸಭೆ ಪ್ರವೇಶ ಮಾಡುವ ಗುರಿಯನ್ನು ಅವರು ಇಟ್ಟುಕೊಂಡಿಲ್ಲ. ತಮ್ಮ ಸಹೋದರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರಿಗೆ ರಾಜ್ಯ ರಾಜಕಾರಣದಲ್ಲಿ ಸಾಥ್ ಕೊಡಲು ನಿರ್ಧಾರ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಬೇರೆ ಅಭ್ಯರ್ಥಿಯನ್ನು ತಮ್ಮ ಪರ್ಯಾಯವಾಗಿ ನಿಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆಪ್ತೆ ಕುಸುಮಾಗೆ ಕಾಂಗ್ರೆಸ್‌ ಟಿಕೆಟ್ ಎಂದು ಬಿಂಬಿತವಾಗಿತ್ತು!

ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅವರು ಡಿ.ಕೆ. ಸುರೇಶ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರ್.ಆರ್. ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ಕುಸುಮಾ ಕಣಕ್ಕಿಳಿದಿದ್ದರು. ಬಿಜೆಪಿಯ ಮುನಿರತ್ನ ವಿರುದ್ಧ ಸೋಲು ಕಂಡಿದ್ದರು. ಈಗ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಡಿ.ಕೆ. ಸುರೇಶ್ ಸಲಹೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುಸುಮಾ, ತಾವು ಲೋಕಸಭೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : BJP Protest : ರೈತರಿಗೆ 7 ಗಂಟೆ ಕರೆಂಟ್‌ ಕೊಡದಿದ್ದರೆ ವಿದ್ಯುತ್‌ ಕಚೇರಿಗಳಿಗೆ ಬೀಗ: ಬೊಮ್ಮಾಯಿ

ಅದೂ ಅಲ್ಲದೆ, ಆರ್‌ ಆರ್‌ ನಗರ ಕ್ಷೇತ್ರದಲ್ಲಿ ಈಗಿನಿಂದಲೇ ಸಕ್ರಿಯರಾಗಿ ತೊಡಗಿಕೊಂಡಿರುವ ಕುಸುಮಾ, ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಸುತ್ತಿದ್ದಾರೆ. ಹೀಗಾಗಿ ಅವರು ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.

Exit mobile version