ವಿಜಯಪುರ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಹಿಟ್ಲರ್ ಸರ್ಕಾರ ಎಂದು ಕರೆದಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹರಿಹಾಯ್ದಿದ್ದಾರೆ.
ಸಾವರ್ಕರ್ ಪ್ರತಿಷ್ಠಾನದಿಂದ ಮೈಸೂರಿನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೂ ಅಂತಿಮ ಕ್ಷಣದಲ್ಲಿ ಮುಕ್ತ ವಿವಿ ಅನುಮತಿ ನಿರಾಕರಿಸಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಧಯಪ್ರವೇಶದ ನಂತರ ಕಾರ್ಯಕ್ರಮ ಆರಂಭವಾಗಿತ್ತು. ಈ ಕುರಿತು ಕಾರ್ಯಕ್ರಮದ ವೇದಿಕೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ. ಪಾಟೀಲ್, ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಏನ್ ಮಾಡಿದ್ದಾರೆ ಕೇಳಿ. ನಾಲ್ಕು ವರ್ಷ ಸೂಲಿಬೆಲೆ ಅನಾಹುತ ಮಾಡಿದ್ದಾರೆ. ಸೂಲಿಬೆಲೆ ಮಾಡಿದ ಅನಾಹುತಗಳನ್ನ ನಾವು ಸರಿಪಡಿಸುತ್ತಿದ್ದೇವೆ. ಪಠ್ಯಪುಸ್ತಕ, ಹಿಜಾಬ್, ಹಲಾಲ್, ಅಜಾನ್ ಎಂದು ಹೇಳಿ ನಾಟಕ ಮಾಡಿದ್ದಾರೆ. ಇನ್ಮುಂದೆ ಇಂಥ ನಾಟಕ ಮಾಡಿದ್ರೆ ಜೈಲು ಕಂಬಿಯೇ ಗತಿ ಎಂದು ಎಚ್ಚರಿಕೆ ನೀಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ, ಆರ್‌ಎಸ್‌ಎಸ್ ಅಜೆಂಡಾ ನಿರ್ಮಿಸಲು ಹೋಗಿದ್ದರು. ನಂಜೆಗೌಡ-ಉರಿಗೌಡ ಸೇರಿದಂತೆ ಎಲ್ಲವನ್ನೂ ತೆಗೆದು ಹಾಕಲಾಗುವುದು. ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣ, ಪುಲೆ ಸೇರಿದಂತೆ ಮಹಾನ್ ನಾಯಕರ ಬಗ್ಗೆ ಸೇರ್ಪಡೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಎಲ್ಲೆಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಬೇರೆ ಬೇರೆ ಅಡ್ಡಾಗಳು ಇವೆ, ಎಲ್ಲವನ್ನೂ ತನಿಖೆ ಮಾಡಲಾಗುವುದು. ಕೈಗಾರಿಕೆ ಜಾಗಗಳು ಅದಕ್ಕೆ ಮಾತ್ರ ಬಳಕೆ ಆಗಬೇಕು, ರಿಯಲ್ ಎಸ್ಟೇಟ್ ದಂಧೆ ಮಾಡಲು ಬಿಡುವುದಿಲ್ಲ. ಅಕ್ರಮಗಳು ಆಗಿದ್ರೆ ತನಿಖೆ ನಡೆಸಲಾಗುವುದು. ಅಹಿಂದ ವರ್ಗದ ನಾಲ್ಕು ಬೇಡಿಕೆಗಳನ್ನು ಪಕ್ಷದಲ್ಲಿ ಚರ್ಚೆ ಮಾಡಲಾಗುವುದು. ಎಲ್ಲ ಜಾತಿ, ಧರ್ಮಗಳಿಗೂ ರಕ್ಷಣೆ ಕೊಡುವ ಕೆಲಸ ನಾವು ಮಾಡುತ್ತೇವೆ. ರಾಜಕೀಯ ಲಾಭಕ್ಕಾಗಿ ದ್ವೇಷ ಬಿತ್ತುವ ಕೆಲಸ ಮಾಡ್ತಾರೆ, ಅದನ್ನು ಖಂಡಿಸುತ್ತೇನೆ.
ಇಡಿ ರಾಜ್ಯದಲ್ಲಿ ಒಂದೇ ಒಂದು ಮನೆ ಕಟ್ಟಿಲ್ಲ, ಭಾವನೆಗಳನ್ನು ಕೆರಳಿಸುವ ಕೆಲಸ ಬಿಜೆಪಿ ಮಾಡಿದೆ. ಬಿಜೆಪಿ ಅವಧಿಯಲ್ಲಿ ಆದಂತಹ ಅಕ್ರಮ ತನಿಖೆ ಮಾಡಲಾಗುವುದು. ಕರೋನಾ ಸಂದರ್ಭದಲ್ಲಿ ಆಗಿದ್ದ 40 ಪರ್ಸೆಂಟ್, ನೀರಾವರಿ ಇಲಾಖೆ ಸೇರಿದಂತೆ ಎಲ್ಲವನ್ನೂ ತನಿಖೆ ಮಾಡುತ್ತೇವೆ. ಯೋಜನೆಗಳ ಎಷ್ಟಿಮೇಟ್ ಹೆಚ್ಚಳ ಮಾಡುವಂತಹದ್ದು ಸಹಿತ ತನಿಖೆ ಮಾಡಲಾಗುವುದು ಎಂದರು.
ಗೋಹತ್ಯಾ ಕಾಯ್ದೆಯನ್ನು ಹಿಂಪಡೆಯುವ ಕುರಿತು ಪ್ರತಿಕ್ರಿಯಿಸಿ, ಇದು ಸೂಕ್ಷ್ಮ ವಿಚಾರ. ಇದನ್ನು ನಮ್ಮ ಪಕ್ಷ ಹಾಗೂ ವರಿಷ್ಟರು ನಿರ್ಧಾರ ಮಾಡುತ್ತಾರೆ. ನಾನು ವೈಯುಕ್ತಿಕವಾಗಿ ಹೇಳಿಕೆ ನೀಡುವುದಿಲ್ಲ ಎಂದು ತಿಳಿಸಿದರು.
ಹೈದರಾಬಾದ್‌ನಲ್ಲಿ ಲಿಂಗಾಯತ ಸಮಾವೇಶ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನಿರಂತರವಾಗಿ ನಡೆಯುತ್ತದೆ. ನಾವು ಇದಕ್ಕೆ ರಾಜಕೀಯ ಬೆರೆಸಲು ಇಚ್ಚೆ ಪಡೋದಿಲ್ಲ. ಮಠಾಧೀಶರು, ಜನತೆ ಅದರಲ್ಲಿ ಭಾಗವಹಿಸ್ತಾರೆ ಎಂದರು.
ಇದನ್ನೂ ಓದಿ: Vinayak Damodar Savarkar: ಸಾವರ್ಕರ್ ಕಾರ್ಯಕ್ರಮಕ್ಕೆ ಗೇಟ್ ಬಂದ್: ಮುಕ್ತ ವಿವಿ ರಸ್ತೆಯಲ್ಲೇ ಚಿತ್ರ ಬರೆದ ಮಕ್ಕಳು