Site icon Vistara News

Karnataka Politics : ಹೊಂದಾಣಿಕೆ ಆರೋಪದ ನಡುವೆಯೇ ಅಚ್ಚರಿ ಮೂಡಿಸಿದ ಶಾಮನೂರು- ಬೊಮ್ಮಾಯಿ ಗೌಪ್ಯ ಭೇಟಿ

Shamanur Shivashankarappa and Bommai

#image_title

ದಾವಣಗೆರೆ: ಬಿಜೆಪಿಯ ಕೆಲವು ಹಿರಿಯ ನಾಯಕರು ಕಾಂಗ್ರೆಸ್‌ ನಾಯಕರ ಜತೆ ಹೊಂದಾಣಿಕೆ ರಾಜಕೀಯ (Adjustment Politics) ನಡೆಸುತ್ತಿದ್ದಾರೆ. ಇದರಿಂದಲೇ ಪಕ್ಷಕ್ಕೆ ಸೋಲಾಗಿದೆ ಎಂದು ಮೈಸೂರು ಸಂಸದ ಪ್ರತಾಪ್‌ಸಿಂಹ (MP Pratapsimha) ಅವರು ಆರೋಪ ಮಾಡಿದ ಬೆನ್ನಿಗೇ ಬಿಜೆಪಿ ಮತ್ತು ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು (Karnataka Politics) ಖಾಸಗಿಯಾಗಿ ಗೌಪ್ಯ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಬಿಜೆಪಿಯ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja Bommai) ಮತ್ತು ದಾವಣಗೆರೆ ಶಾಸಕ, ಹಿರಿಯ ಕೈ ಮುಖಂಡ ಶಾಮನೂರು ಶಿವಶಂಕರಪ್ಪ (Shamanur Shanakarappa) ಅವರು ಮಂಗಳವಾರ ಸಂಜೆ ದಾವಣಗೆರೆಯ ಹೋಟೆಲ್‌ ಒಂದರಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.

ದಾವಣಗೆರೆ ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ ಗುಪ್ತ ಮಾತುಕತೆ ನಡೆದಿದ್ದು, ರೆಸಾರ್ಟ್‌ನಲ್ಲಿ ಬಾಗಿಲು ಹಾಕಿಕೊಂಡು ಸುಮಾರು ಅರ್ಧಗಂಟೆ ಕಾಲ ಸುದೀರ್ಘ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

#image_title

ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂಬ ಚರ್ಚೆ ಬೆನ್ನಲ್ಲೇ ಸೀಕ್ರೆಟ್‌ ಮೀಟಿಂಗ್‌ ನಡೆದಿದೆ. ಮಂಗಳವಾರ ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿ ಪಕ್ಷ ಸೋಲಿಸಿದ್ದೀರಿ ಅಂತ ಆಕ್ರೋಶ ವ್ಯಕ್ತವಾಗಿತ್ತು. ಕಾರ್ಯಕರ್ತರು ರಾಜ್ಯದ ಮತ್ತು ಜಿಲ್ಲಾ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮಧ್ಯಾಹ್ನ ನಡೆದ ಕೋರ್ ಕಮಿಟಿ ಸಭೆಯಲ್ಲಿ ಗಲಾಟೆಯಾದ ಬೆನ್ನಲ್ಲೇ ಸಾಯಂಕಾಲ‌ ಮಾಜಿ ಸಿಎಂ ಬೊಮ್ಮಾಯಿ- ಶಾಮನೂರು ಭೇಟಿಯಾಗಿರುವುದು ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ.

ರಾಜಕೀಯ ಭೇಟಿಯಲ್ಲ ಎಂದ ಶಾಮನೂರು

ತಮ್ಮಿಬ್ಬರ ಭೇಟಿಯಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಇಬ್ಬರೂ ನಾಯಕರು ಹೇಳಿಕೊಂಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?

ʻʻನಾವು ಮತ್ತು ಬೊಮ್ಮಾಯಿ ಬೀಗರು. ಚುನಾವಣೆ ಆದಾಗಿನಿಂದ ನಾವು ಭೇಟಿಯಾಗಿರಲಿಲ್ಲ. ನಾನು ಗೆದ್ದಿದ್ದೀನಿ, ಅವರೂ ಗೆದ್ದಿದ್ದಾರೆ. ಅದಕ್ಕೆ ಭೇಟಿಯಾದವು. ನನಗೆ ಹಾರ ಹಾಕಿದ್ರು, ನಾನು ಶಾಲು ಹೊದಿಸಿದೆ. ನಮ್ಮ ಸಂಬಂಧ ಹೀಗೆ ಮುಂದುವರಿಯಲಿ ಎಂದು ಹೇಳಿದೆʼʼ ಎಂದಿರುವ ಶಾಮನೂರು ಶಿವಶಂಕರಪ್ಪ, ಕೆಲವೊಂದು ವಿಚಾರಗಳನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದರು

ʻʻಅವರು ಬಿಜೆಪಿಯವರು, ನಾವು ಕಾಂಗ್ರೆಸ್ ನವರು; ಏನ್ ರಾಜಕೀಯ ಮಾತುಕತೆ ಇರುತ್ತೆʼʼ ಎಂದು ಕೇಳಿದ ಅವರು, ʻʻನಾವು ಹೊಂದಾಣಿಕೆ ರಾಜಕಾರಣ ಮಾಡೋದಕ್ಕೆ ಚುನಾವಣೆ ಪೂರ್ವವಾಗಿ ಭೇಟಿಯಾಗಿಲ್ಲʼʼ ಎಂದರು.

ಹೊಂದಾಣಿಕೆ ರಾಜಕೀಯದ ಬಗ್ಗೆ ಪ್ರತಾಪ್‌ ಸಿಂಹ ಆಡಿದ ಮಾತಿಗೆ ಪ್ರತಿಕ್ರಿಯಿಸಿದ ಅವರು, ʻʻಪ್ರತಾಪಸಿಂಹ ಬಾಯಿಗೆ ಬಂದಂಗೆ ಮಾತನಾಡುತ್ತಾನೆ ಅಂತ ನಾನು ನೋಡಿದ್ದೀನಿʼʼ ಎಂದರು.

ಜಾಮದಾರ್‌ನನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು!

ಲಿಂಗಾಯತರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಶಾಮನೂರು ಪ್ರತಿಕ್ರಿಯಿಸಿ, ʻʻಅಖಿಲಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಾಮಾಜಿಕ ಸಮೀಕ್ಷೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆʼʼ ಎಂದರು.

ʻʻಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ? ಜಾಮದಾರ್ ಒಬ್ಬ ಇದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು. ಇಲ್ಲ ಅಂದ್ರೆ ನಾವೇ ಕಳಿಸುತ್ತೇವೆʼʼ ಎಂದು ಮತ್ತೆ ಪ್ರತ್ಯೇಕ ಧರ್ಮದ ಪ್ರಸ್ತಾಪ ಎತ್ತಿರುವ ನಿವೃತ್ತ ಅಧಿಕಾರಿ ಜಾಮದಾರ್‌ ಬಗ್ಗೆ ಪ್ರತಿಕ್ರಿಯಿಸಿದರು.

ಶಾಮನೂರು ಭೇಟಿಯಿಂದ ನಿಲುವು ಬದಲಾಗಲ್ಲ ಎಂದ ಬೊಮ್ಮಾಯಿ

ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ. ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ‌ ಊಟ ಮಾಡಲು ಹೊಟೆಲ್ ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ. ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೇಯೇ ಇಲ್ಲ.

ಸಿದ್ಧೇಶ್ವರ್‌ ವಿರುದ್ಧ ಕಣಕ್ಕಿಳಿಯಲು ರೆಡಿ ಎಂದ ಶಾಮನೂರು

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಾಗಿರುವ ಜಿ.ಎಂ. ಸಿದ್ದೇಶ್ವರ್‌ ಅವರನ್ನು ಈ ಬಾರಿ ಸೋಲಿಸಿಯೇ ಸಿದ್ಧ ಎಂದರು ಶಾಮನೂರು ಶಿವಶಂಕರಪ್ಪ.

ʻʻಜಿ ಎಂ ಸಿದ್ದೇಶ್ಚರ್ ಈ ಬಾರಿ ಲೋಕಸಭೆ ಚುನಾವಣೆಗೆ ಟಿಕೆಟ್ ತಗೊಂಡು ಬಂದು ನಿಲ್ಲೋಕೆ ಹೇಳಿ. ಜಿ.ಎಂ.ಸಿದ್ದೇಶ್ಚರ್ ಸೋಲೋದನ್ನು ನಾನು ನೋಡಬೇಕು. ಬೇಕಾದ್ರೆ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಕಣಕ್ಕೆ ಇಳಿಯುವವರ ಚುನಾವಣೆಗೆ ನಾನು ಫಂಡ್ ಮಾಡುತ್ತೇನೆʼʼ ಎಂದು ಹೇಳಿದರು.

ʻʻಸಂಸತ್‌ ಚುನಾವಣೆಯಲ್ಲಿ ಕಣಕ್ಕೆ ಇಳಿಯಲು ಬಹಳ ಜನ ಇದ್ದಾರೆ. ಯಾರೂ ನಿಲ್ಲೊಲ್ಲ ಅಂದ್ರೆ ನಾನೇ ಸೆಡ್ಡು ಹೊಡೆಯಲು ರೆಡಿ ಇದ್ದೇನೆ‌ʼʼ ಎಂದರು ಶಾಮನೂರು.

ʻʻಸಿದ್ದೇಶ್ವರ್‌ ಕೂಡಾ ನನಗೆ ಅಳಿಯ. ಬೊಮ್ಮಾಯಿ ಹೇಗೆ ಸಂಬಂಧಾನೋ ಅವನು ನನ್ನ ಸಂಬಂಧಿಕʼʼ ಎಂದು ಶಾಮನೂರು ಹೇಳಿದರು.

ಇದನ್ನೂ ಓದಿ : Karnataka Politics: ಮೊನ್ನೆ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ, ಇಂದು ಸಿಎಂ-ಡಿಸಿಎಂ ಭೇಟಿ: ʼಎಂಪಿʼ ಆಗಲಿದ್ದಾರ ರೇಣುಕಾಚಾರ್ಯ?

Exit mobile version