ಬೆಂಗಳೂರು: ರಾಜ್ಯ ಬಿಜೆಪಿಯೇ ಒಡೆದ ಮನೆಯಾಗಿ, ಆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರ ಸಂಪರ್ಕ ಮಾಡ್ತಿದ್ದೀರಿ ಎನ್ನುವ ಪ್ರಶ್ನೆಗೆ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ (Karnataka Politics).
ಬಿಜೆಪಿಯಲ್ಲಿ ಇಪ್ಪತ್ತು ಬಣ ಆಗಿವೆ. ಬಿಜೆಪಿ ರಾಜ್ಯದಲ್ಲಿ ಅಂತಿಮಗಟ್ಟ ತಲುಪಿದೆ. ಫಿವಿಕಲ್ ಹಾಕಿ ಅಂಟಿಸಿದರೂ ಅಂಟಿಕೊಳ್ಳುವುದಿಲ್ಲ. ಬಿಜೆಪಿಗೆ ಉಳಿಗಾಲವಿಲ್ಲ. ನಿನ್ನೆ ಯಡಿಯೂರಪ್ಪ ವಿರುದ್ಧ ರೇಣುಕಾಚಾರ್ಯ ಮಾತನಾಡಿದ್ದರು. ರೇಣುಕಾಚಾರ್ಯ ಇವತ್ತು ಬೇರೆಯವರ ವಿರುದ್ಧ ಮಾತನಾಡಿದ್ದಾರೆ. ದಿನಕ್ಕೆ ಒಬ್ಬರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: BJP Karnataka: ಬಿಜೆಪಿ ಕಚೇರಿಯಲ್ಲಿ ಕತ್ತರಿ ಹಾಕುವವರಿದ್ದಾರೆ: ವಾಗ್ದಾಳಿ ಮುಂದುವರಿಸಿದ ಹೊನ್ನಾಳಿ ರೇಣುಕಾಚಾರ್ಯ
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಕುರಿತು ಎಚ್.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್, ನಾವಿನ್ನೂ ಕೆಲಸ ಪ್ರಾರಂಭವೇ ಮಾಡಿಲ್ಲ. ಕುಮಾರಸ್ವಾಮಿ ಸರ್ಕಾರ ಇದ್ದಾಗ ಬಹಳ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಅಂತ ತೋರಿಸೋದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇನ್ನೂ ನಾವು ಸೆಟಲ್ ಆಗಿಲ್ಲ, ಸೆಟಲ್ ಆದಮೇಲೆ ಎಲ್ಲ ಕೆಲಸಗಳು ಪ್ರಾರಂಭ ಆಗುತ್ತವೆ. ವ್ಯವಸ್ಥೆ ಸ್ಟ್ರೀಮ್‌ಲೈನ್ ಆಗುವವರೆಗೆ ಇದೆಲ್ಲ ಇರುತ್ತದೆ.
ಯತೀಂದ್ರ ಹೆಸರನ್ನು ಸುಮ್ಮಸುಮ್ಮನೆ ಎಳೆದು ತರಲಾಗುತ್ತಿದೆ. ಸುಮ್ಮನೆ ಯತೀಂದ್ರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಶಿಫಾರಸು ಪತ್ರ ಕೊಟ್ಡಿದ್ದರಲ್ಲಿ ತಪ್ಪೇನಿದೆ? ಇದಕ್ಕೆ ಹಣದ ಲೇಪ ಹಚ್ಚುವುದು ಸರಿಯಲ್ಲ. ಕುಮಾರಸ್ವಾಮಿ ಸರ್ಕಾರದಲ್ಲೂ ಹೀಗೆಲ್ಲ ಆಗಿದೆ. ನಾನೂ ಸಮ್ಮಿಶ್ರ ಸರ್ಕಾರದಲ್ಲಿ ಗೃಹ ಮಂತ್ರಿ ಆಗಿದ್ದೆ. ಮಿನಿಟ್ಸ್ ಎಲ್ಲ ಕಡೆಯಿಂದಲೂ ಬಂದಿರುತ್ತವೆ. ನಿಯಮಾನುಸಾರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ ಅಂತ ಹಲವಾರು ಶಿಫಾರಸು ಪತ್ರ ಬಂದಿರುತ್ತವೆ. ನನ್ನ ಉಸ್ತುವಾರಿ ಜಿಲ್ಲೆಯಲ್ಲೂ ಹೀಗೆ ಆಗಿರುತ್ತದೆ. ಶಿಫಾರಸು ಪತ್ರ ನೀಡೋದು ಸಹಜ ಪ್ರಕ್ರಿಯೆ ಎಂದರು.
ಇದನ್ನೂ ಓದಿ: Cash for Posting: ಆಡಳಿತದಲ್ಲಿ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಎಂದ ಎಚ್.ಡಿ. ಕುಮಾರಸ್ವಾಮಿ
ವರ್ಗಾವಣೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಅವಧಿಯಲ್ಲಿ ಯಾವುದೇ ರೀತಿ ಕಾಸಿಗಾಗಿ ವರ್ಗಾವಣೆ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಸಿಎಂ ಕೂಡ ಪಾರದರ್ಶಕವಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಆದರೆ, ಕುಮಾರಸ್ವಾಮಿ ತುಂಬಾ ಆತುರವಾಗಿ ಮಾತನ್ನಾಡುತ್ತಿದ್ದಾರೆ. ಅನಗತ್ಯವಾಗಿ ಪರ್ಸೆಂಟೇಜ್ ಬಗ್ಗೆ ಮಾತಾಡ್ತಿದಾರೆ. ಸರ್ಕಾರ ಈಗ ಬಂದಿದೆ. ಹಾಗಾಗಿ ಈಗಲೇ ಸುಳ್ಳು ಮಾತನ್ನಾಡುವುದು ಸರಿಯಲ್ಲ.
ಬಿಜೆಪಿ ಸರ್ಕಾರದ ಅವಧಿಯಲ್ಲಿನ ತನಿಖೆಗೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಮಾತಿಗೆ ಬದ್ಧರಾಗಿದ್ದೇವೆ. ತನಿಖೆ ಮಾಡಿಸುತ್ತೇವೆ. ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಆಗುತ್ತದೆ. ನಮ್ಮಲ್ಲಿ ಯಾವುದೇ ಭಿನ್ನ ನಿಲುವು ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಈ ಪ್ರಕರಣಗಳ ಬಗ್ಗೆ ತನಿಖೆ ಮಾಡಿಸುತ್ತೇವೆ. ನಮ್ಮ ಸಂಪುಟದಲ್ಲಿ ಸೀನಿಯರ್ಸ್, ಜೂನಿಯರ್ಸ್ ಎಲ್ಲರೂ ಒಟ್ಟಾಗಿ ಇದ್ದೇವೆ ಎಂದರು.