ಬೆಂಗಳೂರು: ಬಿಜೆಪಿಯಲ್ಲಿರುವ ಕೆಲವು ನಾಯಕರು ತಮ್ಮ ಪಕ್ಷಕ್ಕೆ ಟಿಕೆಟ್ ಅರ್ಜಿ ಹಾಕಿದ್ದಾರೆ (Karnataka Elections) ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿರುವ ನಡುವೆಯೇ ಕಂದಾಯ ಸಚಿವ ಆರ್. ಅಶೋಕ್ ಅವರೂ ಒಂದು ಬಾಂಬ್ ಸಿಡಿಸಿದ್ದಾರೆ. ʻʻಬಿಜೆಪಿಯಿಂದ ಯಾವುದೇ ಶಾಸಕರಾಗಲೀ ಸಚಿವರಾಗಲೀ ಕಾಂಗ್ರೆಸ್ ಕದ ತಟ್ಟುತ್ತಿಲ್ಲ. ಕಾಂಗ್ರೆಸ್‌ನದೇ ಹತ್ತಕ್ಕೂ ಅಧಿಕ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆʼʼ ಎಂದು ಹೇಳಿದ್ದಾರೆ ಆರ್. ಅಶೋಕ್.
ಬೊಮ್ಮನಹಳ್ಳಿ ಸಮೀಪದ ಹೊಸಪಾಳ್ಯದಲ್ಲಿ ಸತೀಶ್ ರೆಡ್ಡಿ ಹುಟ್ಟು ಹಬ್ಬಕ್ಕೆ ಬಂದಿದ್ದ ಅಶೋಕ್ ಅವರು, ʻʻಕಾಂಗ್ರೆಸ್ ಮುಖಂಡರು ಹೇಳಿಕೆಗಳು ಹಾಸ್ಯಾಸ್ಪದವಾಗಿದೆ. ಆವತ್ತು 15 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದಾಗ ತಡೆಯಲು ಆಗಲಿಲ್ಲ. ಕಾಂಗ್ರೆಸ್ಸಿಗರು ಸರಿ ಇದ್ದರೆ ಬಿಜೆಪಿಗೆ ಯಾಕೆ ಬರುತ್ತಿದ್ದರು? ಆಗ ಕಾಂಗ್ರೆಸ್ ನಾಯಕರು ಮಣ್ಣು ತಿನ್ನುತ್ತಿದ್ದರಾ?ʼʼ ಎಂದು ತಮಾಷೆ ಮಾಡಿದರು.
ʻʻಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಆ ಪಕ್ಷಕ್ಕೆ ಯಾರು ವಲಸೆ ಹೋಗುವುದಿಲ್ಲʼʼ ಎಂದು ಅಶೋಕ್ ಹೇಳಿದರು.
ರಾಜ್ಯದ ಹಲವೆಡೆಗಳಿಂದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಸದ್ಯದಲ್ಲೇ ಶಾಸಕರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಅಶೋಕ್ ಹೇಳಿದರು.
ʻʻಕಾಂಗ್ರೆಸ್ ಪಕ್ಷದವರಿಗೆ ಈಗಲೇ ಭಯ ಶುರುವಾಗಿದೆ. ರಾಷ್ಟ್ರದ ಎಲ್ಲಾ ಕಡೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಅವರಿಗೆ ಥ್ರೆಟ್ ಆಗಿದೆ. ಅದು ಕೈ ಪಾಳಯವನ್ನು ಗುಡಿಸಿ ಹಾಕ್ತಿದೆ. ಆಮ್ ಆದ್ಮಿ ಕಾಂಗ್ರೆಸ್ ಮತವನ್ನು ಕಬಳಿಸುತ್ತಿದೆʼʼ ಎಂದು ಹೇಳಿದರು ಅಶೋಕ್.
ʻʻಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ರಾಜ್ಯಕ್ಕೆ ಬರ್ತಾರೆ ಅಂದ್ರೆ ಕಾಂಗ್ರೆಸ್ ನವರಿಗೆ ಭಯ ಶುರುವಾಗುತ್ತದೆʼʼ ಎಂದರು ಅಶೋಕ್.
ಇದನ್ನೂ ಓದಿ | Karnataka Elections | ಸಿದ್ದರಾಮಯ್ಯ ಕೊಟ್ಟಿದ್ದು ಬರೀ ಟಿಪ್ಪು ಭಾಗ್ಯ, ಅವನೆಂದರೆ ಸಾಕು ಪ್ರಾಣ ಬಿಡ್ತಾರೆ ಎಂದ ಅಶೋಕ್