ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡದೇ ಇದ್ದರೆ ವಚನ ಭ್ರಷ್ಟವಾಗುತ್ತದೆ. ಮನೆಮನೆಗೂ ತೆರಳಿ ಕಾಂಗ್ರೆಸ್‌ನ ಜನವಿರೋಧಿ ಆಡಳಿತದ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ದಾವಣಗೆರೆಯಲ್ಲಿ ಸೋಮವಾರ ಗುಡುಗಿದ್ದರು. ಬುಧವಾರ ದಿಢೀರನೆ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ.
ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದ ರೇಣುಕಾಚಾರ್ಯ, ಸರ್ಕಾರ ರಚನೆಯಾದ 24 ಗಂಟೆಯೊಳಗೆ ಯೋಜನೆ ಜಾರಿ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಆದರೆ ಒಂದು ತಿಂಗಳಾದರೂ ಒಂದೇ ಯೋಜನೆ ಜಾರಿ ಮಾಡಿದ್ದಾರೆ. ಇದರ ವಿರುದ್ಧ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತದೆ ಎಂದಿದ್ದರು. ಮಂಗಳವಾರವೂ ಮಾಧ್ಯಮಗಳ ಜತೆ ಮಾತನಾಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
ಯದ್ವಾ ತದ್ವಾ ಬಿಲ್ ಬಂದಿದೆ. ಯಾರೂ ಕರೆಂಟ್ ಬಿಲ್ ಕಟ್ಟ ಬೇಡಿ ಎಂದು ನಾನೇ ಜನರಿಗೆ ಹೇಳುತ್ತಾ ಇದ್ದೀನಿ. ಎಸ್ಕಾಂನವರು ಪೊಲೀಸರನ್ನ ಕರೆ ತಂದರೆ ನನಗೆ ಫೋನ್ ಮಾಡಿ. ದಿನಕ್ಕೊಂದು ಕಂಡಿಷನ್ ಹಾಕುತ್ತಾ ಇದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ರು. ಆದರೆ ಅದೃಷ್ಟ ಚೆನ್ನಾಗಿತ್ತು ಅಧಿಕಾರಕ್ಕೆ ಬಂದಿದ್ದಾರೆ. ಒಬ್ಬೊಬ್ಬ ಮಂತ್ರಿ ಒಂದೊಂದು ತರ ಹೇಳುತ್ತಿದ್ದಾರೆ. ಪ್ರಿಯಾಂಕಾ ಖರ್ಗೆ ಸೂಪರ್ ಸಿಎಂ ರೀತಿ ಮಾಡುತ್ತಿದ್ದಾರೆ. ಹೆಬ್ಬಾಳ್ಕರ್ ದಿನಕ್ಕೊಂದು ಹೇಳಿಕೆ ನೀಡುತ್ತಾ ಹೋಗುತ್ತಿದ್ದಾರೆ. ಕರೆಂಟ್ ಬಿಲ್ ಜಾಸ್ತಿ ಮಾಡಿ ಬಡವರಿಗೆ ಹೊರೆ ಮಾಡಿದ್ದಾರೆ. ಬಿಜೆಪಿಯವರು ಮಾಡಿದ್ದಾರೆ ಎಂದು ಈಗ ಆರೋಪ ಮಾಡುತ್ತಿದ್ದಾರೆ.ನಮ್ಮ ಅವಧಿಯ 20 ಸಾವಿರ ರೂಪಾಯಿ ಕೋಟಿ ಕಾಮಗಾರಿ ಹಣ ವಾಪಾಸ್ ತೆಗೆದುಕೊಳ್ಳೋಕೆ ಬರುತ್ತೆ, ವಿದ್ಯುತ್ ದರ ಏರಿಕೆ ಆದೇಶ ವಾಪಾಸ್ ಪಡೆಯೋಕೆ ಬರಲ್ವಾ?
ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೀರಿ, ಆದರೆ ಹಳ್ಳಿಗಾಡುಗಳಲ್ಲಿ ಇದುವರೆಗೂ ಬಸ್ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ಗಳನ್ನು ಬಿಟ್ಟಾಗ ಮಾತ್ರ ಮಹಿಳಾ ಸಬಲೀಕರಣವಾಗಲಿದೆ. ಎಲ್ಲ ಗ್ಯಾರಂಟಿಗಳಿಗೆ ಒಳ್ಳೆಯ ಹೆಸರು ಇಟ್ಟಿದ್ದೀರಿ. ನಮ್ಮ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಣ್ಣಂದಿರಾ ಸಮಾಧಾನ ಮಾಡಿಕೊಳ್ಳಿ ಎಂದು ಹೇಳ್ತಾ ಇದಾರೆ. ಅತ್ತೆ ಸೊಸೆ ನಡುವೆ ಜಗಳ ತಂದಿಟ್ಟಿದ್ದು ಯಾರಮ್ಮ ಸಹೋದರಿ? ಎಂದಿದ್ದರು.
ಸಿಎಂ-ಡಿಸಿಎಂ ಭೇಟಿ
ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಎಂ.ಪಿ. ರೇಣುಕಾಚಾರ್ಯ ಭೇಟಿ ಮಾಡಿದರು. ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನಂತರ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ರಾಜಕೀಯ ಹೊರತುಪಡಿಸಿ ನಮ್ಮ ಸಂಬಂಧ ಇದೆ. ಹೊನ್ನಾಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ವಿ. ಇದು ಒಂದು ಸೌಜನ್ಯದ ಭೇಟಿ ಎಂದರು. ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯದ ಕುರಿತು ಸಿ.ಟಿ. ರವಿ, ಪ್ರತಾಪ್ ಸಿಂಹ ಮಾತನಾಡಿದ್ದಾರಲ್ಲ ಎಂಬ ಪ್ರಶ್ನೆಗೆ, ಅವರಿಬ್ಬರೂ ಎನು ಹೇಳಿದ್ದಾರೆ ಗೊತ್ತಿಲ್ಲ. ಅವರನ್ನೆ ಕೇಳಿ , ನನಗೆ ಮಾಹಿತಿ ಇಲ್ಲ. ನಾನು ಯಾವತ್ತೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ ಎಂದರು.
ದಾವಣಗೆರೆ ಎಂಪಿ ಆಕಾಂಕ್ಷಿ?
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೀರ? ಎಂದು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ವೇಳೆ ಪ್ರಶ್ನಿಸಲಾಗಿತ್ತು. ಅದಕ್ಕೆ ಉತ್ತರಿಸಿದ್ದ ರೇಣುಕಾಚಾರ್ಯ, ಈಗ ಇರುವ ಸಂಸದ ಜಿ.ಎಂ. ಸಿದ್ದೇಶ್ವರ ಅವರೇ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯ ಇದೆ. ಅವರೇ ಅಭ್ಯರ್ಥಿ ಆಗಬೇಕೆಂಬುದು ನನ್ನ ಅಭಿಪ್ರಾಯವೂ ಆಗಿದೆ. ಅವರಾಗಿಯೇ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದರೆ ಆಗ ನೋಡೋಣ. ವರಿಷ್ಠರು ಅಭ್ಯರ್ಥಿಯನ್ನು ತೀರ್ಮಾನಿಸುತ್ತಾರೆ ಎಂದಿದ್ದರು.
ಇದೀಗ ಬೆಂಗಳೂರಿನಲ್ಲಿ ಸಿಎಂ ಹಾಗೂ ಡಿಸಿಎಂ ಭೇಟಿ ಆಗುತ್ತಿದ್ದಂತೆಯೇ, ಎಂ.ಪಿ. ರೇಣುಕಾಚಾರ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆಯೇ ಎಂಬ ಮಾತುಗಳು ಬೆಂಗಳೂರಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ದಾವಣಗೆರೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಕೊರತೆ ಇದೆ. ಉತ್ತಮ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿರುವ ಬೆನ್ನಲ್ಲೇ ರೇಣುಕಾಚಾರ್ಯ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Siddaramaiah: ಪ್ರತಾಪ್ ಸಿಂಹ ಎಳಸು, ಅವನಿಗೆ ರಾಜಕೀಯ ಪಕ್ವತೆ ಇಲ್ಲ: ಏಕವಚನದಲ್ಲೇ ಸಿದ್ದರಾಮಯ್ಯ ವಾಗ್ದಾಳಿ