Site icon Vistara News

Karnataka Politics : ಅನುದಾನ ವಾಪಸ್‌ ಪಡೆದ ಸರ್ಕಾರದ ವಿರುದ್ಧ ಮುನಿರತ್ನ ಧರಣಿ; ಬಿಎಸ್‌ವೈ ಸಾಥ್

muniratna protest infront of vidhanasoudha

ಬೆಂಗಳೂರು: ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರಕ್ಕೆ (RR Nagar Assembly Constituency) ಬಿಜೆಪಿ ಸರ್ಕಾರ ನೀಡಿದ್ದ ಅನುದಾನವನ್ನು ವಾಪಸ್‌ ತೆಗೆದುಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಆ ಕ್ಷೇತ್ರದ ಶಾಸಕ ಮುನಿರತ್ನ (MLA Munirathna) ಅವರು ಬುಧವಾರ (ಅಕ್ಟೋಬರ್‌ 11) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಮೌನ ಪ್ರತಿಭಟನೆಯನ್ನು (Silent protest) ಮುಂದುವರಿಸಿದ್ದಾರೆ. ಇವರಿಗೆ ಈಗ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ (Former CM BS Yediyurappa) ಆಗಮಿಸಿ ಸಾಥ್‌ ನೀಡಿದ್ದು, ಮುನಿರತ್ನ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ರಾಜ್ಯ ರಾಜಕೀಯದಲ್ಲಿ (Karnataka Politics) ದ್ವೇಷದ ರಾಜಕಾರಣವನ್ನು (Hate politics) ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ ಎಂಬ ಆರೋಪವನ್ನೂ ಮಾಡಲಾಗುತ್ತಿದೆ.

ಈ ಹಿಂದೆ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಬಿಜೆಪಿ ಶಾಸಕರ ಕ್ಷೇತ್ರದಿಂದ ಅನುದಾನವನ್ನು ವಾಪಸ್‌ ಪಡೆದಿರುವ ಸರ್ಕಾರ ತಮ್ಮದೇ ಪಕ್ಷದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ (Constituency of Congress MLAs) ವರ್ಗಾಯಿಸಿದೆ. ಇದೇ ವೇಳೆ ಆರ್.ಆರ್. ನಗರಕ್ಕೆ ನೀಡಲಾಗಿದ್ದ 126 ಕೋಟಿ ರೂಪಾಯಿ ಅನುದಾನವನ್ನೂ ವಾಪಸ್ ಪಡೆದು ಆದೇಶವನ್ನು ಹೊರಡಿಸಲಾಗಿರುವುದನ್ನು ಶಾಸಕ ಮುನಿರತ್ನ ತೀವ್ರವಾಗಿ ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬುಧವಾರ ಸರ್ಕಾರದ ವಿರುದ್ಧ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದಾರೆ.‌

ಇದನ್ನೂ ಓದಿ: Karnataka Weather : ಬೆಂಗಳೂರಿನಲ್ಲಿ ಭರ್ಜರಿ ಮಳೆ; ದಕ್ಷಿಣ ಒಳನಾಡು, ಕರಾವಳಿಯಲ್ಲಿ ಸಾಧಾರಣ ಪ್ರದರ್ಶನ

ಮಾಜಿ ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್ ಜತೆಗೆ ಮುನಿರತ್ನ ಆಗಮಿಸಿದ್ದರು. ಬಂದ ತಕ್ಷಣವೇ ಗಾಂಧಿ ಪ್ರತಿಮೆಗೆ ಕೈ ಮುಗಿದ ಮುನಿರತ್ನ ಅವರು ಅಲ್ಲಿಯೇ ಎದುರು ಕುಳಿತು ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಚಲುವಾದಿ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಬಿಟ್ಟರೆ ಮುನಿರತ್ನ ಅವರ ಜತೆ ಬಿಜೆಪಿಯ ಯಾವ ದೊಡ್ಡ ಮಟ್ಟದ ನಾಯಕರು, ಬೆಂಗಳೂರು ಶಾಸಕರು ಸಹ ಕೈಜೋಡಿಸಿರಲಿಲ್ಲ. ಆದರೆ, ಸ್ವಲ್ಪ ಹೊತ್ತಿನ ತರುವಾಯ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಪ್ರತಿಭಟನೆಗೆ ಆಗಮಿಸಿ ಮುನಿರತ್ನ ಅವರ ಬೆನ್ನಿಗೆ ನಿಂತಿದ್ದಾರೆ.

ಮುನಿರತ್ನ ಅವರು ಬಿಜೆಪಿ ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದರೆ, ಜೆಡಿಎಸ್‌ ಕಾರ್ಯಕರ್ತರು ಆ ಪಕ್ಷದ ಬಾವುಟ ಹಿಡಿದು ಆಕ್ರೋಶವನ್ನು ಹೊರಹಾಕಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ಅವರ ಫೋಟೊ ಇರುವ ಪ್ಲೆಕಾರ್ಡ್‌ಗಳನ್ನು ಹಿಡಿದುಕೊಂಡಿದ್ದು, “ಬೇಕೇ ಬೇಕು, ನ್ಯಾಯ ಬೇಕು”, “ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ನೀಡುವುದು ಬೇಡವೇ?”, “ಕೆರೆಕೋಡಿ ಅಂಡರ್‌ ಪಾಸ್‌ ನಿರ್ಮಾಣ ಬೇಡವೇ?”, 2024ರ ಚುನಾವಣೆಗೆ ರಾಜರಾಜೇಶ್ವರಿ ಕ್ಷೇತ್ರದ ಜನರ ಮತ ನಿಮಗೆ ಬೇಡವೇ?’ ಎಂದು ಪ್ರಶ್ನೆ ಮಾಡಿದ್ದಾರೆ.

ಏನಿದು ಗಲಾಟೆ?

ಆರ್. ಆರ್ ನಗರ ಸೇರಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಳೆದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಇವರಲ್ಲಿ ಬಿಜೆಪಿಯ ಶಾಸಕರೊಬ್ಬರ ಕ್ಷೇತ್ರವೂ ಸೇರಿದೆ. ಅಂದರೆ, ಯಶವಂತಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್‌ ಅವರ ಕ್ಷೇತ್ರಕ್ಕೂ ಅನುದಾನವನ್ನು ನೀಡಲಾಗಿದೆ.

ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ 485 ಕೋಟಿ ರೂಪಾಯಿಗಳ ಅನುದಾನವನ್ನು ಕಾಂಗ್ರೆಸ್‌ ಸರ್ಕಾರ ಈಗ ವಾಪಸ್‌ ಪಡೆದಿದೆ. ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇದು ಈಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಇದನ್ನೂ ಓದಿ: OPS News : ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಹಳೆ ಪಿಂಚಣಿ ಜಾರಿ ಬಗ್ಗೆ ಸಿಎಂ BIG Update

ಶಾಸಕರ ಹತ್ತಿಕ್ಕುವ ಕೆಲಸ ನಡೆಯುತ್ತಿದೆ

ಚಲುವಾದಿ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ಸರ್ಕಾರ ನೀಡಿದ್ದ ಅನುದಾನವನ್ನು ಕಾಂಗ್ರೆಸ್‌ನವರು ತಡೆದಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಸಹಿಸದೆ, ಬಿಡುಗಡೆ ಮಾಡಿದ್ದ ಅನುದಾನವನ್ನು ವಾಪಸ್‌ ಪಡೆದಿದ್ದಾರೆ. ನಮ್ಮ ಶಾಸಕರನ್ನು ಸೆಳೆಯುವ ಮತ್ತು ಒಪ್ಪಿದಿದ್ದಾಗ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಶಾಸಕ ಮುನಿರತ್ನ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಈ ರೀತಿ ನಡೆದುಕೊಂಡಿಲ್ಲ. ಡಿ.ಕೆ. ಸುರೇಶ್ ಸಂಸದರು ಸಹ ಆಗಿದ್ದಾರೆ. ಆದರೆ, ಕೈಜೋಡಿಸುವುದು ಬಿಟ್ಟು ಹಣ ದುರುಪಯೋಗ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Exit mobile version