Site icon Vistara News

Karnataka Politics:‌ ಮತ್ತೊಂದು ಭಾರೀ ಹಗರಣ? ಬಿಜೆಪಿ ಕಾಲದ ಗಂಗಾ ಕಲ್ಯಾಣ ಅಕ್ರಮ ತನಿಖೆ ಹೊಣೆ ಸಿಐಡಿಗೆ; ಪೊಲೀಸ್‌ ಇಲಾಖೆಗೆ ಬಿಸಿ

police commissioner

ಬೆಂಗಳೂರು: ಬಿಜೆಪಿ ಆಡಳಿತ ಕಾಲದ ಹಗರಣಗಳ ತನಿಖೆಗೆ ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು, ಪಿಎಸ್‌ಐ ಹಾಗೂ ಶಿಕ್ಷಕರ ನೇಮಕಾತಿಯಂತೆ ರಾಜ್ಯದಲ್ಲಿ ಮತ್ತೊಂದು ಭಾರೀ ಹಗರಣ ಬಯಲಾಗುವ ಸಾಧ್ಯತೆ ಕಂಡುಬಂದಿದೆ.

ವಿಧಾನಸೌಧ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಈ ಸೂಚನೆ ದೊರೆತಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿಯ ಗಂಗಾ ಕಲ್ಯಾಣ ಯೋಜನೆ ಅಕ್ರಮ‌ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಇದನ್ನು ಶೀಘ್ರವೇ ಸಿಐಡಿಗೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಸದ್ಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಮೂವರು ಅಧಿಕಾರಿಗಳು ಹಾಗೂ ಇತರರು ಎಂದು ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ.

ಈಗ ಕೇವಲ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಾತ್ರ ದೂರು ದಾಖಲಾಗಿದ್ದು, ಸಿಐಡಿಗೆ ವರ್ಗಾವಣೆಯಾದ ಬಳಿಕ ಇತರ ಅಭಿವೃದ್ಧಿ ನಿಗಮಗಳ ಗಂಗಾ ಕಲ್ಯಾಣ ಯೋಜನೆ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬಹುದು. ಸುಮಾರು 13 ಸಾವಿರ ಕೋಟಿ ರೂ. ಗಂಗಾ ಕಲ್ಯಾಣ ಯೋಜನೆಗೆ ವ್ಯಯಿಸಲಾಗಿದೆ ಎಂದು ಸದನಕ್ಕೆ ಅಂದಿನ ಸಿಎಂ ಮಾಹಿತಿ ನೀಡಿದ್ದರು.

ಪೊಲೀಸರಿಗೆ ಮುಟ್ಟಲಿದೆ ಪ್ರಕರಣಗಳ ಬಿಸಿ

ಮೊದಲ ಬಾರಿಗೆ ನಗರ ಪೊಲೀಸರ ಜೊತೆ ಇಂದು ಡಿಜಿ ಅಲೋಕ್ ಮೋಹನ್ ಸಭೆ ಕರೆದಿದ್ದು, ಸಭೆಯಲ್ಲಿ ಹಗರಣಗಳು, ಬಿ ರಿಪೋರ್ಟ್ ಕೇಸ್‌ಗಳ ವಿಚಾರ ಚರ್ಚೆಯಾಗಲಿದೆ. ಹಿಂದಿನ ಆಡಳಿತಾವಧಿಯಲ್ಲಿ ನಡೆದಿದ್ದ ಹಗರಣಗಳ ಪುನರ್ ತನಿಖೆಗೆ ಆಗ್ರಹ ಕಂಡುಬರುವ ಸಾಧ್ಯತೆ ಇದೆ.

ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದ್ದ ಹಗರಣಗಳ ತನಿಖೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸ್ಯಾಂಟ್ರೋ ರವಿ ಪ್ರಕರಣ, ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಹಗರಣಗಳು ಬಹು ಮುಖ್ಯ ಟಾಪಿಕ್ ಆಗಲಿವೆ. ಬಿಜೆಪಿ ನಾಯಕರ ಹೆಸರು ಕೇಳಿ ಬಂದಿದ್ದ ಹಗರಣಗಳ ಬಗ್ಗೆಯೇ ಹೆಚ್ಚು ಕೇಂದ್ರೀಕರಿಸಲಾಗುತ್ತಿದೆ. ಸಿಐಡಿಗೆ ಪ್ರಕರಣ ವರ್ಗಾಯಿಸಿ ತಳಹಿಡಿಸಿದ್ದ ಕೇಸ್‌ಗಳ ಬಗ್ಗೆ ಮರು ತನಿಖೆಗೆ ಸೂಚನೆ ನೀಡುವ ಸಾಧ್ಯತೆ ಇದೆ.

ಹೀಗಾಗಿ ನಗರದಲ್ಲಿ ನಡೆದಿರುವ ಪ್ರಮುಖ ಹಗರಣ, ‌ಪ್ರಕರಣಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ಕಾರ್ಯವೈಖರಿ ಬಗ್ಗೆ ಈಗಾಗಲೆ ಸಿಎಂ, ಡಿಸಿಎಂ ಗರಂ ಆಗಿದ್ದರು. ಬಿಜೆಪಿ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ರಿ, ಅವರು ಹೇಳಿದಂತೆ ನಡೆದುಕೊಳ್ತಿದ್ರಿ ಎಂದು ಗರಂ ಆಗಿದ್ದರು. ಪೊಲೀಸರ ಮುಂದಿನ ಕಾರ್ಯಸೂಚಿಗಳ ಬಗ್ಗೆ ಡಿಜಿ ಜೊತೆ ಸರ್ಕಾರ ಚರ್ಚೆ ನಡೆಸಿತ್ತು. ಹೀಗಾಗಿ ಡಿಜಿ ಅಲೋಕ್ ಮೋಹನ್‌ರಿಂದ ಕಮೀಷನರ್ ಕಚೇರಿಯಲ್ಲಿ ಇಂದು ಸಭೆ ನಡೆಯಲಿದೆ.

ಜನಸ್ನೇಹಿ ಪೊಲೀಸಿಂಗ್ ಕಡಿಮೆ ಆಗ್ತಿದೆ. ಸಾರ್ವಜನಿಕರ ಜೊತೆ ಪೊಲೀಸರು ಉತ್ತಮವಾಗಿ ನಡೆದುಕೊಳ್ತಿಲ್ಲ. ರೌಡಿಶೀಟರ್‌ಗಳನ್ನು ಹದ್ದುಬಸ್ತಿನಲ್ಲಿಡಬೇಕು. ಯಾರೂ ರಾಜಕೀಯ ವಿಚಾರಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಸರ್ಕಾರಿ ಸಂಬಂಧ ಗುತ್ತಿಗೆಗಳನ್ನು ರೌಡಿ ಹಾಗು ರೌಡಿ ಹಿನ್ನಲೆಯುಳ್ಳವರಿಗೆ ಸಿಗದಂತೆ ನೋಡಿಕೊಳ್ಳಬೇಕು. ಇದರ ಬಗ್ಗೆ ನಿಗಾ ವಹಿಸಿ ಟೆಂಡರ್ ನೀಡುವ ಇಲಾಖೆಗಳಿಗೆ ಮಾಹಿತಿ ನೀಡಬೇಕು. ಈಗಾಗಲೇ ಪ್ರಮುಖ ರೌಡಿಗಳು ಸರ್ಕಾರದ ಗಾರ್ಬೇಜ್ ಟೆಂಡರ್‌ಗಳನ್ನು ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಿ ಅವರನ್ನು ಮಟ್ಟಹಾಕಬೇಕು. ರೌಡಿ ಚಟುವಟಿಕೆ ಹಾಗೂ ನೈತಿಕ ಪೊಲೀಸ್‌ಗಿರಿಯನ್ನು ಮಟ್ಟ ಹಾಕಬೇಕು. ಕ್ರಿಮಿನಲ್‌ಗಳು, ರೌಡಿ ಎಲಿಮೆಂಟ್‌ಗಳ ಜೊತೆ ಪೊಲೀಸರು ಸಂಪರ್ಕ ಹೊಂದಿದ್ದರೆ ಕ್ರಮ ಕೈಗೊಳ್ಳಬೇಕು. ಧರ್ಮದ ಹೆಸರಿನಲ್ಲಿ ಯಾವ ಧರ್ಮದವರು ಕೃತ್ಯ ಎಸಗಿದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಹೀಗೆ ಹಲವು ವಿಚಾರಗಳನ್ನು ಇಂದು ಡಿಜಿ ಅಲೋಕ್ ಮೋಹನ್ ಪ್ರಸ್ತಾಪಿಸಿ ಸೂಚನೆ ನೀಡಲಿದ್ದಾರೆ. ಮುಖ್ಯವಾಗಿ ಜನಸ್ನೇಹಿ ಪೊಲೀಸಿಂಗ್‌ಗೆ ಒತ್ತು ಕೊಡುವಂತೆ ಸೂಚನೆ ನೀಡಲಿದ್ದಾರೆ.

ಇದನ್ನೂ ಓದಿ: Karnataka Politics: ಕಾಂಗ್ರೆಸ್‌ನಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

Exit mobile version