Site icon Vistara News

Karnataka Politics : ಸಚಿವರ ವಿರುದ್ಧದ ಪತ್ರಕ್ಕೆ ಕ್ಷಮೆ ಕೇಳಿಲ್ಲ, ಕೇಳೋದೂ ಇಲ್ಲ: ಬಿ.ಆರ್.‌ ಪಾಟೀಲ್

BR Patil and CM Siddaramaiah

ಕಲಬುರಗಿ/ಬೆಂಗಳೂರು: ರಾಜ್ಯ ರಾಜಕೀಯ (Karnataka Politics) ಕಣ ದಿನೇ ದಿನೆ ರಂಗೇರುತ್ತಿದೆ. ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದು 2 ತಿಂಗಳು ಕಳೆಯುವುದರೊಳಗೆ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಸಚಿವರ ವಿರುದ್ಧವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರವನ್ನೂ ಬರೆಯಲಾಗಿತ್ತು. ಕೊನೆಗೆ ಸಿಎಲ್‌ಪಿ ಸಭೆ (Congress CLP Meeting) ನಡೆಸಿದ ಸಿಎಂ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದರು. ಈ ಸಭೆಯ ವೇಳೆ, ಪತ್ರ ಬರೆದ ಶಾಸಕರು ಕ್ಷಮೆ ಕೇಳಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿರುವ ಆಳಂದ ಶಾಸಕ ಬಿ.ಆರ್.ಪಾಟೀಲ್ (Alanda MLA BR Patil), ಯಾರು ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ, ನಾನಂತೂ ಕ್ಷಮೆ ಕೇಳಿಲ್ಲ. ಕೇಳುವುದೂ ಇಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಿ.ಆರ್.ಪಾಟೀಲ್, ಕ್ಷಮೆ ಕೇಳೋದಕ್ಕೆ ನಾವೇನು ತಪ್ಪು ಮಾಡಿರೋದು? ಎಂದು ಪ್ರಶ್ನೆ ಮಾಡಿದರು. ಕ್ಷಮೆ ಕೇಳುವಂತಹ ಹೇಡಿತನ ನನ್ನಲ್ಲಿ ಇಲ್ಲ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ನಮ್ಮ ಒತ್ತಾಯ ಇತ್ತು. ಸಭೆ ಕರೆದಿದ್ದರು, ಸಭೆಯಲ್ಲಿ ಮುಕ್ತವಾಗಿ ಎಲ್ಲ ಚರ್ಚೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಪರಮೇಶ್ವರ್‌ಗೆ ತಿರುಗೇಟು

ಶಾಸಕರ ಪತ್ರದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಪ್ರತಿಕ್ರಿಯೆ ನೀಡಿ, ಸಿಎಂಗೆ ಪತ್ರ ಬರೆದಿರುವ ಶಾಸಕರು ಕ್ಷಮೆ ಕೇಳಿದ್ದಾರೆ. ತಮಗೆ ಪತ್ರ ಚಳವಳಿ ಮಾಡುವ ಉದ್ದೇಶ ಇರಲಿಲ್ಲ. ನಮಗೆ ನೋವನ್ನು ಹೇಳಿಕೊಳ್ಳಬೇಕಿತ್ತು. ಅದರಿಂದ ಪ್ರಮಾದವಾಗಿದ್ದರೆ, ಕ್ಷಮೆ ಕೇಳುತ್ತೇವೆ ಎಂಬುದಾಗಿ ಸಿಎಲ್‌ಪಿ ಸಭೆಯಲ್ಲಿ ಹೇಳಿದ್ದರು ಎಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿ.ಆರ್.‌ ಪಾಟೀಲರು, ಈಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆತ್ಮಗೌರವಕ್ಕೆ ಧಕ್ಕೆ ಬಂದರೆ ರಾಜೀನಾಮೆ ಕೊಡುತ್ತೇನೆ

ಆತ್ಮಗೌರವಕ್ಕೆ ಧಕ್ಕೆ ಬಂದರೆ ರಾಜೀನಾಮೆ ಕೊಡುತ್ತೇನೆ ಅಂದಿದ್ದೇನೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅರ್ಧಕ್ಕೆ ಎದ್ದು ಹೊರ ಬಂದಿದ್ದು ನಿಜ.‌ ಬಳಿಕ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಕರೆದು ಸಮಾಧಾನ ಮಾಡಿದರು. ಮೊನ್ನೆ ಸಿಎಂ ಸಿದ್ದರಾಮಯ್ಯ ಫೋನ್ ಮಾಡಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. 5 ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಕಡಿಮೆ ಹಣ ಬರುತ್ತದೆ ಅಂದಿದ್ದಾರೆ. ಮುಂದಿನ ವರ್ಷದಿಂದ ಯೋಜನೆಗೆ ಹಣ ನೀಡುವುದಾಗಿ ಹೇಳಿದ್ದಾರೆ ಎಂದು ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು.

ಇದನ್ನೂ ಓದಿ: CT Ravi : ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ‌, ಕೇಳಿ ಪಡೆಯಲ್ಲ ಎಂದ ಸಿ.ಟಿ. ರವಿ; ದೆಹಲಿಗೆ ಬುಲಾವ್?

ಬಿ.ಆರ್‌. ಪಾಟೀಲರಿಗೆ ನೋವಾಗಿದ್ದರೆ ಸರಿಪಡಿಸಬೇಕು: ಎಂ.ಬಿ ಪಾಟೀಲ್

ಬಿ.ಆರ್.‌ ಪಾಟೀಲ್‌ ಅಸಮಾಧಾನದ ಬಗ್ಗೆ ಸಚಿವ ಎಂ.ಬಿ. ಪಾಟೀಲ್‌ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಸಿಎಲ್‌ಪಿ ಸಭೆಯಲ್ಲಿ ನಾನು ಇರಲಿಲ್ಲ. ನಮ್ಮ ತಂದೆಯವರ ಕಾರ್ಯ ಇತ್ತು. ಬಿ.ಆರ್. ಪಾಟೀಲ್ ಹಿರಿಯ ಶಾಸಕರು. ನಾನು ಚಿಕ್ಕವನಾಗಿದ್ದಾಗಿನಿಂದ ನೋಡಿದ್ದೇನೆ. ಪ್ರಾಮಾಣಿಕ, ನೇರ, ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ. ಬಹಳ ಮೌಲ್ಯ ಇರುವ ವ್ಯಕ್ತಿ ಅವರು. ಕೆಲಸ ಆಗದಿದ್ದಾಗ ನೋವು ಇರುತ್ತದೆ. ಅವರು ಹಿರಿಯರು, ಅವರೇ ಎಲ್ಲರನ್ನೂ ಸುಮ್ಮನಿರಿಸಬೇಕು. ಅವರು ಪ್ರಬುದ್ಧ ವ್ಯಕ್ತಿ. ಅವರಿಗೆ ನೋವಾಗಿದ್ದರೆ ಸರಿಪಡಿಸುವ ಕೆಲಸ ಆಗಬೇಕಿದೆ. ಶಾಸಕರ ಬೇಡಿಕೆ ಏನೇ ಇದ್ದರೂ ನಾವದನ್ನು 6% ಮಾತ್ರ ಈಡೇರಿಸಬಹುದು. ಏನೇ ಬೇಡಿಕೆ ಇದ್ದರೂ ಮುಖ್ಯಮಂತ್ರಿಗಳಿಗೆ ಬಂದು, ನಂತರ ಎಲ್ಲವೂ ಆಗಬೇಕಿದೆ ಎಂದು ಹೇಳಿದರು.

Exit mobile version