ಚಾಮರಾಜನಗರ: ಮೈಸೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಪುಟ್ಟಸ್ವಾಮಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ (Karnataka politics) ಮಾಡುವುದಕ್ಕಾಗಿ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ ಎಂದು ಹೇಳಲಾಗಿದೆ.
ಅವರು ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದು ಈಗ ಎನ್ ಮಹೇಶ್ ಅವರು ಶಾಸಕರು. ಎನ್. ಮಹೇಶ್ ಈ ಹಿಂದೆ ಬಿಎಸ್‌ಪಿಯಿಂದ ಗೆದ್ದವರು. ಬಳಿಕ ಬಿಎಸ್‌ಪಿಗೆ ರಾಜೀನಾಮೆ ನೀಡಿ ಕೆಲವು ಕಾಲ ಪಕ್ಷೇತರರಾಗಿದ್ದರು. ಬಳಿಕ ಬಿಜೆಪಿಯನ್ನು ಸೇರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ನಡುವೆಯೇ ಪುಟ್ಟಸ್ವಾಮಿ ಅವರ ಎಂಟ್ರಿ ಆಗಿದೆ!
ಹಂತ ಹಂತವಾಗಿ ಮೇಲೇರಿದವರು
ಬಿ. ಪುಟ್ಟಸ್ವಾಮಿ ಅವರು ೨೭ ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಂತ ಹಂತವಾಗಿ ಮೇಲೇರಿದ್ದಾರೆ. ಕಾನ್ಸ್‌ಟೇಬಲ್ ಹುದ್ದೆಯ ಮೂಲಕ ಇಲಾಖೆ ಪ್ರವೇಶಿಸಿದ ಅವರು ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ಬಳಿಕ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ಚಾಮರಾಜನಗರ, ಕೊಳ್ಳೇಗಾಲ, ರಾಮಾಪುರ, ಅಗರ-ಮಾಂಬಳ್ಳಿ, ಹುಣಸೂರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವರು, ಇನ್ನೂ 13 ವರ್ಷ ಸೇವೆ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಬಯಸಿ ರಾಜೀನಾಮೆ ನೀಡಿದ್ದಾರೆ.
ಆಗಲೇ ಅಭಿಮಾನಿ ಬಳಗ
ಪುಟ್ಟಸ್ವಾಮಿ ಅವರು ಆಗಲೇ ಅಭಿಮಾನಿ ಬಳಗವನ್ನು ರಚಿಸಿಕೊಂಡಿದ್ದಾರೆ. ಅದೂ ಅಲ್ಲದೆ, ಬಿ.ಪುಟ್ಟಸ್ವಾಮಿ ಸೇವಾ ಟ್ರಸ್ಟ್ ಮೂಲಕ ಕೊಳ್ಳೇಗಾಲ ಕ್ಷೇತ್ರದಲ್ಲಿ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಜೆಪಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ
ಪುಟ್ಟಸ್ವಾಮಿ ಎಂಟ್ರಿಯೊಂದಿಗೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದಂತಾಗಿದೆ. ಹಾಲಿ ಶಾಸಕ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಇದೀಗ ಸ್ವಯಂ ನಿವೃತ್ತಿಯಾಗಿರುವ ಬಿ.ಪುಟ್ಟಸ್ವಾಮಿ, ಬಿಜೆಪಿ ಮುಖಂಡರಾದ ಕಿನಕಳ್ಳಿ ರಾಚಯ್ಯ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಳಿಯ ಡಾ.ಮೋಹನ್ ನಡುವೆ ಬಿಜೆಪಿ ಟಿಕೆಟ್‌ಗಾಗಿ ದೊಡ್ಡ ಮಟ್ಟದ ಪೈಪೋಟಿ ನಡೆಯುತ್ತಿದೆ.
ಇದನ್ನೂ ಓದಿ | Motivational story | ನೆನಪಿರಲಿ ನಮ್ಮ ಮುಂದೆ ಯಾವತ್ತೂ ಒಬ್ಬ ಮಾಟಗಾತಿ ಇರ್ತಾಳೆ, ಅವಳು ಯಾವ ರೂಪದಲ್ಲಾದರೂ ಬರಬಹುದು!