ಬಳ್ಳಾರಿ/ಚಿತ್ರದುರ್ಗ/ಚಿಕ್ಕಬಳ್ಳಾಪುರ/ಮಡಿಕೇರಿ: ರಾಜ್ಯ ರಾಜಕೀಯದಲ್ಲಿ (Karnataka Politics) ಪಕ್ಷದ ನಾಯಕರ ವಾಕ್ಸಮರಗಳು ದಿನೇ ದಿನೆ ಹೆಚ್ಚುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಮರಿಗೆ ಹೋಲಿಕೆ ಮಾಡಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದು, ಇಂತಹ ಹೇಳಿಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಜನರೇ ಅವರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಹೇಳಿಕೆಗೆ
ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ. ಇಂತಹ ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ನಾಯಿ ನಿಯತ್ತಿನ ಪ್ರಾಣಿ. ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ. ನಿಯತ್ತನ್ನು ಜನರ ಪರವಾಗಿ ಉಳಿಸಿಕೊಂಡು ಹೋಗುವೆ. ಅವರ ಹಾಗೆ ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಸೌಭಾಗ್ಯ ಕೊಡುತ್ತೇವೆ ಎಂದು ಹೇಳಿ ದೌರ್ಭಾಗ್ಯ ನೀಡಿಲ್ಲ. ಈ ರೀತಿಯ ಕೆಲಸವನ್ನು ನಾವು ಮಾಡಿಲ್ಲ ಎಂದು ಹೇಳಿದರು.
ಬಹಿರಂಗ ಚರ್ಚೆಗೆ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ. ಆದರೆ, ವಿಧಾನಸಭೆಗಿಂತ ದೊಡ್ಡ ವೇದಿಕೆ ಯಾವುದೂ ಇಲ್ಲ. 15 ದಿನಗಳ ಕಾಲ ಸದನ ನಡೆಯಿತು. ಅದಕ್ಕಿಂತಲೂ ಹಿಂದೆಯೂ ನಡೆದಿದೆ. ವೇದಿಕೆ ಇದ್ದಾಗ ಚರ್ಚೆ ಮಾಡದೆ, ಹೊರಗೆ ರಾಜಕೀಯವಾಗಿ ಹೇಳಿಕೆ ನೀಡುತ್ತಾರೆ. ಜನವರಿ-ಫೆಬ್ರವರಿಯಲ್ಲಿ ಪುನಃ ಅಧಿವೇಶನ ನಡೆಯಲಿದ್ದು, ಚರ್ಚೆ ಮಾಡೋಣ. ವಿಧಾನಮಂಡಲಕ್ಕಿಂತ ಪವಿತ್ರ ವೇದಿಕೆ ಎಲ್ಲಿದೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.
ಇದನ್ನೂ ಓದಿ | Karnataka Politics : ಸೋನಿಯಾ ಗಾಂಧಿ ಮುಂದೆ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರುತ್ತಾರೆ: ಶ್ರೀರಾಮುಲು ತಿರುಗೇಟು
ಮೋದಿ ಕಾಮಧೇನು– ಸಿಎಂ
ಸಿದ್ದರಾಮಯ್ಯ ಅವರು ಹಿಂದೆ ಅತ್ಯಂತ ಸಭ್ಯ ಪ್ರಧಾನಿ ಮನಮೋಹನ ಸಿಂಗ್ ಎದುರಿಗೆ ಹೆದರಿಕೊಂಡು ಹೋಗಲೇ ಇಲ್ಲ. ರಾಜ್ಯಕ್ಕೆ ನಯಾಪೈಸೆ ತರಲೂ ಆಗಲಿಲ್ಲ. ಬಹಳ ರಾಜ್ಯಗಳಿಗೆ ಅವರು ಕೊಡುಗೆ ಏನೂ ಇಲ್ಲ. ಆದರೆ, ಮೋದಿಯವರು ಪ್ರಧಾನಿಯಾದ ನಂತರ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಮೋದಿಯವರು ರಾಜ್ಯಕ್ಕೆ 6 ಸಾವಿರ ಕಿ.ಮೀ. ಹೆದ್ದಾರಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಒಂದು ರಾಜ್ಯಕ್ಕೆ ಇಷ್ಟು ದೊಡ್ಡ ಮೊತ್ತ ಬಂದಿರುವುದು ಒಂದು ದಾಖಲೆ. ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ, ಮಂಗಳೂರು, ಕಾರವಾರ ಬಂದರು, ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಬರುವ ದಿನಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಅನುದಾನ ನೀಡಲಿದ್ದಾರೆ. ಎಲ್ಲ ಮಹಾನಗರಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ನೀಡಿದ್ದಾರೆ. ಇವರ ಕಾಲದಲ್ಲಿ ಇರಲಿಲ್ಲ. ಇಂಥ ಮಹತ್ವವನ್ನು ಯೋಜನೆಗಳನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ಮೋದಿ ಕಾಮಧೇನು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ, ಕಟೀಲು ಹೀಗೆ ಮಾತನಾಡಬಾರದಿತ್ತು- ವಿಶ್ವನಾಥ್
ಸಿಎಂ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಎದುರು ನಾಯಿಮರಿ ರೀತಿ ನಿಲ್ಲುತ್ತಾರೆ ಎಂದು ಸಿದ್ದರಾಮಯ್ಯ ಹೇಳಬಾರದಿತ್ತು. ಅವರೂ ಸಹ ಸಿಎಂ ಆಗಿದ್ದವರು. ಬೊಮ್ಮಾಯಿ ಈಗ ನಮ್ಮ ರಾಜ್ಯದ ಸಿಎಂ ಆಗಿದ್ದಾರೆ. ಯಾರೇ ಆದರೂ ಈ ರೀತಿ ಲಘುವಾಗಿ ಮಾತನಾಡಬಾರದು ಎಂದು ಎಚ್. ವಿಶ್ವನಾಥ್ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದರು.
ರಸ್ತೆ, ಚರಂಡಿ, ನೀರು ಎಂದು ಸಣ್ಣ ಪುಟ್ಟ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬೇಡಿ, ಲವ್ ಜಿಹಾದ್ ಬಗ್ಗೆ ಚಿಂತಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೀಡಿರುವ ಹೇಳಿಕೆಯನ್ನು ಖಂಡಿಸಿರುವ ವಿಶ್ವನಾಥ್, ನಿಮಗೆ ಇದು ಸಣ್ಣ ಪುಟ್ಟ ವಿಷಯವೇ ಆದರೂ, ಕೇರಿಯಲ್ಲಿ ಬದುಕುವವನ ಕಥೆ ಏನು? ಕೇರಿಯಲ್ಲಿ ಬದುಕುವ ನಮಗೆ ನಮ್ಮ ಮೂಲಭೂತ ಸೌಲಭ್ಯ ಮುಖ್ಯವಾಗುತ್ತದೆ. ನಮ್ಮ ಪಾಯಿಖಾನೆ ಏನಾಯ್ತು? ನಮ್ಮ ಚರಂಡಿ, ರಸ್ತೆ ಮನೆ ಏನಾಯ್ತು? ನಮ್ಮ ಕೇರಿ ನೀರೇನಾಯ್ತು? ಎಂಬುದೇ ನಮ್ಮ ಸಮಸ್ಯೆಯಾಗಿದೆ. ಆದರೆ, ಲವ್ ಜಿಹಾದ್ ಬಗ್ಗೆ ಮಾತನಾಡಿ ಜನರ ದಿಕ್ಕು ತಪ್ಪಿಸುತ್ತೀರಾ? ಒಂದು ರಾಜ್ಯದ ಆಳುವ ಪಕ್ಷದ ಅಧ್ಯಕ್ಷರಾಗಿ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು. ಚಿ.. ಥೂ.. ಎಂದು ವಿಶ್ವನಾಥ್ ಹೇಳಿದ್ದಾರೆ.
ಕೇಂದ್ರ ಸಚಿವ ನಾರಾಯಣಸ್ವಾಮಿ ಕಿಡಿ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಿಡಿಕಾರಿದ್ದು, ಗೌರವದಿಂದ ಮಾತನಾಡುವುದಕ್ಕೆ ಸಂಸ್ಕಾರ ಅನ್ನುತ್ತೇವೆ. ಯಾವ ಕಾಲದಲ್ಲಿ ಅಭಿವೃದ್ಧಿ ಆಗಿದೆ ಎಂಬುದನ್ನು ಜನ ತೀರ್ಮಾನಿಸುತ್ತಾರೆ. ಸಿದ್ದರಾಮಯ್ಯ ಆಡಳಿತವನ್ನು ಜನರು ತಿರಸ್ಕರಿಸಿದ್ದು ಏಕೆ? ಸಿಎಂ ಬೊಮ್ಮಾಯಿ ಬಗ್ಗೆ ನಾಯಿ ಪದ ಬಳಕೆ ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಪಕ್ಷದಂತೆ ಹೈಕಮಾಂಡ್ ಹಿಂದೆ ಬೀಳುವ ಪದ್ಧತಿ ಬಿಜೆಪಿಯಲ್ಲಿಲ್ಲ. ಚೀಟಿ ಮೂಲಕ ಸಿಎಂ ಆಯ್ಕೆ ಪದ್ಧತಿ ನಮ್ಮಲ್ಲಿ ಇಲ್ಲ. ಅಭಿವೃದ್ಧಿ ಬಗ್ಗೆ ಚರ್ಚೆಗೆ ಯಾರಾದರೂ ಬರಲಿ ಚರ್ಚೆಗೆ ಸಿದ್ಧ. ಎಸ್‌ಸಿ, ಎಸ್‌ಟಿ, ವೀರಶೈವ, ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ನಮ್ಮ ಸಿಎಂ ಬೊಮ್ಮಾಯಿ ಧಮ್ ತೋರಿಸಿದ್ದಾರೆ ಎಂದು ಚಿತ್ರದುರ್ಗದಲ್ಲಿ ಹೇಳಿಕೆ ನೀಡಿದರು.
ಬೊಮ್ಮಾಯಿ ನಡುಗುವುದು ಸಿದ್ದರಾಮಯ್ಯ ನೋಡಿದ್ದಾರಾ: ಸುಧಾಕರ್ ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿ ಬಂದರೆ ಸಿಎಂ ಬಸವರಾಜ ಬೊಮ್ಮಾಯಿ ಗಢ ಗಢ ನಡುಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಬೊಮ್ಮಾಯಿ ನಡುಗುವುದನ್ನು ಅವರು ನೋಡಿದ್ದಾರಾ? ಕಾಂಗ್ರೆಸ್‌ನಲ್ಲಿ ಈಗ ರಾಹುಲ್ ಗಾಂಧಿ ಸ್ಥಾನಮಾನ ಏನು? ಗೌರವ ಏನು? ಯಾವ ಸ್ಥಾನಮಾನವೂ ಇಲ್ಲದ ರಾಹುಲ್ ಗಾಂಧಿ ಬಂದರೆ ಯಾಕೆ ಅವರ ಹಿಂದೆ ಓಡಿ ಹೋಗುತ್ತೀರಾ? ಆದರೆ, ನಾವು ಅವರ ಬಗ್ಗೆ ಮಾತನಾಡುವುದಿಲ್ಲ. ದೇಶದ ಪ್ರಧಾನಿ ಬಂದರೆ ಗೌರವ ಕೊಡುವುದು ಈ ನೆಲದ ಸಂಸ್ಕೃತಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | ಹಾಸನ ಮಿಕ್ಸಿ ಸ್ಫೋಟದ ಆರೋಪಿ ಅರೆಸ್ಟ್: ಪ್ರೀತಿ ನಿರಾಕರಣೆ, ಅಪಮಾನಕ್ಕೆ ಪ್ರತೀಕಾರ ಎಂದ ವಿಕೃತ ಪ್ರೇಮಿ ಅನೂಪ್