Site icon Vistara News

Karnataka Politics: ಈಗಲೇ ಎಷ್ಟುಬೇಕೋ ಕುಡಿದುಬಿಡಿ: ಎಣ್ಣೆ ಹೊಡೆಯೋರಿಗೆ ಆರ್‌. ಅಶೋಕ್‌ ಟಿಪ್ಸ್‌

R Ashok

#image_title

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಒಂದೊಂದೆ ನೆಪ ಹೇಳಿ ದರ ಹೆಚ್ಚಳ ಮಾಡುತ್ತದೆ ಎಂದಿರುವ ಮಾಜಿ ಡಿಸಿಎಂ ಹಾಗೂ ಬಿಜೆಪಿ ನಾಯಕ ಆರ್.‌ ಅಶೋಕ್‌, ಎಣ್ಣೆ ಹೊಡೆಯೋರು ಈಗಲೆ ಎಷ್ಟು ಬೇಕೊ ಅಷ್ಟು ಕುಡಿದುಬಿಡಿ ಎಂದು ಟಿಪ್ಸ್‌ ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಎಫ್‌ಸಿಐ ಅಧಿಕಾರಿಗಳು ಒಪ್ಪಿದ್ದರೂ, ನಂತರ ಕೇಂದ್ರ ಸರ್ಕಾರ ರಾಜಕೀಯ ಮಾಡಿ ಅದನ್ನು ತಡೆಹಿಡಿದಿದೆ. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರ ಸರ್ಕಾರ ತಡೆಒಡ್ಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ನಡೆಸಿದ ಸುದ್ದಿಗೋಷ್ಠಿಗೆ ಆರ್.‌ ಅಶೋಕ್‌ ಪ್ರತಿಕ್ರಿಯಿಸಿದ್ದಾರೆ.

ಈಗಲೇ ಬರೆದಿಟ್ಟುಕೊಳ್ಳಿ, ಇವೆಲ್ಲಾ ದರ ಹೆಚ್ಚಳವಾಗುತ್ತೆ. ಪೆಟ್ರೋಲ್, ಡೀಸಲ್ ಹೆಚ್ಚಳ ಜಾಸ್ತಿ ಆಗುತ್ತೆ. ಕುಡಿಯುವ ನೀರಿನ ದರ ಏರಿಕೆ ಆಗುತ್ತೆ. ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಗ್ಯಾರಂಟಿ. 15-20% ಸ್ಟ್ಯಾಂಪ್ ಡ್ಯೂಟಿ ಏರಿಕೆ ಆಗುತ್ತೆ. ಇದೆಲ್ಲಾ ಹೆಚ್ಚಾದ ಮೇಲೆ ತರಕಾರಿ, ದವಸ, ಧಾನ್ಯ ಹೆಚ್ಚಳ ಮಾಡ್ತಾರೆ. ಈ ಮೂಲಕ 2000 ಕೊಟ್ಟು, ಅದಕ್ಕಿಂತ ಹೆಚ್ಚು ವಸೂಲಿ ಮಾಡ್ತಾರೆ.

ಡಿಕೆಶಿ ಅವರೊಬ್ಬರಿಗೆ ತಲೆ ಇರೋದು. ಅವರು ಪಕ್ಕಾ ಬ್ಯುಸಿನೆಸ್ ಮ್ಯಾನ್. ಕೊಟ್ಟಂಗೂ ಆಗಬೇಕು, ಕಿತ್ತುಕೊಂಡಂಗೂ ಆಗಬೇಕು. GST ಕೂಡ ರಾಜ್ಯಕ್ಕೆ ಬರೋದು. ಎಣ್ಣೆ ಹೊಡೆಯೋರು ಈಗಲೇ ಕುಡಿದುಬಿಡಿ. ಅದರ ದರವೂ ಹೆಚ್ಚಳ ಆಗುತ್ತೆ. ಮೊದಲು ಎಣ್ಣೆ ಹೊಡೆದಾಗ ಕಿಕ್ ಹೊಡೀತಿತ್ತು, ಈಗ ಬಾಟೆಲ್ ನೋಡಿದ್ರೆ ಕಿಕ್ ಹೊಡೆಯುತ್ತೆ ಎಂದಿದ್ದಾರೆ.

ಕರ್ನಾಟಕವನ್ನ ದಿವಾಳಿ ಮಾಡೋ ಕಾಲ‌ ಹತ್ತಿರದಲ್ಲಿದೆ. ಇವರ ಕೈಯಲ್ಲಿ ಏನು ಕೊಡಲು ಆಗಲ್ಲ, ಅದು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡ್ತಾರೆ. ಶ್ರೀಲಂಕಾ ತರ ದಿವಾಳಿ ಮಾಡ್ತಾರೆ. ಮನಮೋಹನ್ ಸಿಂಗ್ ಇದ್ದಾಗ ಯಾಕೆ ಕೇಳಲಿಲ್ಲ? ಈಗ ಮೋದಿ ಸರ್ಕಾರ ಕೇಳ್ತೀರಾ? ಜ್ಞಾನ ಇರಲಿಲ್ವಾ.? ಇಬ್ಬರೂ ಸೇರಿ ಸಹಿ ಹಾಕಿ ಕೊಟ್ರಿ.? ಆಗ ಪರಿಜ್ಞಾನ ಇರಲಿಲ್ವಾ.? ತಿಮ್ಮಕ್ಕ, ಬೊಮ್ಮಕ್ಕ ಎಲ್ಲಾ ಫ್ರೀ ಅಂದ್ರಿ. ಕರೆಂಟ್ ಬಿಲ್ ಹೆಚ್ಚಳಕ್ಕೆ ಬಿಜೆಪಿ ಕಾರಣ ಅಂತೀರ. ನಾವು ಇದ್ವಾ ಕರೆಂಟ್ ಬಿಲ್ ಜಾಸ್ತಿ ಆದಾಗ.? ನಮ್ಮ ಸರ್ಕಾರ ಇದ್ದಾಗ ಆಗದ ಹೆಚ್ಚಳ ಈಗ ಮಾಡಿದ್ದಾರೆ.

ಇನ್ನೂ ಒಂದು ವರ್ಷಕ್ಕೆ ರಾಜ್ಯ ದಿವಾಳಿ ಎದ್ದು ಬಿಡುತ್ತದೆ. ಆ ಮೇಲೆ ಕೇಂದ್ರ ಸರ್ಕಾರವೇ ಕಾರಣ ಅಂತಾರೆ. ಎಂಪಿ ಎಲೆಕ್ಸನ್ ವರೆಗೂ ಅಷ್ಟೇ ಇವರ ಕಥೆ. ಆ ಮೇಲೆ 50 ಸಾವಿರ ಕೋಟಿ ರೂ. ಸಾಲ ಮಾಡಿ ಹೋಗ್ತಾರೆ. ನಿಮಗೆ ಜ್ಞಾನ ಇರಲಿಲ್ಲವಾ..? ಕೇಂದ್ರ ಸರ್ಕಾರ ಕೊಟ್ಟಿದ್ರೆ ನಾವು ಕೊಡ್ತಿದ್ವಿ ಅಂತಾ ಹೇಳಬೇಕಿತ್ತು. ವಿದ್ಯುತ್ ದರ ಹೆಚ್ಚಳಕ್ಕೆ ನಮ್ಮ ಪಕ್ಷ ಒಪ್ಪಿಕೊಂಡಿರಲಿಲ್ಲ. ಇವಾಗ ವಿದ್ಯುತ್ ದರ ಏರಿಕೆ ಮಾಡಿರೋದು ನೀವು, ನಾವಲ್ಲ. ಇವಾಗ ಉಚಿತ ಬಸ್ಸು ಪ್ರಯಾಣ ಅಂತಾರೆ. ಆ ಮೇಲೆ ಅದರ ಡಬಲ್ ವಸೂಲಿ ಮಾಡ್ತಾರೆ. ನಿಜವಾಗಿಯೂ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಸುನಿಲ್‌ ಕುಮಾರ್‌ ವಾಗ್ದಾಳಿ
ಅನ್ನಭಾಗ್ಯ ಯೋಜನೆ ಜಾರಿ ವಿಳಂಬಕ್ಕೆ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಕುರಿತು ಬಿಜೆಪಿ ನಾಯಕ ಸುನಿಲ್‌ ಕುಮಾರ್‌ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ನುಡಿದಂತೆ ನಡೆಯುತ್ತೇವೆ ಎಂದು ಪುಗಸಟ್ಟೆ ಪ್ರಚಾರ ತೆಗೆದುಕೊಂಡು ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಜಾರಿಕೊಳ್ಳುವ ಪ್ರಯತ್ನ ನಡೆಸುತ್ತೀರಾ ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ವಿ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡುವ ವಿಚಾರದಲ್ಲಿ ರಾಜಕಾರಣ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ನೀವು ಮತ ರಾಜಕಾರಣಕ್ಕಾಗಿ ಪ್ರಣಾಳಿಕೆ ಸಿದ್ದಪಡಿಸುವಾಗ‌ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದಿರಾ? ಈ ಹಿಂದೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಕೊಟ್ಟ ಅಕ್ಕಿಯನ್ನೇ ನಾನು ಉಚಿತವಾಗಿ ಕೊಟ್ಟೆ ಎಂದು ಡೋಂಗಿ ಹೊಡೆದವರು ನೀವಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಕೊಟ್ಟ ಭರವಸೆ ಈಡೇರಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ಹೊರೆಯಿಂದ ತಪ್ಪಿಸಿಕೊಳ್ಳುವುದಕ್ಕರ ಈಗ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂದು ಸಬೂಬು ಹೇಳುತ್ತಿದ್ದೀರಿ. ಕೇಂದ್ರ ಸರ್ಕಾರ ಕೊಡುತ್ತಿದ್ದ ಐದು ಕೆಜಿ ಅಕ್ಕಿ ಪೂರೈಕೆಯನ್ನು ಇದುವರೆಗೆ ನಿಲ್ಲಿಸಿಲ್ಲ. ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದು ನಿಮ್ಮ ವಾಗ್ದಾನ. ಅದರಂತೆ ನಡೆದುಕೊಳ್ಳಿ. ಅದನ್ನು ಬಿಟ್ಟು ಅಂಗಳ ಡೊಂಕು ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕೀಳು ರಾಜಕಾರಣ ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಕೇಂದ್ರವನ್ನು ದೂಷಿಸುವ ಕೆಟ್ಟ ಚಾಳಿ ನಿಮಗೆ ಹೊಸದಲ್ಲ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂಲಕ ಬಡವರ ಹಸಿವನ್ನು ನೀಗಿಸಿದ್ದು ಇದೇ ಕೇಂದ್ರ ಸರ್ಕಾರ ಎಂಬುದನ್ನು ಮರೆಯಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.

ಸಿ.ಟಿ. ರವಿ ಟ್ವೀಟ್‌:

ಇದನ್ನೂ ಓದಿ: Congress Guarantee: ಗ್ಯಾರಂಟಿಗಾಗಿ ದಾಖಲೆ ಅಪ್ಡೇಟ್‌; ಆಧಾರ್‌, ಬ್ಯಾಂಕ್‌, ಪೋಸ್ಟ್‌ ಆಫೀಸ್‌ಗೆ ಮುಗಿಬಿದ್ದ ಜನ

Exit mobile version