Site icon Vistara News

Karnataka Politics: ಆರ್‌ಎಸ್‌ಎಸ್‌ ಮತ್ತು ಹಿಂದು ಮಹಾಸಭಾ ನಿಯಂತ್ರಣದಲ್ಲಿ ಬಿಜೆಪಿ: ಸಿದ್ದರಾಮಯ್ಯ ಹೇಳಿಕೆ

Siddaramaiah in a press conference in Bengaluru.

ಬೆಂಗಳೂರು: ಸಮಸಮಾಜ ನಿಯಂತ್ರಣವಾದರೆ ಶೋಷಣೆಗೆ ಅವಕಾಶ ಇರುವುದಿಲ್ಲ ಎಂದು ಬಿಜೆಪಿಯವರು ಚಿಂತನೆ ನಡೆಸಿದ್ದು, ಬಿಜೆಪಿಯನ್ನು ಆರ್‌ಎಸ್‌ಎಸ್‌ ಮತ್ತು ಹಿಂದು ಮಹಾಸಭಾ ನಿಯಂತ್ರಿಸುತ್ತವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಕಲ್ಪ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, 1925ರಲ್ಲಿ ಹೆಡಗೇವಾರ್‌ ಅವರು ಆರ್‌,ಎಸ್‌,ಎಸ್‌ ನ ಸಂಸ್ಥಾಪಿಸಿದರು. ಅವರ ನಂತರ ಗೋಳ್ವಲ್ಕರ್‌ ಅವರು ಸಂಚಾಲಕರಾಗಿ ಕೆಲಸ ಮಾಡಿದ್ದರು. ಸಾವರ್ಕರ್‌ ಅವರು ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು. 1951ರಲ್ಲಿ ಜನಸಂಘ ಆರಂಭವಾಯಿತು. 1980ರಲ್ಲಿ ಭಾರತೀಯ ಜನತಾ ಪಕ್ಷ ಹುಟ್ಟಿಕೊಂಡಿತು. ಈ ಬಿಜೆಪಿ ಎನ್ನುವುದು ಆರ್‌ಎಸ್‌ಎಸ್‌ನ ರಾಜಕೀಯ ಅಂಗ. ಇದನ್ನು ನಿಯಂತ್ರಿಸುವುದು ಆರ್‌ಎಸ್‌ಎಸ್‌ ಮತ್ತು ಹಿಂದೂ ಮಹಾಸಭಾ.

ಗೋಳ್ವಲ್ಕರ್‌ ಅವರ ಚಿಂತನ ಗಂಗಾ ಪುಸ್ತಕದಲ್ಲಿ, ಆರ್‌ಎಸ್‌ಎಸ್‌ ಮುಖವಾಣಿ ಆರ್ಗನೈಸರ್‌ ಪತ್ರಿಕೆಯಲ್ಲಿ ಬಾಬಾ ಸಾಹೇಬರು ರಚನೆ ಮಾಡಿರುವ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಚಿಂತನ ಗಂಗಾ ಕೃತಿಯಲ್ಲಿ ಒಂದು ಕಡೆ “ಅಲ್ಲಿ ಇಲ್ಲಿ ಹೀಗೆ ಹಲವು ದೇಶಗಳ ಸಂವಿಧಾನದಿಂದ ವಿಚಾರಗಳನ್ನು ಹೆಕ್ಕಿ ತೆಗೆದುಕೊಂಡು ಬಂದು, ಹೊಂದಾಣಿಕೆ ಇಲ್ಲದಂತೆ ಅಸಂಬದ್ಧವಾದ ರೀತಿ ಸಂವಿಧಾನ ರಚನೆ ಮಾಡಿದ್ದಾರೆ. ಇದು ಈ ದೇಶಕ್ಕೆ ಹೊಂದಾಣಿಕೆ ಇಲ್ಲದ ಸಂವಿಧಾನ” ಎಂದು ಬರೆದಿದ್ದಾರೆ. ಇದು ಆರ್‌ಎಸ್‌ಎಸ್‌ಗೆ ಸಂವಿಧಾನದ ಬಗ್ಗೆ ಕವಡೆಕಾಸಿನ ಗೌರವ ಇಲ್ಲ ಎಂಬುದನ್ನು ತೋರಿಸುತ್ತದೆ.

ಅವರು ಸಂವಿಧಾನ ಹೇಳುವ ಸಮಾನತೆಗೆ ವಿರುದ್ಧವಾದವರು. ಸಮಾಸಮಾಜ ಸ್ಥಾಪನೆ, ಎಲ್ಲರಿಗೂ ಶಿಕ್ಷಣ ನೀಡುವುದು, ಸಂಪತ್ತಿನಲ್ಲಿ ಪಾಲುದಾರರನ್ನಾಗಿ ಮಾಡುವುದು ಅವರಿಗೆ ಇಷ್ಟವಿಲ್ಲ. ಕಾರಣ ಸಮಸಮಾಜ ನಿರ್ಮಾಣವಾದರೆ ಶೋಷಣೆಗೆ ಅವಕಾಶ ಇರುವುದಿಲ್ಲ. ಸಮಾಜದಲ್ಲಿ ಮೇಲು ಕೀಳು ಎಂಬ ತಾರತಮ್ಯ ಇದ್ದಾಗ ಮಾತ್ರ ಶೋಷಣೆಗೆ ಅವಕಾಶ ಇರುತ್ತದೆ. ಅವರಿಗೆ ತಾವು ಮೇಲ್ವರ್ಗದ ಜನ ಎಂಬ ಅಭಿಪ್ರಾಯ ಸಮಾಜದಲ್ಲಿ ಯಾವಾಗಲು ಇರಬೇಕು ಎಂದು ಬಯಸುವವರು.

ಸಂಪತ್ತು, ಅಧಿಕಾರ ತಮ್ಮ ಕೈಯಲ್ಲೇ ಇರಬೇಕು ಎಂಬ ಕಾರಣಕ್ಕೆ ಚತುರ್ವರ್ಣ ವ್ಯವಸ್ಥೆಯನ್ನು ಸ್ಥಾಪಿಸಿ, ಮನುಸ್ಮೃತಿಯನ್ನು ಒಪ್ಪಿಕೊಂಡರು. ಇದಕ್ಕೆ ವಿರುದ್ಧವಾಗಿ ಸಮಾನತೆ, ಸ್ವಾತಂತ್ರ್ಯ, ಸ್ವಾಭಿಮಾನಿ ಬದುಕಿನ ಅವಕಾಶ ನೀಡುವ ಸಂವಿಧಾನವನ್ನು ಬಾಬಾ ಸಾಹೇಬರು ನೀಡಿದರು. ಸಂವಿಧಾನವು ಸಮಾಜದಲ್ಲಿ ಶೋಷಣೆಗೆ ಒಳಗಾದ ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಈ ಹಾದಿಯಲ್ಲಿ ಮೀಸಲಾತಿಯೂ ಒಂದು ಭಾಗ. ಹೀಗಾಗಿ ಅವರು ಸಂವಿಧಾನ ವಿರೋಧ ಮಾಡುತ್ತಾರೆ ಎಂದರು.

ಪದೇ ಪದೇ ಇನ್ನೆಷ್ಟು ವರ್ಷ ಮೀಸಲಾತಿ ಇರಬೇಕು ಎಂದು ಪ್ರಶ್ನಿಸುತ್ತಿದ್ದವರು ಬಿಜೆಪಿಯವರು. ಈಗ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ ಮೇಲೆ ಬಾಯಿ ಮುಚ್ಚಿಕೊಂಡಿದ್ದಾರೆ. ಆರ್ಥಿಕ ಸ್ಥಿತಿಯನ್ನು ಆಧರಿಸಿ ಮೀಸಲಾತಿ ನೀಡಬಹುದು ಎಂಬುದು ಸಂವಿಧಾನದಲ್ಲಿ ಇಲ್ಲ. ಕೇಂದ್ರ ಸರ್ಕಾರ ತರಾತುರಿಯಲ್ಲಿ ಒಂದಿನ ಲೋಕಸಭೆಯಲ್ಲಿ, ಒಂದಿನ ರಾಜ್ಯಸಭೆಯಲ್ಲಿ ಮಸೂದೆ ಪಾಸ್‌ ಮಾಡಿಕೊಂಡು, ಜಾರಿಗೆ ನೀಡಿತು. ಕೇವಲ 48 ಗಂಟೆಯಲ್ಲಿ ಯಾವುದೇ ಸಮೀಕ್ಷೆಯ ವರದಿ ಇಲ್ಲದೆ, ಹೋರಾಟಗಳಿಲ್ಲದೆ ಮೀಸಲಾತಿ ನೀಡಿಬಿಟ್ರು. ಈಗ ಮೀಸಲಾತಿ ಇಲ್ಲದವರು ಯಾರಾದರೂ ಉಳಿದಿದ್ದಾರಾ? ಹೀಗಾದರೆ ಸಾಮಾಜಿಕವಾಗಿ ಸಮಾನತೆ ಹೇಗೆ ಸಾಧ್ಯ? ಶೋಷಿತ ಜನರಿಗೆ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Inside Story: ಪರಮೇಶ್ವರ್ ಬಾಣಕ್ಕೆ ಸಭೆಯೇ ಸೈಲೆಂಟ್: ʼಬೆಂಬಲಿಗರʼ ನಡುವೆ ಆಯ್ಕೆಯ ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ

Exit mobile version