ಬೆಂಗಳೂರು: ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಕಾಂಗ್ರೆಸ್‌ನೊಳಗಿನ ಕುರ್ಚಿ ಕಿತ್ತಾಟ (Fight for Chief Minister post) ಜೋರಾಗಿದೆ. ಸಿದ್ದರಾಮಯ್ಯ (Siddaramaiah) ಅವರ ಟೀಮ್ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಸನ್ಯಾಸಿ ಮಾಡಿ ಹಿಮಾಲಯಕ್ಕೆ ಕಳುಹಿಸಲು ರೆಡಿಯಾಗಿದೆ ಎಂದು ಬಿಜೆಪಿ ನಾಯಕ, ಶಾಸಕ ಆರ್. ಅಶೋಕ್ (R Ashok) ಗೇಲಿ ಮಾಡಿದ್ದಾರೆ. ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರು ಅಧಿಕಾರವನ್ನು ಡಿ.ಕೆ. ಶಿವಕುಮಾರ್‌ಗೆ ಬಿಟ್ಟುಕೊಡುವುದಿಲ್ಲ (Karnataka Politics) ಎಂದು ಅವರು ಸ್ಪಷ್ಟಪಡಿಸಿದರು.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಪ ಸಂಸದರಾಗಿರುವ ಡಿ.ಕೆ ಸುರೇಶ್ ಅವರು ಒಳ್ಳೆಯವರು. ಎಲ್ಲ ಕಡೆಯೂ ಕಣ್ಣೀರು ಹಾಕ್ತಾ ಇದ್ದಾರೆ. ನಮ್ಮಣ್ಣ ಸಿಎಂ ಆಗಲ್ಲ ಎಂದು ಕಣ್ಣೀರು ಹಾಕ್ತಿದ್ದಾರೆ. ಡಿ.ಕೆ ಶಿವಕುಮಾರ್ ಈವಾಗ್ಲೇ ಗಡ್ಡ ಬಿಟ್ಟು ಬಿಟ್ಟಿದ್ದಾರೆ. ತಲೆ ಕೂದಲು ಎಲ್ಲ ಬಿಳಿಯಾಗಿದೆ. ಕೊನೆಗೆ ಸಿದ್ದರಾಮಯ್ಯ ಮತ್ತು ಟೀಂ ಡಿ.ಕೆ ಶಿವಕುಮಾರ್ ಅವರನ್ನು ಹಿಮಾಲಯಕ್ಕೆ ಕಳುಹಿಸುತ್ತಾರೆ. ಅವರು ಶಿವಕುಮಾರ್ ಅವರನ್ನು ಸನ್ಯಾಸಿ ಮಾಡಲು ಹೊರಟಿದೆʼʼ ಎಂದು ಹೇಳಿದರು.
ಕುರ್ಚಿ ಕಿತ್ತಾಟ ಜೋರಾಗಿ ಕಾಂಗ್ರೆಸ್ ಆದಷ್ಟು ಬೇಗ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಾ ಹೇಳಿದರು.
ಕಿತ್ತಾಡಿ ಅಂತ ನಾವು ಹೇಳಿದ್ವಾ?
ಕುರ್ಚಿ ಕಿತ್ತಾಟಕ್ಕೆ ಸಂಬಂಧಿಸಿ ಬಿಜೆಪಿಯ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ಮೊದಲು ನೋಡಿಕೊಳ್ಳಿ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್,
ʻʻಕಾಂಗ್ರೆಸ್‌ನವರೇ ಕುರ್ಚಿಗಾಗಿ ಕಿತ್ತಾಡಿ ಅಂತಾ ನಾವೇನು ಹೇಳಿಲ್ಲ. ಸಿದ್ದರಾಮಯ್ಯ ನವರೇ ನಿಮ್ಮ ಆಪ್ತ ಸಚಿವರಿಗೆ ಕರೆದು ಬುದ್ದಿ ವಾದ ಹೇಳಿ. ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವರು. ಹೆಗ್ಗಣ ಬಿದ್ದಿರೋದು ನಿಮ್ಗಳ ತಟ್ಟೆಯಲ್ಲಿʼʼ ಎಂದು ಪ್ರತಿದಾಳಿ ನಡೆಸಿದರು.
ಈಗ ಸಿಗುತ್ತಿರುವ ಐದು ಕೆಜಿಯೂ ನಿಂತು ಹೋದೀತು ಹುಷಾರ್!
ʻʻರಾಜ್ಯದಲ್ಲಿರುವುದು ಎಡಬಿಡಂಗಿ ಸರ್ಕಾರ. ಅದು ಕೇಂದ್ರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ನಾಳೆ ಏನೋ ಪ್ರತಿಭಟನೆ ಮಾಡ್ತಿದ್ದಾರಂತೆʼʼ ಎಂದು ಲೇವಡಿ ಮಾಡಿದ ಅಶೋಕ್, ಒಂದು ವೇಳೆ ಪರಿಸ್ಥಿತಿ ಹದಗೆಟ್ಟರೆ ಈಗ ಸಿಗುತ್ತಿರುವ ಐದು ಕೆಜಿ ಅಕ್ಕಿಯೂ ಸಿಗಲಿಕ್ಕಿಲ್ಲ ಎಂದು ಎಚ್ಚರಿಸಿದರು.
ʻʻರಾಜ್ಯ ಸರ್ಕಾರ ಈಗ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಒದಗಿಸುತ್ತಿರುವುದು ಕೇಂದ್ರ ಸರ್ಕಾರ. ಹೆಚ್ಚುವರಿಯಾಗಿ ಅಕ್ಕಿ ಕೊಡುತ್ತೇವೆ ಅನ್ನೋದು ಅವರ ಪ್ರಣಾಳಿಕೆ, ಅವರ ತೀರ್ಮಾನ. ನಮ್ಮ ಬಳಿ ಇರುವ ಅಕ್ಕಿ ದಾಸ್ತಾನನ್ನು ಎಲ್ಲ ರಾಜ್ಯಗಳಿಗೆ ಕೊಡಬೇಕು. ಇವಾಗ ಮುಂಗಾರು ಕೂಡ ಮುಂದೆ ಹೋಗಿದೆ. ಬೆಳೆ ಬರೋದು ಕೂಡ ತಡವಾಗುತ್ತದೆ. ಸಮಸ್ಯೆ ಆದರೆ ಇವಾಗ ಕೊಡುವ 5 ಕೆಜಿ ಅಕ್ಕಿಯನ್ನು ಕೊಡೋಕೆ ಆಗಲ್ಲʼʼ ಎಂದು ಎಚ್ಚರಿಸಿದರು. ʻʻಕಾಂಗ್ರೆಸ್‌ನವರ ಮಾತು ಕೇಳಿ ಅಕ್ಕಿ ಕೊಟ್ಟರೆ ಈಗ ಕೊಡುತ್ತಿರುವ ಐದು ಕೆಜಿ ಕೂಡಾ ನಿಂತು ಹೋದೀತುʼʼ ಎಂದರು.
ಡಿ.ಕೆ. ಮಾಟ ಮಂತ್ರ ಮಾಡಿ ಅಕ್ಕಿ ತರಿಸಲಿ!
ʻʻಕಾಂಗ್ರೆಸ್‌ನವರು ನಾವು ಚುನಾವಣೆ ಗೆದ್ದಿದ್ದೇವೆ. ನಾವು ಚಾಣಕ್ಯ ತಂತ್ರ ಮಾಡಿದ್ಸೇವೆ ಅಂತೀರಲ್ಲ. ಹಾಗಿದ್ದರೆ ಚಾಣಕ್ಯ ತಂತ್ರದಿಂದಲೇ ಅಕ್ಕಿ ತರಿಸಿಕೊಳ್ಳಲಿ. ಹೇಗೂ ಡಿಕೆ ಶಿವಕುಮಾರ್ ಅವ್ರು ಮಾಟ ಮಂತ್ರ ಮಾಡಿಸೋದ್ರಲ್ಲಿ ಎಕ್ಸ್‌ಪರ್ಟ್. ಅವರೇ ಏನಾದರೂ ಮಾಟ ಮಂತ್ರ ಮಾಡಿಸಿ ಅಕ್ಕಿ ಬರುವ ರೀತಿ ಮಾಡಿಸಲಿʼʼ ಎಂದೂ ಸವಾಲು ಹಾಕಿದರು.
ನಿಮ್ಮ 135 ಶಾಸಕರಿಗೆ ಏನಾಗಿದೆ?
ʻʻಬಿಜೆಪಿ ಎಂಪಿಗಳಿಗೆ ಧಮ್ಮು, ತಾಕತ್ ಇದ್ರೆ ನಮ್ಮ ಜೊತೆಗೆ ಬಂದು ಕೇಂದ್ರ ಸರ್ಕಾರದ ಬಳಿ ಅಕ್ಕಿ ಕೊಡಿ ಅಂತ ಕೇಳಲಿʼʼ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್ ಅವರು, ನಮ್ಮ 25 ಎಂಪಿಗಳ ಬಗ್ಗೆ ಮಾತಾಡ್ತಿರಲ್ವಾ., ನಿಮ್ಮ 135 ಶಾಸಕರು ಇದಾರಲ್ವಾ? ಈಗ ತೋರ್ಸಿ ನಿಮ್ಮ ಧಮ್ಮು, ತಾಕತ್ತು. ಈಗ 135 ಶಾಸಕರನ್ನು ಕರೆದುಕೊಂಡು ಹೋಗಿ ಅಕ್ಕಿ ತಗೊಂಡು ಬನ್ನಿ.. ತೋರ್ಸಿ ನಿಮ್ಮ ತಾಕತ್ತು ಎಂದರು.
ನನ್ನನ್ನು ಸಾರಿಗೆ ಸಮಿತಿ ಅಧ್ಯಕ್ಷನಾಗಿ ಮಾಡಿ ಎಂದ ಅಶೋಕ್
ರಾಜ್ಯದಲ್ಲಿ ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಓಡಾಟದಿಂದ ತೊಂದರೆ ಆದರೆ ಆರ್. ಅಶೋಕ್ ಅವರೇ ಹೊಣೆ ಎಂಬ ಕಾಂಗ್ರೆಸ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ʻʻಸಮಸ್ಯೆಗಳ ಸಮಿತಿಯ ಅಧ್ಯಕ್ಷರಾಗಿ ಬೇಕಿದ್ರೆ ನನ್ನನ್ನು ಮಾಡಲಿ. ನನಗೆ ಗೊತ್ತು ಈ ಹಿಂದೆ ಸಾರಿಗೆ ಸಚಿವರಿಗೆ ಸಮಸ್ಯೆ ಏನೇನು ಆಗುತ್ತದೆ ಅಂತಾ. ಎಲ್ಲಾ ಪರಿಹಾರ ಮಾಡ್ತೀನಿʼʼ ಎಂದರು.
ಬೇಗ ಬೇಗನೆ ಪ್ರವಾಸ, ತೀರ್ಥಯಾತ್ರೆ ಮುಗಿಸಿಕೊಳ್ಳಿ ಎಂದು ನಾನು ಒಳ್ಳೆಯ ದೃಷ್ಟಿಯಿಂದಲೇ ಹೇಳಿದ್ದೇನೆ. ಲೋಕಸಭೆ ಚುನಾವಣೆ ವರೆಗೂ ಈ ಯೋಜನೆ ಇರುತ್ತದೆ. ಆ ಮೇಲೆ ನಿಂತು ಹೋಗುತ್ತದೆ ಅನ್ನೋ ಕಾರಣಕ್ಕೆ ಹೇಳಿದ್ದು ಎಂದರು.
ಕಾಂಗ್ರೆಸ್ ಹಿಂದುಗಳ ಪರವಾಗಿ ಇರುವುದುಂಟೇ?
ʻʻಉಚಿತ ಬಸ್‌ನಿಂದಾಗಿ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಇದು ನಿಜವಾದ ಹಿಂದುತ್ವ ಮತ್ತು ಹಿಂದು ಧರ್ಮಕ್ಕೆ ಕಾಂಗ್ರೆಸ್ ನೀಡುತ್ತಿರುವ ಬೆಂಬಲʼʼ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್ ಅವರು, ʻʻಯಾರಾದ್ರೂ ಹಿಂದೂಗಳ ವಿರೋಧಿಗಳು ಇದ್ದರೆ ಅದು ಕಾಂಗ್ರೆಸ್ ನವರು. ಟಿಪ್ಪು ಜಯಂತಿ ಮಾಡಿದ ಅವರು ಹಿಂದೂ ಪರ ಆಗ್ತಾರಾ.? ಲಕ್ಷಾಂತರ ಹಿಂದೂಗಳ ಜನರ ಹತ್ಯೆ ಮಾಡಿದ್ದು ಟಿಪ್ಪು, ಮತಾಂತರ ಮಾಡಿದ್ದು ಟಿಪ್ಪು, ಅವನ ಜಯಂತಿ ಆಚರಿಸುವ ಕಾಂಗ್ರೆಸ್ ಹಿಂದೂಗಳ ಪರ ಹೇಗೆ ಆಗಲು ಸಾಧ್ಯ ಎಂದು ಕೇಳಿದರು.
ಇದನ್ನೂ ಓದಿ: Rice Politics: ಅಕ್ಕಿ ರಾಜಕೀಯ ತೀವ್ರ; ನಾಳೆ ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ