ಬೆಳಗಾವಿ: ರಾಜ್ಯ ರಾಜಕೀಯದಲ್ಲಿ (Karnataka Politics) ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಸಂಪರ್ಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ಹಲವು ಶಾಸಕರು ಇದ್ದಾರೆ ಎಂಬ ಸುದ್ದಿಗಳಿಗೆ ಈಗ ಪುಷ್ಟಿ ಸಿಕ್ಕಿದೆ. ಬುಧವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ (Congress Legislature Party meeting) ಬಿಜೆಪಿಯ ಮೂವರು ರೆಬೆಲ್ ಶಾಸಕರು ಹಾಜರಾಗಿದ್ದಾರೆ. ಅವರ ಈ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಹಾಗೂ ಎಂಎಲ್ಸಿ ಎಚ್. ವಿಶ್ವನಾಥ್ (ST Somashekar Shivaram Hebbar and MLC H Vishwanath) ಭಾಗಿಯಾಗಿದ್ದಾರೆ. ಆದರೆ, ನಾವು ಹೋಗಿದ್ದು ಊಟಕ್ಕಷ್ಟೇ ಎಂದು ಹೇಳಿಕೆ ನೀಡಿದ್ದಾರೆ. ಈ ನಡುವೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (Opposition leader R Ashok) ಸಹ ಪ್ರತಿಕ್ರಿಯೆ ನೀಡಿದ್ದು, ಸೋಮಶೇಖರ್ ನನಗೆ ಹೇಳಿಯೇ ಊಟಕ್ಕೆ ಹೋಗಿದ್ದರು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ರಾತ್ರಿ ನಡೆದಿದ್ದ ಸಿಎಲ್ಪಿ ಸಭೆಗೆ ಎಸ್.ಟಿ. ಸೋಮಶೇಖರ್ ಮಾತ್ರವೇ ಹಾಜರಾಗಿದ್ದರು. ಕೆಲವು ಹೊತ್ತು ಅವರು ಸಭೆಯಲ್ಲಿ ಕುಳಿತು ಬಳಿಕ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಉಳಿದವರು ಊಟಕ್ಕೆ ಹೋಗಿ ಬಂದಿದ್ದರು.
ಡಿಸಿಎಂ ಡಿಕೆಶಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿ ಈ ಮೂವರು ಶಾಸಕರು ವಾಪಸ್ ಬಂದಿದ್ದಾರೆ. ಈ ಮೂರು ಜನ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಸಂಗೀತ ಸಂಜೆ ಆಯೋಜನೆ; ಡ್ಯಾನ್ಸ್ ಮಾಡಿದ ಎಸ್ಟಿಎಸ್
ಕಾಂಗ್ರೆಸ್ ಶಾಸಕರಿಗಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂಗೀತ ಸಂಜೆ ಏರ್ಪಡಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ ಸಾಧು ಕೋಕಿಲ ನೇತೃತ್ವದಲ್ಲಿ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕರನ್ನು ಹಾಡುವಂತೆ, ಡ್ಯಾನ್ಸ್ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಈ ವೇಳೆ ನೂತನ ಶಾಸಕ ವಿಶ್ವಾಸ್ ವೈದ್ಯ ಅವರು ನೀನೇ ರಾಜಕುಮಾರ ಹಾಡು ಹಾಡಿದ್ದಾರೆ. ಈ ಹಾಡಿಗೆ ಎಸ್.ಟಿ ಸೋಮಶೇಖರ್ ನೃತ್ಯ ಮಾಡಿದ್ದಾರೆ. ವೇದಿಕೆ ಮೇಲೆ ತೆರಳಿ ಅವರು ಡ್ಯಾನ್ಸ್ ಮಾಡಿದ್ದಾರೆ. ಆದರೆ, ಶಿವರಾಂ ಹೆಬ್ಬಾರ್ ಅವರು ವೇದಿಕೆ ಕೆಳಭಾಗದಲ್ಲಿ ಕುಳಿತಿದ್ದರು.
ಹೇಳಿಯೇ ಹೋಗಿದ್ದಾರೆ; ಕರೆದು ಮಾತನಾಡುವೆನೆಂದ ಅಶೋಕ್
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, ಊಟಕ್ಕೆ ಕರೆದಿದ್ದರು ಅದಕ್ಕಾಗಿ ಹೋಗಿದ್ದೆವು ಎಂದು ಎಸ್.ಟಿ.ಸೋಮಶೇಖರ್ ನನ್ನ ಬಳಿ ಹೇಳಿದ್ದಾರೆ. ಆ ದೃಷ್ಟಿಯಿಂದ ಯಾವುದೇ ರೀತಿಯ ಶಿಸ್ತು ಉಲ್ಲಂಘನೆ ಮಾಡಿಲ್ಲ. ನಾನು ಕೂಡ ಅವರ ಬಳಿ ಮಾತನಾಡಿದ್ದೇನೆ. ಅವರ ನಿನ್ನೆ ಬಿಜೆಪಿ ಧರಣಿಯಲ್ಲೂ ಭಾಗವಹಿಸಿದ್ದಾರೆ. ಆದರೂ ನಾನು ಅವರನ್ನು ಕರೆದು ಮಾತನಾಡುತ್ತೇನೆ. ನಮ್ಮ ಸಭೆಗೆಲ್ಲ ಬಂದಿದ್ದರು, ಕೊಠಡಿಗೂ ಬಂದು ಮಾತನಾಡಿದ್ದಾರೆ. ಏನೇ ಇದ್ದರೂ ಅವರ ಜತೆ ನಾನು ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಮೋದಿ ಮತ್ತಷ್ಟು ಸ್ಟ್ರಾಂಗ್! ಹೊಸ ಸಮೀಕ್ಷೆ ಪ್ರಕಾರ ಎನ್ಡಿಎಗೆ ಸಿಗುವ ಸೀಟೆಷ್ಟು?
ಊಟಕ್ಕೆ ಬನ್ನಿ ಎಂದು ಕರೆದಿದ್ದರು, ಮೀಟಿಂಗ್ಗೆ ಅಲ್ಲ: ವಿಶ್ವನಾಥ್
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಲ್ಸಿ ಎಚ್. ವಿಶ್ವನಾಥ್, ಹೌದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನನ್ನ ಗೆಳೆಯ. ಅವರು ಆಹ್ವಾನ ನೀಡಿದ್ದಕ್ಕೆ ಹೋಗಿದ್ದೆವು. ಊಟಕ್ಕೆ ಬನ್ನಿ ಎಂದು ಹೇಳಿದ್ದರು. ಆದರೆ, ಪಾರ್ಟಿ ಮೀಟಿಂಗ್ಗೆ ಬನ್ನಿ ಅಂತ ಕರೆದಿಲ್ಲ. ನಾನು ಹೋದ ಮೇಲೆ ಗೊತ್ತಾಗಿಲ್ಲ. ಮೀಟಿಂಗ್ಗೆ ಅಥವಾ ಈಟಿಂಗ್ಗೆ ಅಂತ ಗೊತ್ತಾಗಿಲ್ಲ. ನಾನು ಹೋದಾಗ ಆರಂಭ ಆಗಿತ್ತು. ಅರ್ಧ ಗಂಟೆ ಕುಳಿತುಕೊಂಡೆ. ಅದು ನಮ್ಮ ಹಳೇ ಮನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವರ ಜತೆ ಕುಳಿತಿದ್ದೆ. ನಮ್ಮ ಮನೆ ಅಲ್ಲಿ. ಇಲ್ಲಿ ಸುಮ್ಮನೆ ಎಂದು ಅವರಿಗೆ ಹೇಳಿದ್ದೇನೆ ಎಂಬುದಾಗಿ ತಿಳಿಸಿದರು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಶಿವರಾಂ ಹೆಬ್ಬಾರ್ ನಿರಾಕರಿಸಿದ್ದಾರೆ.