Site icon Vistara News

Karnataka Politics : ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ

Ashwathnarayan DK Shivakumar and CM Siddaramaiah

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ (State Congress Government) ಬಂದು ನಾಲ್ಕು ತಿಂಗಳಾಗಿದೆ. ಈ ವೇಳೆ ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಅಲ್ಲದೆ, ಈ ಹಿಂದೆ ಅಧಿಕಾರಕ್ಕೆ ಬರುವ ಮುಂಚೆ ಕಾಂಗ್ರೆಸ್‌ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ (40 percent commission) ಸಹಿತ ಭಾರಿ ಭ್ರಷ್ಟಾಚಾರಗಳ ಬಗ್ಗೆ ಮಾತನಾಡಿತ್ತು. ಅಧಿಕಾರಕ್ಕೆ ಬಂದರೆ ಈ ಎಲ್ಲ ಹಗರಣಗಳ ತನಿಖೆ (Investigation of scams) ನಡೆಸುವುದಾಗಿಯೂ ಹೇಳಿತ್ತು. ಅಲ್ಲದೆ, ಅಧಿಕಾರಕ್ಕೆ ಬಂದ ಮೇಲೂ ತನಿಖೆ ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DMC DK Shivakumar) ಅವರು ಆಗಾಗ ಹೇಳುತ್ತಿದ್ದರು. ಈಗ ಒಂದಾದ ಮೇಲೆ ಒಂದರಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಾಮಗಾರಿಗಳು, ಕಾರ್ಯಚಟುವಟಿಕೆಯ ತನಿಖೆಗೆ ಆದೇಶ ಮಾಡುತ್ತಾ ಬಂದಿದೆ. 40 ಪರ್ಸೆಂಟ್‌ ಕಮಿಷನ್‌, ಕಳಪೆ ಗುಣಮಟ್ಟದ ಶಾಲಾ ಸಮವಸ್ತ್ರ ಪೂರೈಕೆ, ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಆದೇಶ ಮಾಡಿತ್ತು. ಈಗ ಮತ್ತೊಂದು ಹಗರಣದ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಮತದಾರರ ಮಾಹಿತಿ ಸಂಗ್ರಹಕ್ಕೆ ಚಿಲುಮೆ ಸಂಸ್ಥೆಯನ್ನು (Chilume NGO) ರಾಜ್ಯ ಸರ್ಕಾರ ಬಳಸಿಕೊಂಡಿತ್ತು. ಇದಕ್ಕೆ ಪ್ರಮುಖವಾಗಿ ಮಾಜಿ ಸಚಿವ, ಹಾಲಿ ಶಾಸಕ ಅಶ್ವತ್ಥನಾರಾಯಣ್ (Former Minister Ashwathnarayan) ವಿರುದ್ಧ ಕಾಂಗ್ರೆಸ್ ಆರೋಪ ಮಾಡಿತ್ತು. ಆದರೆ, ಈ ಬಗ್ಗೆ ಅಶ್ವತ್ಥನಾರಾಯಣ್ ಸ್ಪಷ್ಟೀಕರಣ ನೀಡಿದ್ದು, “ನಾನು ಚಿಲುಮೆ ಸಂಸ್ಥೆಯನ್ನು ಬಳಕೆ ಮಾಡಿಲ್ಲ” ಎಂದು ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಚಿಲುಮೆ ಸಂಸ್ಥೆ ಮತ್ತು ಬಿಬಿಎಂಪಿ ಆಯುಕ್ತರ ವಿರುದ್ಧ ಸರ್ಕಾರದಿಂದ ತನಿಖಾಸ್ತ್ರವನ್ನು ಪ್ರಯೋಗ ಮಾಡಲಾಗಿದೆ.

ಇದನ್ನೂ ಓದಿ: Karnataka Weather Forecast : ಕರಾವಳಿಯಲ್ಲಿ ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಫುಲ್‌ ಸ್ಟಾಪ್‌

ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು (Former MLC Ramesh Babu) ಬರೆದ ಪತ್ರದ ಮೇರೆಗೆ ಸಿಎಂ ತನಿಖೆಗೆ ಸೂಚನೆ ನೀಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದು, ಇದರ ಆಧಾರದ ಮೇರೆಗೆ ಚುನಾವಣಾ ಆಯೋಗಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆದಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿದ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸಿಎಸ್ ನಿರ್ದೇಶನ ನೀಡಿದ್ದಾರೆ. ಚಿಲುಮೆ ಸಂಸ್ಥೆ ಮಾತ್ರವಲ್ಲ, ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಿಬಿಎಂಪಿ ಆಯುಕ್ತರ ಮೇಲೆ ತನಿಖೆ ಏಕೆ?

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Chief Commissioner Tushar Girinath) ಲೋಪ ಎಸಗಿದ್ದಾರೆ.‌ ಮತದಾರರ ಖಾಸಗಿ ‌ಮಾಹಿತಿ ಸಂಗ್ರಹಕ್ಕೆ ಅವಕಾಶ ನೀಡಿದ್ದಾರೆ. ಚಿಲುಮೆ ಸಂಸ್ಥೆಗೆ ಮತದಾರ ಖಾಸಗಿ ಮಾಹಿತಿ ಸಂಗ್ರಹಕ್ಕೆ‌ ಅವಕಾಶ ನೀಡಿದ್ದಾರೆ ಎಂಬ ಆರೋಪ ಅವರ ಮೇಲೆ ಕೇಳಿಬಂದಿತ್ತು. ಈಗ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಚಿಲುಮೆ ಸಂಸ್ಥೆ ಜತೆ ಸೇರಿ ಲೋಪ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಸೂಚನೆ ನೀಡಿದ್ದಾರೆ.

ರಮೇಶ್‌ ಬಾಬು ದೂರಿನಲ್ಲಿ ಏನಿದೆ?

ಬಿಬಿಎಂಪಿ ವ್ಯಾಪ್ತಿಯ ಸುಮಾರು ನಾಲ್ಕರಿಂದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಐದು ಅಭ್ಯರ್ಥಿಗಳ ಸೋಲಿಗೆ ಕಾರಣಕರ್ತರಾಗಿರುತ್ತಾರೆ. ಚಿಲುಮೆ ಸಂಸ್ಥೆಯ ಲೋಪದ ಸಂಬಂಧ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿ ವರದಿಯನ್ನು ಪಡೆದುಕೊಂಡಿದೆ. ಆದರೆ, ಈ ತನಿಖೆ ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್‌ರವರು ಕರ್ತವ್ಯಲೋಪ ಎಸಗಿದ್ದಾರೆ. ಇವರು ಮಾಡಿರುವ ತಪ್ಪಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಚುನಾವಣಾ ಅಧಿಕಾರಿಯಾಗಿ ಇವರ ಕರ್ತವ್ಯಲೋಪವನ್ನು ಬೇರೆ ಅಧಿಕಾರಿಗಳ ಮೇಲೆ ವರ್ಗಾಯಿಸಲೂ ಸಾಧ್ಯವಿಲ್ಲ. ಉನ್ನತ ಮಟ್ಟದ ತನಿಖೆಯ ಮೂಲಕ ಇವರ ಅಕ್ರಮ ಬಯಲುಗೊಳಿಸುವುದರ ಜತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಮತ್ತೆ ಇಂತಹ ಲೋಪಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿರುತ್ತದೆ. ರಾಜ್ಯ ಸರ್ಕಾರವು ಯಾವುದೇ ಪ್ರಭಾವಕ್ಕೆ ಒಳಗಾಗದೆ ಇವರ ಮೇಲೆ ಪೂರ್ಣ ಮಟ್ಟದ ತನಿಖೆಯನ್ನು ನಡೆಸಬೇಕಾಗಿರುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್‌ರವರ ಮೂಲಕ ಆಗಿರುವ ಮತದಾರರ ಪಟ್ಟಿಯ ಲೋಪವನ್ನು ತನಿಖೆ ಮಾಡಿಸಬೇಕು ಎಂದು ರಮೇಶ್ ಬಾಬು ಪತ್ರದಲ್ಲಿ ಕೋರಿದ್ದಾರೆ.

ಹಲವು ತನಿಖೆಗಳಿಗೆ ಆದೇಶ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ 40 ಪರ್ಸೆಂಟ್‌ ಕಮಿಷನ್‌ ಪಡೆಯಲಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕಮಿಷನ್‌ ದಂಧೆ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿತ್ತು. ಇದಲ್ಲದೆ, ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಸಹ ಆದೇಶ ಮಾಡಲಾಗಿತ್ತು. ತನಿಖೆ ನಡೆದು ವರದಿ ಬರುವವರೆಗೆ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿ ಮಾಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ಹೇಳಿತ್ತು.

ಇದಾದ ಬಳಿಕ ಕೇಂದ್ರೀಯ ಭಂಡಾರದಿಂದ ಪೂರೈಸಲಾಗಿದ್ದ ಶೇಕಡಾ 90ರಷ್ಟು ಶಾಲಾ ಸಮವಸ್ತ್ರ ಕಳಪೆ ಆಗಿದೆ. ಕಳಪೆ ಸಮವಸ್ತ್ರ ಪೂರೈಸಿದವರಿಗೆ ಹಣ ಕೊಡಲಾಗಿತ್ತು ಎಂಬ ಆರೋಪ ಮಾಡಿ ರಾಜ್ಯ ಸರ್ಕಾರವು ಕೇಂದ್ರೀಯ ಭಂಡಾರದ ವಿರುದ್ಧ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯನ್ನು ಪಡೆಯಲಾಗಿತ್ತು.

4 ತನಿಖಾ ಸಮಿತಿ ರಚನೆಗೆ ಆದೇಶ

2019-20ರಿಂದ 2022-23ರವರೆಗಿನ ನಡೆದ ಕಾಮಗಾರಿಗಳ ಅಕ್ರಮಗಳ ತನಿಖೆಗೆ ಪ್ರತ್ಯೇಕ 4 ತನಿಖಾ ಸಮಿತಿ ರಚಿಸಿ ನಗರಾಭಿವೃದ್ಧಿ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಿತ್ತು.

ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ನಿರ್ದಿಷ್ಟ ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ ಆರೋಪ, ನಕಲಿ ಬಿಲ್ ಸೃಷ್ಟಿ, ಕಾಮಗಾರಿ ನಡೆಸದೆಯೇ ಬಿಲ್‌ ಪಾವತಿ, ಗುಣಮಟ್ಟ ಕಾಪಾಡದಿರುವುದು ಸೇರಿ ಹಲವು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಕ್ರಮಗಳ ತನಿಖೆಗೆ ಪ್ರತ್ಯೇಕ ತನಿಖಾ ಸಮಿತಿ ರಚನೆ ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು, ತಜ್ಞರು ಒಳಗೊಂಡಂತೆ 4 ತನಿಖಾ ಸಮಿತಿ ರಚಿಸಲಾಗಿತ್ತು.

2019-20ರಿಂದ 2022-23ರವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಓಎಫ್‌ಸಿ ಕೇಬಲ್‌ ಅಳವಡಿಕೆ, ಬೃಹತ್‌ ನೀರಿನ ಕಾಲುವೆ, ಕೆರೆ ಅಭಿವೃದ್ಧಿ ಕಾಮಗಾರಿ, ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅಕ್ರಮಗಳ ತನಿಖೆಗೆ ಆದೇಶ ಹೊರಡಿಸಿದ್ದು, ಅಗತ್ಯ ಬಿದ್ದರೆ ತಜ್ಞರ ಮೂಲಕ ಗುಣಮಟ್ಟದ ಪರೀಕ್ಷೆಗೂ ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ: Karnataka Politics : ರಾಜ್ಯ ಸರ್ಕಾರ ಪತನಕ್ಕೆ ಮೂವರು ನಾಯಕರ ಮೆಗಾ ಪ್ಲ್ಯಾನ್!

ತನಿಖಾ ಸಮಿತಿಗಳು

1. ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ತನಿಖಾ ಸಮಿತಿ
ಉಜ್ವಲ್ ಕುಮಾರ್ ಘೋಷ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿ

2.ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಒಎಫ್‌ಸಿ ಕೇಬಲ್ ಅಳವಡಿಕೆಯ ಅಕ್ರಮ ತನಿಖಾ ಸಮಿತಿ
ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದ 6 ಸದಸ್ಯರ ಸಮಿತಿ

3.ಬೃಹತ್ ನೀರುಗಾಲುವೆ, ಸ್ವಾಧೀನಾನುಭವ (ಒಸಿ) ನೀಡುವ ಅಕ್ರಮದ ತನಿಖಾ ಸಮಿತಿ
ಪಿ.ಸಿ. ಜಾಫರ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿ

4.ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಹಾಗೂ ವಾರ್ಡ್‌ ಮಟ್ಟದ ಕಾಮಗಾರಿಗಳ ತನಿಖಾ ಸಮಿತಿ
ಡಾ.ವಿಶಾಲ್ ನೇತೃತ್ವದ 6 ಸದಸ್ಯರ ಸಮಿತಿ

Exit mobile version