Site icon Vistara News

Karnataka Politics : ಸುರ್ಜೇವಾಲ, ವೇಣುಗೋಪಾಲ್‌ ಕುಚುಕು ಕಲೆಕ್ಷನ್‌ ಏಜೆಂಟ್‌; ಅಕ್ಟೋಬರ್‌ ಮಾಮೂಲಿ ವಸೂಲಿ ಎಂದ ಬಿಜೆಪಿ

BJP Tweet against congress government

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಮುಗಿಬಿದ್ದಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲಿಯೂ ವಿಫಲವಾಗಿದೆ ಎಂದು ಆರೋಪಿಸಿರುವ ಬಿಜೆಪಿಯು ಇದೊಂದು “ಎಟಿಎಂ ಸರ್ಕಾರ” (ATM Sarkara) ಎಂದು ಕುಟುಕಿದೆ. ಅಕ್ಟೋಬರ್‌ ತಿಂಗಳ ಕಲೆಕ್ಷನ್‌ ಅನ್ನು ವಸೂಲಿ ಮಾಡಲು ನವ ದೆಹಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ (AICC general secretary KC Venugopal and Randeep Singh Surjewala) ಬಂದಿದ್ದಾರೆ ಎಂದು ತಿವಿದಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್‌ (Karnataka Congress) ನಡೆಯನ್ನು ಕಟುವಾಗಿ ಟೀಕಿಸಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಬಿಜೆಪಿ, ಕಾಂಗ್ರೆಸ್‌ ಸರ್ಕಾರವನ್ನು #ATMSarkara (ಎಟಿಎಂ ಸರ್ಕಾರ್)‌ ಎಂಬ ಹ್ಯಾಷ್‌ಟ್ಯಾಗ್‌ನಡಿ ಕೆಲವೊಂದು ಪ್ರಶ್ನೆಗಳನ್ನೂ ಕೇಳಿದೆ. ಅಲ್ಲದೆ, ಆಂತರಿಕ ಜಗಳ ಹಾಗೂ ಸಭೆಗಳ ಬಗ್ಗೆ ಪ್ರಸ್ತಾಪ ಮಾಡಿದೆ.

ಬಿಜೆಪಿ ಪೋಸ್ಟ್‌ನಲ್ಲೇನಿದೆ?

ಕರ್ನಾಟಕವನ್ನು ಕಾಂಗ್ರೆಸ್‌ ಸರ್ಕಾರ ತನ್ನೆಲ್ಲ ಖರ್ಚುಗಳ ಎಟಿಎಂ ಮಾಡಿಕೊಂಡಿದೆ ಎಂಬುದನ್ನು ಕಾಂಗ್ರೆಸ್ಸೇ ಪದೇ ಪದೆ ಸಾಬೀತುಪಡಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರ ವಹಿಸಿದ ಮೊದಲ ವಾರದಲ್ಲೇ ಅಧಿಕಾರಿಗಳ ಜತೆ ಖಾಸಗಿಯಾಗಿ ಕಲೆಕ್ಷನ್‌ ಸಭೆ ನಡೆಸಿದ್ದ ರಣದೀಪ್‌ ಸಿಂಗ್‌ ಸುರ್ಜೇವಾಲ ಹಾಗೂ ವಿಶೇಷ ಕಲೆಕ್ಷನ್‌ ಪ್ರತಿನಿಧಿ ಕೆ.ಸಿ. ವೇಣುಗೋಪಾಲ್‌ ಅವರು ಈಗ ತಿಂಗಳ ಕಲೆಕ್ಷನ್‌ ಎಣಿಸಲು ತಿಂಗಳ ಮೊದಲ ದಿನವೇ ಬೆಂಗಳೂರಿಗೆ ಬಂದಿದ್ದಾರೆ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Lok Sabha Election 2024 : ಹಾವೇರಿ ಕ್ಷೇತ್ರಕ್ಕೆ ಈಶ್ವರಪ್ಪ ಪುತ್ರನಿಗೆ ಟಿಕೆಟ್‌ ಕೊಟ್ಟರೆ ಸೋಲು: ಬಿ.ಸಿ. ಪಾಟೀಲ್

ಸಿಎಂ ಸಿದ್ದರಾಮಯ್ಯಗೆ ಪುರುಸೊತ್ತೇ ಇಲ್ಲ!

ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತ ನೋಡಿಕೊಳ್ಳುವುದಕ್ಕೆ ಒಂದಿನಿತೂ ಪುರುಸೊತ್ತೇ ಇಲ್ಲ. ತಮ್ಮ ಪಕ್ಷದಲ್ಲೇ ಅವರ ಬಗ್ಗೆ ಕೇಳಿಬರುತ್ತಿರುವ ಅಪಸ್ವರ ನಿಲ್ಲಿಸಲಾಗುತ್ತಿಲ್ಲ. ಹೀಗಿರುವಾಗ ಸುಗಮ ಆಡಳಿತ ನೀಡುವುದಾದರೂ ಹೇಗೆ? ಅಂದಹಾಗೆ ಕರ್ನಾಟಕ ಕಾಂಗ್ರೆಸ್‌ ಪಕ್ಷದೊಳಗಿನಿಂದಲೇ ಕೇಳಿಬರುತ್ತಿರುವ ಅಪಸ್ವರಗಳೇನು ಎಂಬುದನ್ನು ವಿಡಿಯೋದಲ್ಲಿ ಕಣ್ಣಾರೆ ನೋಡಿ ಎಂಬುದಾಗಿ ಬಿಜೆಪಿ ವಿಡಿಯೊವೊಂದನ್ನು ಅಪ್ಲೋಡ್‌ ಮಾಡಿದೆ.

“ಅಷ್ಟ” ಕಂಟಕ ಎಂದು ವ್ಯಂಗ್ಯವಾಡಿದ ಬಿಜೆಪಿ

ರಾಜ್ಯದ #ATMSarkara ಕ್ಕೆ ಎದುರಾಗಿರುವ “ಅಷ್ಟ” ಕಂಟಕ ಎಂದು ಪೋಸ್ಟ್‌ ಹಾಕಿರುವ ಬಿಜೆಪಿಯು ಅವುಗಳ ಪಟ್ಟಿಯನ್ನು ನೀಡಿದೆ.

  1. ಸಿಎಂ ಕುರ್ಚಿ ಕಂಟಕ
  2. ಸಚಿವ ಸ್ಥಾನ ವಂಚಿತರಿಂದ ಕಂಟಕ
  3. ಬೆಳಗಾವಿಯಲ್ಲಿ ಲಕ್ಷ್ಮಿ ಕಂಟಕ
  4. ಪರಮೇಶ್ವರ್‌ ಮನೆಯಲ್ಲಿ ಡಿನ್ನರ್‌ ಕಂಟಕ
  5. ಹೆಚ್ಚುವರಿ ಡಿಸಿಎಂ ಹುದ್ದೆಯ ಕಂಟಕ
  6. ನಿಗಮ ಮಂಡಳಿ ಹಂಚಿಕೆಯ ಕಂಟಕ
  7. ಅನುದಾನ ಸಿಗದ ಶಾಸಕರಿಂದ ಕಂಟಕ
  8. ಪಂಚ ರಾಜ್ಯ ಚುನಾವಣೆಗೆ ಕಲೆಕ್ಷನ್‌ ಕಂಟಕ

ರಾಜ್ಯ ಕಾಂಗ್ರೆಸ್‌ ಒಳಗಿನ ಆಂತರಿಕ ಕಲಹಗಳನ್ನು ಪ್ರಸ್ತಾಪಿಸಿ, ಅವುಗಳನ್ನು ಅಷ್ಟ ಕಂಟಕ ಎಂದು ವಿಂಗಡಿಸಿ ಬಿಜೆಪಿ ಪೋಸ್ಟ್‌ ಮೂಲಕ ಕಾಂಗ್ರೆಸ್‌ ಅನ್ನು ಟೀಕಿಸಿದೆ.

Exit mobile version