ಬೆಂಗಳೂರು: ವಿವಿಧ ಸಚಿವಾಕಾಂಕ್ಷಿಗಳು ನವದೆಹಲಿಯಲ್ಲಿ ಹೈಕಮಾಂಡ್ ಎದುರು ಸರತಿಯಲ್ಲಿ ನಿಂತಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಹಲವು ಸುತ್ತುಗಳ ಮಾತುಕತೆಯಲ್ಲಿ ತೊಡಗಿದ್ದಾರೆ. ಆದರೆ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಡಿಕೊಂಡಿದ್ದರಿಂದ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಸಚಿವ ಸ್ಥಾನ ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.ʼ
ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದ್ದಾಗ ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ ಅವರ ಹೆಸರುಗಳೂ ಬಂದಿದ್ದವು. ಈ ಸಮಯದಲ್ಲಿ ಒಮ್ಮೆ ಜಯಚಂದ್ರ ಅವರಿಗೆ ಕರೆ ಮಾಡಿದ್ದ ರಣದೀಪ್ ಸಿಂಗ್ ಸುರ್ಜೆವಾಲ, ವಿಷಯ ತಿಳಿಸಿದ್ದರು.
ಆದರೆ ಇದು ತಮ್ಮ ಕೊನೆಯ ಇನ್ನಿಂಗ್ಸ್ ಆಗಿದ್ದು, ಸಚಿವ ಸ್ಥಾನವೇ ಬೇಕು. ಯಾವುದೇ ಕಾರಣಕ್ಕೆ ಸ್ಪೀಕರ್ ಸ್ಥಾನ ಬೇಡ ಎಂದು ಮನವಿ ಮಾಡಿದ್ದರು. ಎಲ್ಲವನ್ನೂ ನಕೇಳಿಸಿಕೊಂಡಿದ್ದ ಸುರ್ಜೆವಾಲ, ಹೈಕಮಾಂಡ್ ಜತೆಗೆ ಮಾತನಾಡಿ ಮತ್ತೊಮ್ಮೆ ಕರೆ ಮಾಡುವುದಾಗಿ ತಿಳಿಸಿದರು.
ತಮ್ಮ ಮಾತನ್ನು ಕೇಳದೆಯೇ ಎಲ್ಲಿ ಹೈಕಮಾಂಡ್ ತಮ್ಮನ್ನೇ ಸ್ಪೀಕರ್ ಮಾಡಬಹುದು ಎಂದು ಆಪ್ತರು ಹೇಳಿದ್ದರೆ. ಆಪ್ತರ ಸಲಹೆ ಮೇರೆಗೆ ಟಿ.ಬಿ. ಜಯಚಂದ್ರ, ಫೋನ್ ಸ್ವಿಚ್ಡ್ ಮಾಡಿದ್ದಾರೆ. ಸ್ಪೀಕರ್ ಆಯ್ಕೆ ಸಂದರ್ಭದಲ್ಲಿಯೂ ಟಿ.ಬಿ. ಜಯಚಂದ್ರ ಹೆಸರನ್ನು ಸಿದ್ದರಾಮಯ್ಯ ಸೂಚಿಸಿದ್ದಾರೆ.
ಈ ವೇಳೆ ಮತ್ತೊಮ್ಮೆ ಟಿ.ಬಿ. ಜಯಚಂದ್ರ ಅವರಿಗೆ ಸುರ್ಜೆವಾಲ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಎಂದು ಬಂದಿದೆ. ಯು.ಟಿ. ಖಾದರ್ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರೆಗೂ ಮೊಬೈಲ್ ಆನ್ ಮಾಡಲು ಹೋಗಿಲ್ಲ. ಕೊನೆಗೆ ಈಗ ಸಚಿವ ಸ್ಥಾನಕ್ಕೆ ಲಾಬಿ ಮಾಡಲು ಜಯಚಂದ್ರ ತೆರಳಿದ್ದಾರೆ. ಈ ವೇಳೆ ಅಸಮಾಧಾನಗೊಂಡ ಸಿದ್ದರಾಮಯ್ಯ ಹಾಗೂ ಸುರ್ಜೆವಾಲ, ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಚಿವ ಸ್ಥಾನ ನೀಡುವುದು ಕಷ್ಟ ಎನ್ನುವ ರೀತಿ ಮಾತಾಡಿ ಕಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರಾಗದಿದ್ದರೂ, ಅದೇ ಸ್ಥಾನಮಾನ ಹೊಂದಿರುವ ಸ್ಪೀಕರ್ ಸ್ಥಾನವಾದರೂ ಸಿಕ್ಕುವ ಅವಕಾಶವನ್ನೂ, ಜತೆಗೆ ಸಚಿವ ಸ್ಥಾನವನ್ನೂ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇಷ್ಟರ ನಂತರವೂ ಜಯಚಂದ್ರ ಪ್ರಯತ್ನ ಬಿಟ್ಟಿಲ್ಲ. ಹಾಗೊಂದು ವೇಳೆ ಯಾವುದೇ ಪ್ರಯತ್ನಕ್ಕೆ ಹೈಕಮಾಂಡ್ ಬಗ್ಗದಿದ್ದರೆ, ಸಚಿವ ಸ್ಥಾನ ತಪ್ಪಲು ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದೇ ಪ್ರಮುಖ ಕಾರಣ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ: Karnataka Politics: ಮುಗಿಯದ ಸಂಪುಟ ತಿಕ್ಕಾಟ, ದಿಲ್ಲಿಯಿಂದ ಮರಳಿದ ಡಿಕೆಶಿ, ಪ್ರತಾಪ್ ಟೀಕೆಗೆ ವ್ಯಂಗ್ಯ