ಚಿಕ್ಕಮಗಳೂರು: ʻʻನಾಯಿಯಂತೆ ಬಾಲ ಅಲ್ಲಾಡಿಸಿ ಕುಂಯಿ…ಕುಂಯಿ.. ಅಂತ ಬರೋದು ಕಾಂಗ್ರೆಸ್ ಕಲ್ಚರ್. ಸಿದ್ದರಾಮಯ್ಯ ಅವರು ಈ ಸಂಸ್ಕೃತಿ ಬಿಜೆಪಿಯಲ್ಲಿದೆ ಅಂತ ತಪ್ಪಾಗಿ ತಿಳಿದುಕೊಂಡಿರಬೇಕುʼʼ- ಹೀಗೆ ಹೇಳಿದ್ದಾರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಾಯಿ ಮರಿ ತರ ಇದ್ದು ಬರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು ನೀಡಿದರು.
ʻʻಕಾಂಗ್ರೆಸ್ಸಿಗರು ಯಾವ ಪದ ಬಳಸಿದ್ದಾರೋ ಅದು ಕಾಂಗ್ರೆಸ್ಸಿಗೆ ಅನ್ವಯವಾಗುತ್ತದೆ. ಕಾಂಗ್ರೆಸ್ಸಿನಲ್ಲಿ ಮಾತ್ರ ಮುಖ್ಯಮಂತ್ರಿಯನ್ನು ಆ ರೀತಿ ನಡೆಸಿಕೊಳ್ಳುವುದು. ಮುಖ್ಯಮಂತ್ರಿಗಳನ್ನು ಬಾಲ ಅಲುಗಾಡಿಸುವಂತೆ ನೋಡಿಕೊಳ್ಳುತ್ತಿದ್ದದ್ದು ಕಾಂಗ್ರೆಸ್ ಮಾತ್ರʼʼ ಎಂದು ಹೇಳಿದರು.
ʻʻವೀರೇಂದ್ರ ಪಾಟೀಲ್ ರಾಜ್ಯ ಕಂಡ ಅಪರೂಪದ, ಪ್ರಭಾವಿ ನಾಯಕ. ಅವರು ಆಸ್ಪತ್ರೆಯಲ್ಲಿದ್ದಾಗ ಆರೋಗ್ಯ ವಿಚಾರಣೆ ಮಾಡಲು ಬಂದಿದ್ದ ರಾಜೀವ್ ಗಾಂಧಿ ಅವರು ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದಲೇ ಅವರನ್ನು ಪದಚ್ಯುತಿ ಮಾಡಿದ್ದರು. ಇದು ಕಾಂಗ್ರೆಸ್‌ನ ಸಂಸ್ಕೃತಿʼʼ ಎಂದು ಉದಾಹರಣೆ ನೀಡಿದರು ಸಿ.ಟಿ. ರವಿ.
ʻʻಮುಖ್ಯಮಂತ್ರಿಗಳು ಆಡಳಿತದ ಪಾಲುದಾರರು ಎಂದು ಪ್ರಧಾನಿ ಭಾವಿಸುತ್ತಾರೆʼʼ ಎಂದು ವಿವರಿಸಿದ ಅವರು, ಕಾಂಗ್ರೆಸ್ ಕಲ್ಚರ್ ಬಿಜೆಪಿಯಲ್ಲೂ ಇದೆ ಎಂದು ಸಿದ್ದರಾಮಯ್ಯ ಭಾವಿಸಿರಬಹುದು, ಅದು ತಪ್ಪು ಕಲ್ಪನೆ ಎಂದರು.
ಕೋವಿಡ್ ಬಂದ ಮೇಲೆ ಸಿದ್ದರಾಮಯ್ಯರಿಗೇನೋ ಆಗಿದೆ ಎಂದ ಎಸ್‌ಟಿಎಸ್
ಈ ನಡುವೆ, ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎಸ್.ಟಿ ಸೋಮಶೇಖರ್ ಅವರು, ʻʻಸಿದ್ದರಾಮಯ್ಯ, ರಾಹುಲ್ ಗಾಂಧಿ ಇಬ್ಬರಲ್ಲಿ ಯಾರು ಸೀನಿಯರ್? ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯ ಕಾಲಿನ ಮೇಲೆ ಕಾಲು ಹಾಕಿ ಕುಳಿತು ಮಾತನಾಡುತ್ತಾರಾ?ʼʼ ಎಂದು ಪ್ರಶ್ನಿಸಿದರು.
ʻʻಅಮಿತ್ ಶಾ ಆಲ್ ಓವರ್ ಇಂಡಿಯಾಗೆ ಚಾಣಕ್ಯ. ಬೊಮ್ಮಾಯಿ ರಾಜ್ಯದ ಚಾಣಕ್ಯ. ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ರಾಜ್ಯಕ್ಕೆ ತಂದವರು. ಕೋವಿಡ್ ಬಂದಮೇಲೆ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಾರೆ.
ಸಿದ್ದರಾಮಯ್ಯ ಸಿಎಂ ಆಗಿ ಆಳಿದವರು. ಸಿಎಂ ಹುದ್ದೆಗೆ ಘನತೆ ಇದೆ, ಈ ಹೇಳಿಕೆ ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲʼʼ ಎಂದರು ಎಸ್‌ಟಿಎಸ್.
ಇದನ್ನೂ ಓದಿ | Karnataka Politics : ನಾಯಿ ಮರಿ ಹೇಳಿಕೆ ಸಿದ್ದು ಸಂಸ್ಕೃತಿ ತೋರಿಸುತ್ತದೆ, ಜನರೇ ಬುದ್ಧಿ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ