ಬೆಂಗಳೂರು: ರಾಜ್ಯ ಸರ್ಕಾರ ಹತ್ತು ಕೆಜಿ ಅಕ್ಕಿ ನೀಡುವ ಭರವಸೆ (Anna Bhagya) ನೀಡಿ ಈಗ ಸಿಕ್ಕಿ ಹಾಕಿಕೊಂಡಿದೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಮುಂದಾದ ಕಾಂಗ್ರೆಸ್ ನಾಯಕರು (Congress Leaders) ಈಗ ಅಕ್ಕಿಯನ್ನು ಹೊರರಾಜ್ಯಗಳಿಂದ ಖರೀಸುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ (Karnataka Politics) ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.
ಶುಕ್ರವಾರ (ಜೂನ್ 16) ಬೆಂಗಳೂರಿನ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ʻʻಹೊರರಾಜ್ಯಗಳಿಂದ ಅಕ್ಕಿ ಖರೀದಿಸಲು ರಾಜ್ಯ ಸರಕಾರ ಮುಂದಾದುದು ಹಾಸ್ಯಾಸ್ಪದ; ಜೊತೆಜೊತೆಗೆ ಕಮಿಷನ್ ಪಡೆಯುವ ಹುನ್ನಾರ ಇದೆ ಎಂಬುದು ಸ್ಪಷ್ಟ ಎಂದು ಹೇಳಿದರು.
ʻʻನಮ್ಮ ರಾಜ್ಯದಲ್ಲಿ ಅಕ್ಕಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಲ್ಲಿಂದಲೇ ಖರೀದಿ ಮಾಡಿದರೆ ರೈತರಿಗೆ ಅನುಕೂಲವಲ್ಲವೇ? ಛತ್ತೀಸಗಡ, ತೆಲಂಗಾಣದಿಂದ ತರುವುದರ ಹಿಂದೆ ಕಮಿಷನ್ ಗಿಟ್ಟಿಸುವ ಹುನ್ನಾರ ಇದೆʼʼ ಎಂದು ಆರೋಪಿಸಿದರು.
ʻʻಕಾಂಗ್ರೆಸ್ ಪಕ್ಷವು ತಾವು ಕೊಟ್ಟ ಭರವಸೆ, ಗ್ಯಾರಂಟಿ ಅನುಷ್ಠಾನ ಅಸಾಧ್ಯವಾದ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯುವುದು ಹಾಗೂ ಪಠ್ಯಪುಸ್ತಕ ಪರಿಷ್ಕರಣೆಯಂಥ ನಿರ್ಧಾರಗಳನ್ನು ಮಾಡುತ್ತಿದೆ. ಈ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಮುಂದಾಗಿದೆ. ಅಲ್ಲದೆ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆʼʼ ಎಂದು ಟೀಕಿಸಿದರು.
ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಲು ಜನತೆ ನಿಮಗೆ ಮತ ಕೊಟ್ಟರೇ? ಎಂದ ಅವರು, ಕುಣಿಯಲು ಬರದವರು ನೆಲ ಡೊಂಕು ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ ಎಂದು ಆಕ್ಷೇಪಿಸಿದರು.
ಬಡಿಗೆ ಹಿಡಿದು ಬೆನ್ನಟ್ಟುತ್ತಾರೆ ನೋಡಿ ಎಂದ ವಿಜಯೇಂದ್ರ
ʻʻನಮಗೆ ಸಂಪೂರ್ಣ ಬಹುಮತ ಇದೆ; ನಾವು ಹೇಗಾದರೂ ಆಡಳಿತ ಮಾಡುತ್ತೇವೆ ಎಂಬ ಧೋರಣೆಯನ್ನು ಬಿಜೆಪಿ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಯಡಿಯೂರಪ್ಪನವರು ತಾವೊಬ್ಬರೇ ಜನಪ್ರತಿನಿಧಿ ಇದ್ದಾಗಲೂ ವಿಧಾನಸಭೆ ಒಳಗೆ ಮತ್ತು ಹೊರಗಡೆ ರಾಜ್ಯಾದ್ಯಂತ ಹೋರಾಟಗಳನ್ನು ಸಂಘಟಿಸಿದ್ದರು. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂದು ರಾಜ್ಯದ ಜನರು ಮಾತನಾಡುತ್ತಿದ್ದರು ಎಂದು ವಿಜಯೇಂದ್ರ ಗಮನ ಸೆಳೆದರು.
ʻʻಸ್ವಲ್ಪವೇ ದಿನಗಳಲ್ಲಿ ರಾಜ್ಯದ ಜನರೇ ಬಡಿಗೆ ಹಿಡಿದು ಕೊಂಡು ನಿಲ್ತಾರೆ. ಆವಾಗ ಗೊತ್ತಾಗುತ್ತದೆ ಯಾರ ದಮ್ಮು, ತಾಕತ್ ಎಷ್ಟಿದೆ ಅಂತ ಗೊತ್ತಾಗುತ್ತದೆʼʼ ಎಂದು ವಿಜಯೇಂದ್ರ ಹೇಳಿದರು.
ʻʻಬಿಜೆಪಿ 66 ಶಾಸಕರೊಂದಿಗೆ ಬಲಿಷ್ಠ ವಿರೋಧ ಪಕ್ಷವಾಗಿದೆ. ನಿಮ್ಮ ಧೋರಣೆಯನ್ನು ಸಹಿಸಲಸಾಧ್ಯ. ನೀವು ಕೊಟ್ಟ ಭರವಸೆ ಈಡೇರಿಸಲೇಬೇಕು. ಇಲ್ಲವಾದರೆ ಜನರ ಕ್ಷಮೆ ಕೇಳಿʼʼ ಎಂದು ವಿಜಯೇಂದ್ರ ಆಗ್ರಹಿಸಿದರು.
ನಿಮ್ಮ ವಿದ್ಯುತ್ ದರ ಏರಿಸುವ ಕ್ರಮದಿಂದ ಇರುವ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಓಡಿ ಹೋಗುವ ಸಂದರ್ಭ ಸೃಷ್ಟಿ ಮಾಡುತ್ತಿದ್ದೀರಲ್ಲವೇ? ಎಂದು ಕೇಳಿದರು. ಭರವಸೆಗಳನ್ನು ಕಂಡಿಷನ್‍ಗಳಿಲ್ಲದೆ ಜಾರಿಗೊಳಿಸಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: Karnataka Politics : ಕರ್ನಾಟಕ ಮಿನಿ ಪಾಕಿಸ್ತಾನ ಆದೀತು, ರಾಜ್ಯ ಒಂದೇ ವರ್ಷದಲ್ಲಿ ದಿವಾಳಿ; ಬಿಜೆಪಿ ಎಚ್ಚರಿಕೆ