Site icon Vistara News

Karnataka Politics: ಮುಂದಿನ ಟಾರ್ಗೆಟ್‌ ಯಾರು?; ಬಿ.ಎಲ್‌ ಸಂತೋಷ್‌ಗೆ ಎಂ.ಬಿ ಪಾಟೀಲ್‌ ನೇರ ಪ್ರಶ್ನೆ!

MB Patil BL Santhosh

#image_title

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ (Karnataka Politics) ಟ್ವೀಟ್‌ ಫೈಟ್‌ ಜೋರಾಗಿದೆ. ಒಂದು ಕಡೆ ಅಕ್ಕಿ ಪಾಲಿಟಿಕ್ಸ್‌ಗೆ ಸಂಬಂಧಿಸಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಧಿಕೃತ ಹ್ಯಾಂಡಲ್‌ಗಳಲ್ಲಿ ಮತ್ತು ವೈಯಕ್ತಿಕ ಹ್ಯಾಂಡಲ್‌ಗಳಲ್ಲಿ ಬಡಿದಾಡುತ್ತಿದ್ದರೆ ಇನ್ನೊಂದು ಕಡೆಯಲ್ಲಿ ರಾಜ್ಯ ಬೃಹತ್‌ ಕೈಗಾರಿಕಾ ಖಾತೆ ಸಚಿವ ಎಂ.ಬಿ. ಪಾಟೀಲ್‌ (MB Patil) ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santhosh) ನಡುವೆ ಗುದ್ದಾಟ ಜೋರಾಗಿದೆ.

ಬಿ.ಎಲ್‌. ಸಂತೋಷ್‌ ಅವರು ಪ್ರತಾಪ್‌ಸಿಂಹ (MP pratapsimha) ಅವರನ್ನು ಬಳಸಿಕೊಂಡು ಲಿಂಗಾಯತ ನಾಯಕರಾದ ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಬಸವರಾಜ ಬೊಮ್ಮಾಯಿ ಅವರ ಎದೆಗೇ ಗುಂಡಿಡುವ ಹುನ್ನಾರವಿದೆ ಎನ್ನುವುದು ಕಾಂಗ್ರೆಸ್‌ ವ್ಯಾಖ್ಯಾನ. ಕಾಂಗ್ರೆಸ್‌ನ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಎಂ.ಬಿ. ಪಾಟೀಲ್‌ ಪ್ರಕರಣವನ್ನು ಬಳಸಿಕೊಂಡಿದೆ. ಕಾಂಗ್ರೆಸ್‌ ಎಂ.ಬಿ. ಪಾಟೀಲರ ಎದೆಗೇ ಗುಂಡಿಕ್ಕುತ್ತಿದೆ, ಆ ಮೂಲಕ ಲಿಂಗಾಯತ ನಾಯಕನನ್ನು ಮುರಿದು ಹಾಕುವ ಸಂಚು ಎನ್ನುವುದು ಬಿಜೆಪಿ ವ್ಯಾಖ್ಯಾನ. ಇದು ಮುಂದುವರಿದು ಈಗ ಬಿ.ಎಲ್‌. ಸಂತೋಷ್‌ ಮತ್ತು ಎಂ.ಬಿ. ಪಾಟೀಲ್‌ ನೇರ ಮುಖಾಮುಖಿಯಾಗಿದ್ದಾರೆ.

ʻʻಬಿಜೆಪಿಯ ಲಿಂಗಾಯತರಲ್ಲಿ ಇನ್ನು ಇಬ್ಬರು ನಾಯಕರು ಉಳಿದಿದ್ದಾರೆ. ಅವರನ್ನು ಮುಗಿಸಿದ ಬಳಿಕ ನಿಮ್ಮ ಮುಂದಿನ ಟಾರ್ಗೆಟ್‌ ಯಾರು? ದಲಿತರಾ? ಒಕ್ಕಲಿಗರಾ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಬಿ.ಎಲ್‌. ಸಂತೋಷ್‌ ಕೂಡಾ ಉತ್ತರ ಕೊಟ್ಟಿದ್ದಾರೆ.

ಲಿಂಗಾಯತರ ನಂತರ ನಿಮ್ಮ ಗುರಿ ಒಕ್ಕಲಿಗರಾ, ದಲಿತರಾ…???

ಎಂ.ಬಿ. ಪಾಟೀಲ್‌ ಅವರು ನೇರವಾಗಿ ಬಿ.ಎಲ್‌. ಸಂತೋಷ್‌ ಅವರನ್ನೇ ಉದ್ದೇಶಿಸಿ ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಅವರು, ʻʻಬಿ.ಎಲ್‌. ಸಂತೋಷ್‌ ಅವರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆಯೂ ಅಪಾರ. ಅದಕ್ಕೆ ನಾವು ನಿಮಗೆ ಆಭಾರಿ. ನೀವು ಬಿಜೆಪಿಯಲ್ಲಿನ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ. ಇದೀಗ ಉಳಿದಿರುವ, ಏಕೈಕ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಮುಗಿಸಲು ಅವರ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಎತ್ತಿ ಕಟ್ಟಿ, ಜೊತೆಗೆ ನಿಮ್ಮ ಪಟ್ಟಾ ಶಿಷ್ಯ ಮೈಸೂರು ಸಂಸದ ಪ್ರತಾಪ್‌ಸಿಂಹ ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುರಿನೆಟ್ಟಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಕರ್ನಾಟಕದ ಇತ್ತೀಚಿನ ರಾಜಕಾರಣವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು ಹೇಳಿರುವಂತೆ “ಅತಿಯಾದ ‘ಸಂತೋಷ’ವೇ ದುಃಖಕ್ಕೆ ಕಾರಣ”.. ಲಿಂಗಾಯತರ ನಂತರ ನಿಮ್ಮ ಗುರಿ ಒಕ್ಕಲಿಗರಾ, ದಲಿತರಾ…???ʼʼ ಎಂದು ಕೇಳಿದ್ದಾರೆ.

ಇದರ ನಡುವೆ ಇಂಗ್ಲಿಷ್‌ನಲ್ಲೂ ಒಂದು ಟ್ವೀಟ್‌ ಮಾಡಿರುವ ಪಾಟೀಲ್‌ ಅವರು ಬಿ.ಎಲ್‌. ಸಂತೋಷ್‌ ಅವರೇ, ಬಿಎಸ್‌ ಯಡಿಯೂರಪ್ಪ ಆಯಿತು, ಜಗದೀಶ್ ಶೆಟ್ಟರ್‌ ಆಯ್ತು, ಲಕ್ಷ್ಮಣ ಸವದಿ ಆಯ್ತು, ವಿ. ಸೋಮಣ್ಣ ಆಯ್ತು, ಆದರೆ ನೀವಿನ್ನೂ ವಿರಮಿಸಿಲ್ಲ. ನಿಮ್ಮ ಹಿಟ್‌ ಲಿಸ್ಟ್‌ನಲ್ಲಿ ಇನ್ನೂ ಇಬ್ಬರಿದ್ದಾರೆ. ಬಸವರಾಜ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ್‌ ಯತ್ನಾಳ್‌. ಅದಕ್ಕಾಗಿಯೇ ನಿಮ್ಮನ್ನು ಬಿಜ್ಜಳ 2.0 ಎಂದು ಕರೆಯುವುದು ಎಂದು ಕಟಕಿ ಆಡಿದ್ದಾರೆ.

ಇದಕ್ಕೆ ಬಿ.ಎಲ್‌. ಸಂತೋಷ್‌ ಏನೆಂದರು?

ಎಂ.ಬಿ. ಪಾಟೀಲ್‌ ಅವರ ಟ್ವೀಟ್‌ಗಳನ್ನು ಹತ್ತಿರದಿಂದಲೇ ಗಮನಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು, ಯಾಕೋ ಚೇಳು ಕುಟುಕಿದ ಹಾಗಿದೆಯಲ್ಲಾ ಪಾಟೀಲರೇ ಎಂದು ಕಟಕಿಯಾಡಿದ್ದಾರೆ.

ಇದಕ್ಕಿಂತ ಮೊದಲೂ ಬಿ.ಎಲ್‌.ಸಂತೋಷ್‌ ಅವರು ಎಂ.ಬಿ. ಪಾಟೀಲ್‌ ಅವರನ್ನು ಕೆಣಕಿದ್ದರು. ಎಂ.ಬಿ. ಪಾಟೀಲ್‌ ಅವರು ʻರಾಜ್ಯದಲ್ಲಿ ಅದಾನಿ ಗ್ರೂಪ್‌ ಹೂಡಿಕೆಗೂ ಮುಕ್ತ ಅವಕಾಶʼ ಎಂದು ಹೇಳಿದ್ದ ವರದಿಯನ್ನು ಇಟ್ಟುಕೊಂಡು ಬಿ.ಎಲ್‌. ಸಂತೋಷ್‌ ಅವರು ಪ್ರತಿಕ್ರಿಯೆ ನೀಡಿದ್ದರು. ಒಳ್ಳೆಯ ಕೆಲಸ ಮಾಡಿದಿರಿ ಎಂ.ಬಿ. ಪಾಟೀಲರೇ.. ನೀವು ರಾಹುಲ್‌ ಗಾಂಧಿ ಅವರಿಗೆ ಅವರ ನಿಜವಾದ ಸ್ಥಳ ತೋರಿಸಿದ್ದೀರಿ ಎಂದಿದ್ದರು.

ಬಸನಗೌಡ ಪಾಟೀಲ್‌ ಜತೆಗೆ ಎಂ.ಬಿ. ಪಾಟೀಲ್‌ ಟ್ವೀಟ್‌ ಯುದ್ಧ!

ಇನ್ನೊಂದು ಕಡೆ ಎಂ.ಬಿ. ಪಾಟೀಲ್‌ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವೆಯೂ ಒಂದು ಸುತ್ತಿನ ಟ್ವೀಟ್‌ ಕದನ ನಡೆದಿದೆ. ಕಾಂಗ್ರೆಸ್‌ನಲ್ಲಿ ನಿಮ್ಮನ್ನು ಬಲಿಪಶು ಮಾಡಲಾಗಿದೆ ಎಂಬ ಧಾಟಿಯಲ್ಲಿ ಯತ್ನಾಳ್‌ ಅನುಕಂಪದ ಹೆಸರಿನಲ್ಲಿ ಚೆನ್ನಾಗಿ ಗೇಲಿ ಮಾಡಿದ್ದರು. ಇದಕ್ಕೆ ಎಂ.ಬಿ. ಪಾಟೀಲ್‌ ಕೂಡಾ ಪ್ರತಿಕ್ರಿಯೆ ನೀಡಿ ಕಟಕಿಯಾಡಿದ್ದರು.

ನಿಮ್ಮ ಬಗ್ಗೆ ಅಯ್ಯೋ ಅನಿಸ್ತಿದೆ ಎಂದ ಯತ್ನಾಳ್‌

ʻʻನಿಮ್ಮ ಬಗ್ಗೆ ನನಗೆ ಅಯ್ಯೋ ಅನ್ನಿಸುತ್ತಿದೆ. ನಿಮ್ಮಲ್ಲಿ ಇರುವ ರೀತಿ ಎಲ್ಲಾ ಪಕ್ಷದಲ್ಲಿರುತ್ತದೆ ಎಂದು ಭಾವಿಸಬೇಡಿ, ದಲಿತ ನಾಯಕರಾದ ಶ್ರೀ ಡಾ. ಜಿ ಪರಮೇಶ್ವರ್ ಅವರನ್ನು ಮುಗಿಸಲು ಸಿದ್ದರಾಮಯ್ಯನವರು ಯಾರ ಹೆಗಲ ಮೇಲೆ ಇಟ್ಟು ಗುಂಡು ಹೊಡೆದರು? ನಿಮಗೆ “ಭಾರಿ ಸಂಪನ್ಮೂಲ” ಜಲಸಂಪನ್ಮೂಲ ಇಲಾಖೆ ಸಿಗಲಿಲ್ಲ ಅನ್ನುವ ಕಾರಣಕ್ಕೆ ಡಿ.ಕೆ ಶಿವಕುಮಾರ್ ಅವರ ವಿರುದ್ಧ ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟಿರುವುದು ಯಾರು? ಹಾ! ಮೊನ್ನೆ ನಿಮ್ಮ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಿಮಗೆ ಅಲ್ವಾ ,”Dont Disturb” ಅಂದಿದ್ದು, ನಿಮ್ಮಂತಹ ಹಿರಿಯ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಪಕ್ಷ ಹೀಗೆ ನಡೆಸಿಕೊಳ್ಳಬಾರದಿತ್ತು ಬಿಡಿʼʼ ಎಂದು ಬಸನಗೌಡ ಪಾಟೀಲ್‌ ಟ್ವೀಟ್‌ ಮಾಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್‌ ಅವರು, ʻʻನಾನು ಮಾಜಿ ರೈಲ್ವೆ ಮಂತ್ರಿ, ಮುಂದಿನ ಮುಖ್ಯಮಂತ್ರಿ; ನಾನು ವಾಜಪೇಯಿ ಕಾಲದವನು, ಅಡ್ವಾಣಿ ಕಾಲದವನು; ನಾನು ದೊಡ್ಡ ಮಹಾನುಭಾವ ಎಂದೆಲ್ಲಾ ದಿನಕ್ಕೆ ಮೂರು ಬಾರಿ ಮಾಧ್ಯಮಗಳ ಮುಂದೆ ಎಷ್ಟೇ ಬಾಯಿ ಬಡಿದುಕೊಂಡರು ನಿಮಗೆ ಒಂದು ಸಚಿವ ಸ್ಥಾನ ಬಿಡಿ ಒಂದು ನಿಗಮ ಮಂಡಳಿಯ ಅಧ್ಯಕ್ಷತೆಯನ್ನೂ ನೀಡಲಿಲ್ಲ …. ಸ್ವಲ್ಪ ಯೋಚನೆ ಮಾಡಿ ಮಾತನಾಡಿದರೆ ನಿಮ್ಮ ಘನತೆಗೆ ಗೌರವ ಸಿಗಬಹುದೇನೋ…ʼʼ ಎಂದು ಗೇಲಿ ಮಾಡಿದ್ದರು.

ಇದನ್ನೂ ಓದಿ: BJP Politics : ಮತ್ತೆ ಪ್ರತಾಪ ತೋರಿದ ʻಸಿಂಹʼ; ಈ ಬಾರಿ ಬೊಮ್ಮಾಯಿಯೇ ನೇರ ಟಾರ್ಗೆಟ್‌!

Exit mobile version