Site icon Vistara News

Karnataka Elections | ವರುಣ ಕ್ಷೇತ್ರದಲ್ಲಿ ಸಿದ್ದುಗೆ ಸಡ್ಡು ಹೊಡೆಯುತ್ತಾರಾ ಬಿ.ವೈ. ವಿಜಯೇಂದ್ರ: ಅವರು ಹೇಳಿದ್ದೇನು?

siddaramaiah- vijayendra

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊರೆಲ್ಲಾ ಸುತ್ತಿ ಅಂತಿಮವಾಗಿ ಮೈಸೂರಿನ ವರುಣ ಕ್ಷೇತ್ರವನ್ನೇ ನೆಚ್ಚಿಕೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗ ಶಾಸಕರಾಗಿರುವ ಡಾ. ಯತೀಂದ್ರ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಮುಂದಾಗಿರುವುದು, ಸಿದ್ದರಾಮಯ್ಯ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಅವರು ಈ ಕ್ಷೇತ್ರವನ್ನೇ ಸುರಕ್ಷಿತವೆಂದು ಭಾವಿಸಿ ಕಣಕ್ಕಿಳಿಯುತ್ತಾರೆ ಎಂಬ ಅಭಿಪ್ರಾಯ ಮೂಡಿಸಿದ್ದಾರೆ. ಈ ನಡುವೆ, ಅವರಿಗೆ ಆತಂಕ ಮೂಡಿಸಬಲ್ಲ ವಿದ್ಯಮಾನವೊಂದು ಸದ್ದು ಮಾಡುತ್ತಿದೆ. ಅದೇನೆಂದರೆ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಈ ಕ್ಷೇತ್ರದಿಂದಲೇ ಕಣಕ್ಕಿಳಿದು (Karnataka Elections) ಸಿದ್ದರಾಮಯ್ಯರಿಗೆ ಸಡ್ಡು ಹೊಡೆಯುತ್ತಾರಾ ಎಂಬುದು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾನುವಾರ ಮೈಸೂರಿನಲ್ಲಿ ನೀಡಿದ ಹೇಳಿಕೆ ಈ ನಿಟ್ಟಿನಲ್ಲಿ ಸಣ್ಣ ಸೂಚನೆಯನ್ನು ನೀಡಿದೆ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻಪಕ್ಷ ನನಗೆ ಯಾವುದೇ ಸವಾಲು ಕೊಟ್ಟರೂ ಅದನ್ನು ನಾನು ನಿಭಾಯಿಸುತ್ತೇನೆ.
ಪಕ್ಷದ ತೀರ್ಮಾನವೇ ಅಂತಿಮʼʼ ಎಂದು ಹೇಳಿದರು. ʻʻಎಲ್ಲಾ ಸವಾಲುಗಳನ್ನೂ ನಾನು ಎದುರಿಸುತ್ತೇನೆʼʼ ಎಂದು ಹೇಳುವ ಮೂಲ ಪರೋಕ್ಷವಾಗಿ ವರುಣ ಕ್ಷೇತ್ರದ ಸ್ಪರ್ಧೆಯ ಆಸೆ ವ್ಯಕ್ತಪಡಿಸಿದರು ಬಿ.ವೈ.ವಿಜಯೇಂದ್ರ.

ʻʻವರುಣ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಲು ಹೋರಾಟ ಮಾಡುತ್ತಿದ್ದೇವೆʼʼ ಎಂದು ಅವರು ಹೇಳಿದರು. ಇದುವರೆಗೆ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೆ ಇಲ್ಲೂ ಗೆಲ್ಲಬೇಕಾದ ಅನಿವಾರ್ಯತೆ ಇರುವುದರಿಂದ ಬಿಜೆಪಿ ಈ ಭಾಗದ ಮೇಲೆ ಹೆಚ್ಚು ಒತ್ತು ಕೊಡುತ್ತಿದೆ.

ಗುಜರಾತ್‌ ಫಲಿತಾಂಶ ಮತ್ತು ಕಾಂಗ್ರೆಸ್‌ ಭ್ರಮೆ
ʻʻಮೋದಿ ಎಂಬುದು ಅಲೆಯಲ್ಲ, ಅದೊಂದು ಸುನಾಮಿ. ಕಾಂಗ್ರೆಸ್ ನವರಿಗೆ ಇದು ಇನ್ನು ಅರ್ಥವಾಗಿಲ್ಲ. ಕಾಂಗ್ರೆಸ್ ಭ್ರಮೆಯಲ್ಲಿದೆ. ಭ್ರಮೆಯಲ್ಲಿರುವ ಕಾರಣ ಗುಜರಾತ್ ಫಲಿತಾಂಶದ ಎಫೆಕ್ಟ್ ಕರ್ನಾಟಕದಲ್ಲಿ ಆಗಲ್ಲ ಎಂದು ಹೇಳುತ್ತಿದೆ. ಚುನಾವಣೆ ನಂತರ ಕಾಂಗ್ರೆಸ್ ಗೆ ಉತ್ತರ‌ ಸಿಗಲಿದೆʼʼ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ವರುಣ ಚುನಾವಣೆಯಲ್ಲಿ..
ಕಳೆದ ಬಾರಿ ನಡೆದ ವರುಣ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ಅವರು ಖುದ್ದು ಗಮನ ಕೊಟ್ಟು ಯತೀಂದ್ರ ವಿರುದ್ಧ ಸೆಡ್ಡು ಹೊಡೆದಿದ್ದರು. ಒಂದು ಹಂತದಲ್ಲಿ ಅವರೇ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತಾದರೂ ಬಳಿಕ ಅವರು ಸ್ಪರ್ಧಿಸಲಿಲ್ಲ. ಆದರೆ, ಕ್ಷೇತ್ರದ ಮೇಲೆ ಪೂರ್ಣ ಗಮನ ಹರಿಸಿದ್ದರು.

ಇದನ್ನೂ ಓದಿ | Karnataka Elections | ಸಿದ್ದರಾಮಯ್ಯ ಕೊಟ್ಟಿದ್ದು ಬರೀ ಟಿಪ್ಪು ಭಾಗ್ಯ, ಅವನೆಂದರೆ ಸಾಕು ಪ್ರಾಣ ಬಿಡ್ತಾರೆ ಎಂದ ಅಶೋಕ್‌

Exit mobile version