ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅಧಿಕಾರದ ಗದ್ದುಗೆಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಅದರಲ್ಲೂ, ಬಿಜೆಪಿಯಂತೂ ಹೆಚ್ಚಿನ ರಣತಂತ್ರ ರೂಪಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಲಹೆ, ಮಾರ್ಗದರ್ಶನದಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಯೋಜನೆ ರೂಪಿಸಿದೆ. ಆ ಮೂಲಕ ಲಿಂಗಾಯತರ ಮತಗಳು ಬೇರೆಡೆ ವರ್ಗಾವಣೆಯಾಗದಂತೆ ನೋಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ, “ಬಿ.ಎಸ್.ಯಡಿಯೂರಪ್ಪ ಅವರಿಲ್ಲದೆ ರಾಜ್ಯದಲ್ಲಿ ಬಿಜೆಪಿಯು ಚುನಾವಣೆ ಎದುರಿಸುವುದು ಕಷ್ಟ” ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿಎಸ್‌ವೈ ಪುತ್ರ ಬಿ.ವೈ.ವಿಜಯೇಂದ್ರ (BY Vijayendra:) ಹೇಳಿದ್ದಾರೆ.
“ಬಿ.ಎಸ್.ಯಡಿಯೂರಪ್ಪನವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ. ಆದರೆ, ಅವರು ಕೊನೆಯ ಬಾರಿ ಮತ್ತೊಂದು ಸಲ ಸ್ಪರ್ಧಿಸಬೇಕು ಎಂಬುದು ನನ್ನ ಬಯಕೆ. ಅವರಿಲ್ಲದ ಬಿಜೆಪಿಯು ಮುಖವೇ ಇಲ್ಲದ ದೇಹದಂತೆ. ಬಿಎಸ್‌ವೈ ಇಲ್ಲದೆ ಚುನಾವಣೆ ಎದುರಿಸುವುದು ಬಿಜೆಪಿಗೆ ನಿಜವಾಗಿಯೂ ಸವಾಲು” ಎಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಚುನಾವಣೆ ರಣತಂತ್ರಗಳ ಬಗ್ಗೆ ಮಾತನಾಡಿದ ಅವರು, “ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲಪಡಿಸಲು ಹೆಚ್ಚಿನ ಪ್ರಯತ್ನ ಮಾಡಲಾಗುತ್ತಿದೆ. ಕಾಂಗ್ರೆಸ್‌ಗಿಂತ ಬಿಜೆಪಿ ತುಂಬ ಮುಂದಿದೆ. ಕರ್ನಾಟಕ ಬಿಜೆಪಿ ಗೆಲುವಿನಲ್ಲಿ ಕೇಂದ್ರದ ನಾಯಕರ ಪಾತ್ರವೂ ಹೆಚ್ಚಿದೆ. ಮೋದಿ ಹೆಸರಿನಲ್ಲಿ ಕರ್ನಾಟಕದ ಜನ ಬಿಜೆಪಿಗೆ ಮತ ಹಾಕುತ್ತಾರೆ. ಹಾಗಾಗಿ, ಈ ಬಾರಿಯೂ ನಮ್ಮದೇ ಗೆಲುವು” ಎಂದು ಹೇಳಿದ್ದಾರೆ.
ಇದನ್ನೂ ಓದಿ: BJP Politics: ಶಿಕಾರಿಪುರದಿಂದಲೇ ಸ್ಪರ್ಧೆ: ಗೊಂದಲಗಳಿಗೆ ತೆರೆ ಎಳೆದ ಬಿ.ವೈ. ವಿಜಯೇಂದ್ರ