ಶಿರೂರು: ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಸ್ಥಳದಲ್ಲಿ (Karnataka Rain) ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ NDRF, SDRF ತಂಡಗಳ ಸಿಬ್ಬಂದಿಯ ಕಾರ್ಯಕ್ಷಮತೆಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿರೂರು ಬಳಿ ಗುಡ್ಡ ಕುಸಿತ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಕುಸಿತದ ಗುಡ್ಡ-ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ ಎಂದು ಮುಖ್ಯಮಂತ್ರಿಗಳು ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.
ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಹಲವು ದಿನಗಳಿಂದ ತಾಲ್ಲೂಕಿನಲ್ಲೇ ಮೊಕ್ಕಾಂ ಹೂಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಇದನ್ನೂ ಓದಿ | Karnataka Rain : ಭಾರಿ ಮಳೆಗೆ ಮುಂದುವರಿದ ಸಾವು-ನೋವು; ಮನೆ ಗೋಡೆ ಕುಸಿದು ವ್ಯಕ್ತಿ ಸಾವು
ಕಾರ್ಯಾಚರಣೆ ನಡೆಯುತ್ತಿರುವ ಜಾಗ ಮತ್ತು ಮಣ್ಣು ತುಂಬಿರುವ ರಸ್ತೆಯೂ ಕುಸಿಯುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಎಚ್ಚರಿಸಿದರು.
ಗುಡ್ಡ ಕುಸಿತದ ಸ್ಥಳ ಒಂದು ರೀತಿ ದ್ವೀಪದಂತಾಗಿದೆ. ಸುತ್ತಲೂ ಕಾಳಿ ನದಿ ಭೋರ್ಗರೆದು ಹರಿಯುತ್ತಿದೆ. ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ. ಹೀಗಾಗಿ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ಮಾಡಬೇಕು ಎಂದ ಸಿಎಂ, ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು ತಂತ್ರಜ್ಞಾನದ ನೆರವು ಪಡೆಯುವಂತೆ ಸೂಚಿಸಿದರು.
ಅಂಕೋಲಾದ ಕಡಲ್ಕೊರೆತದ ಸ್ಥಳಕ್ಕೆ ಭೇಟಿ
ಗುಡ್ಡ ಕುಸಿತ ಸ್ಥಳ ವೀಕ್ಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕೋಲಾದ ಕಡಲ್ಕೊರೆತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಸತೀಶ್ ಸೈಲ್ ಮತ್ತು ಅಧಿಕಾರಿಗಳು ಜೊತೆಗಿದ್ದರು.
ಪತ್ರಕರ್ತರಿಗೆ ರೇನ್ ಕೋಟ್ ಕೊಟ್ಟಿದ್ದೀರಾ?
ಒಂದೇ ಸಮನೆ ಸುರಿಯುತ್ತಿದ್ದ ಭೀಕರ ಮಳೆ ನಡುವೆ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತರು ಮತ್ತು ಕ್ಯಾಮೆರಾಮನ್‌ಗಳನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಪತ್ರಕರ್ತರಿಗೆಲ್ಲಾ ರೇನ್ ಕೋಟ್ ಮತ್ತು ರಬ್ಬರ್ ಶೂ ಕೊಟ್ಟಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮುಖ್ಯಮಂತ್ರಿಗಳಿಂದ ಈ ಪ್ರಶ್ನೆ ನಿರೀಕ್ಷಿಸಿರದ ಅಧಿಕಾರಿಗಳು ತಬ್ಬಿಬ್ಬಾದರು.
ಯಾರೇ ತಪ್ಪು ಮಾಡಿದ್ರೂ ಕ್ರಮ: ಸಿಎಂ ಎಚ್ಚರಿಕೆ
ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತದಲ್ಲಿ 10 ಜನರು ಕಾಣೆಯಾಗಿದ್ದಾರೆ. 7 ಮೃತದೇಹ ದೊರಕಿದ್ದು, ಇನ್ನೂ 3 ಮೃತದೇಹ ದೊರಕಬೇಕಿದೆ. ಎಸ್‌ಡಿಆರ್‌ಎಫ್ 44, ಎನ್‌ಡಿಆರ್‌ಎಫ್ 24, ಸೇನೆಯ 44 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ವಾಹನಗಳು ಕೂಡ ಸ್ಥಳ ಕಾಣೆಯಾಗಿವೆ. ಟೀ ಅಂಗಡಿಯಿಟ್ಟು ವಾಸವಾಗಿದ್ದವರು ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತದವರಿಗೆ ಹಾಗೂ ಶಾಸರಿಗೆ ರಕ್ಷಣಾ ಕಾರ್ಯಾಚರಣೆ ತ್ವರಿತ ಮಾಡಲು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅಧೀವೇಶನದ ಕಾರಣ ಬೇಗ ಬರಲಾಗಲಿಲ್ಲ, ಆದರೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತ್ವರಿತಗತಿ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. ಈಗಾಗಲೇ ಮೃತರ ಕುಟುಂಬಕ್ಕೆ 5 ಲಕ್ಷ ರೂ. ನೀಡಲಾಗಿದೆ. ಯಾವುದೇ ಕುಟುಂಬದ ಸದಸ್ಯದ ಮೃತದೇಹ ದೊರಕಿದರೆ ಅವರಿಗೂ ಪರಿಹಾರ ನೀಡಲಾಗುತ್ತದೆ. ಗುಡ್ಡ ಕುಸಿತವಾದ ನದಿ ಬದಿಯಲ್ಲೂ ಹುಡುಕಾಟ ನಡೆಸಲು ತಿಳಿಸಿದ್ದೇನೆ ಎಂದರು.
ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಸಿಎಂ, ರಸ್ತೆ ಪೂರ್ಣ ಮಾಡದಿದ್ದರೂ ಟೋಲ್ ಕಲೆಕ್ಷನ್ ಮಾಡಲಾಗುತ್ತಿದೆ. ರೆಸ್ಕ್ಯೂ ಕಾರ್ಯಾಚರಣೆ ಯಾವುದೇ ರೀತಿಯಲ್ಲಿ ತಡವಾಗುತ್ತಿಲ್ಲ. ಬಹಳ ವರ್ಷಗಳಿಂದ ಲ್ಯಾಂಡ್ ಸ್ಲೈಡ್ ಆಗಿಲ್ಲ, ಈಗ ಆಗಿದೆ. ಘಟನೆ ಸಂಬಂಧಿಸಿ ನಾವು ಯಾವುದೇ ರಾಜಕಾರಣ ಮಾಡಲ್ಲ. ಬಿಜೆಪಿ ಮೇಲೆ ಆರೋಪ ಮಾಡೋ ಮಣ್ಣೆರೆಚಾಟ ಮಾಡಲ್ಲ. ನಾವು ಕೊಡೋ ಪರಿಹಾರದಿಂದ ಜೀವ ವಾಪಸ್ ಬರಲ್ಲ, ಇದು ಪ್ರಾಕೃತಿಕ ಘಟನೆ. ಮೃತದೇಹಗಳನ್ನು ಹುಡುಕುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ | Karnataka Rain : ಭಾರಿ ಮಳೆ ಎಫೆಕ್ಟ್; ಬೆಳಗಾವಿಯಲ್ಲಿ 17 ಸಂಪರ್ಕ ಸೇತುವೆಗಳು ಜಲಾವೃತ
ಈ ವೇಳೆ ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಸತೀಶ್ ಸೈಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.