ರಾಮನಗರ: ಶುಕ್ರವಾರ ಸುರಿದ ಸಾಧಾರಣ ಮಳೆಗೆ (Karnataka Rain) ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ರಾಮನಗರ ಸಮೀಪದ ಸಂಗಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತಗೊಂಡಿತ್ತು. ಡ್ರೈನೇಜ್ ಕಟ್ಟಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ತುಂಬೆಲ್ಲಾ ನಿಂತುಕೊಂಡಿತ್ತು. ಇದರಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಯಿತು.
ಕೆಟ್ಟು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಲಾರಿ
ಜಲಾವೃತಗೊಂಡಿದ್ದ ಮಳೆ ನೀರಿನಿಂದಾಗಿ ಕೆಟ್ಟುನಿಂತಿದ್ದ ಕಾರಿಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದರೂ ನೆರವಿಗೆ ಬಾರದ್ದಕ್ಕೆ ಸಂತ್ರಸ್ತರು ಆಕ್ರೋಶ ಹೊರಹಾಕಿದರು.
ಹೆದ್ದಾರಿಯಲ್ಲಿ ಮೊಟಕಾಲಷ್ಟು ಮಳೆ ನೀರು ನಿಂತ ಕಾರಣದಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು. ಮಳೆ ನೀರಿಗೆ ಕೆಲ ವಾಹನಗಳು ಕೆಟ್ಟು ನಿಲ್ಲುವಂತಾಯಿತು. ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಕಿಡಿಕಾರಿದರು. ದುಬಾರಿ ಟೋಲ್ ಕಟ್ಟಿದ್ದರೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಗರಂ ಆದರು.
ವಾಟರ್ ಸರ್ವಿಸ್‌ಗಾಗಿ ಟೋಲ್ ಇರೋದು- ಸವಾರರ ವ್ಯಂಗ್ಯ
ರಾಮನಗರದ ಸಂಗಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತಗೊಂಡಿರುವುದ್ದಕ್ಕೆ ಪ್ರಧಾನಿ ಮೋದಿಗೆ ಹಾಗೂ ಸಂಸದ ಪ್ರತಾಪ್ ಸಿಂಹಗೆ ಮೈಸೂರಿನ ಎಂಜಿನಿಯರ್ ಆಗಿರುವ ವಿಜಯ್ ಎಂಬುವವರು ಧನ್ಯವಾದ ಹೇಳಿದ್ದಾರೆ. ಟೋಲ್ ಅನ್ನು ಹೆದ್ದಾರಿಗಾಗಿ ಕಟ್ಟಿಸಿಕೊಳ್ಳುತ್ತಿಲ್ಲ. ನಮ್ಮ ವಾಹನಗಳ ವಾಟರ್ ಸರ್ವಿಸ್‌ಗಾಗಿ ಕಟ್ಟಿಸಿಕೊಳ್ಳುತ್ತಿದ್ದಾರೆ. ಇದು ಹೆದ್ದಾರಿ ಅಲ್ಲ ಸರ್, ಹತ್ತು ಕೆರೆಗಳ ಒಕ್ಕೂಟ ಎಂದು ವ್ಯಂಗ್ಯ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಯಾಕೆ ಬಂದರು? ಮೈಸೂರಿನಲ್ಲಿ ಉದ್ಘಾಟನೆ ಮಾಡಬೇಕಿತ್ತು? ಇದೆಲ್ಲ ಕೇವಲ ಚುನಾವಣೆಗಾಗಿ ಅಷ್ಟೇ ಎಂದು ಕಿಡಿಕಾರಿದರು. ನಾನು ಬಿಜೆಪಿ ಪಕ್ಷದ ವಿರೋಧಿ ಅಲ್ಲ, ಕಾಂಗ್ರೆಸ್ ಪಕ್ಷದ ಪರವೂ ಅಲ್ಲ. ನಾನೊಬ್ಬ ಎಂಜಿನಿಯರ್ ಅಷ್ಟೇ ಎಂದು ಮೈಸೂರು ಮೂಲದ ವಿಜಯ್ ಆಕ್ರೋಶವನ್ನು ಹೊರಹಾಕಿದ್ದಾರೆ.
ಟೋಲ್ ಕೊಟ್ಟಿದ್ದು 270 ರೂ. ನಷ್ಟವಾಗಿದ್ದು ಸಾವಿರಾರು ರೂ.
ಟೋಲ್ ಕೊಟ್ಟಿದ್ದು 270 ರೂಪಾಯಿ ಆಗಿದ್ದರೆ, ಹೆದ್ದಾರಿಯಲ್ಲಿ ಮಳೆ ಪರಿಣಾಮದಿಂದಾಗಿ ನಷ್ಟವಾಗಿದ್ದು ಸಾವಿರಾರು ರೂಪಾಯಿ ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದರು. ಮಳೆ ನೀರಿನಿಂದ ಕಾರು ಎಂಜಿನ್ ಸೀಜ್ ಆಗಿದೆ. ನಾನು ಬಡವ ಎಲ್ಲಿಂದ ಅಷ್ಟು ದುಡ್ಡು ತರಲಿ, ನನಗೆ ನಷ್ಟ ಆಗಿದೆ ಎಂದು ಮಡಿಕೇರಿಗೆ ಪ್ರಯಾಣಿಸುತ್ತಿದ್ದ ಸವಾರರೊಬ್ಬರು ಅಳಲು ತೋಡಿಕೊಂಡರು.
ಬೆಳಗಿನ ಜಾವದಲ್ಲಿ ಮಳೆ ನೀರಲ್ಲಿ ಸಿಲುಕಿಕೊಂಡೆ, ಆ ಸಮಯದಲ್ಲಿ ಹೆದ್ದಾರಿ ಪ್ರಾಧಿಕಾರದ ಹೆಲ್ಪ್‌ಲೈನ್ ಸಹ ಸಿಗಲಿಲ್ಲ. ನಾನೊಬ್ಬನೇ ಬಂದಿದ್ದಕ್ಕೆ ಹೇಗೋ ಬಚಾವ್ ಆಗಿದ್ದೇನೆ, ಕುಟುಂಬದೊಂದಿಗೆ ಬಂದಿದ್ದರೆ ಏನು ಗತಿ? ಟೋಯಿಂಗ್ ಮಾಡುವುದರಿಂದ ಹಿಡಿದು ಗ್ಯಾರೇಜ್ ಸಿಬ್ಬಂದಿಯನ್ನು ಕರೆ ತರಲು ದುಡ್ಡು ಕೊಡಬೇಕು. ಟೋಲ್ ಕಟ್ಟಿದ್ದಲ್ಲದೆ ಇಷ್ಟು ನಷ್ಟ ಮಾಡಿಕೊಂಡಿದ್ದೇನೆ. ಇದಕ್ಕೆ ಪರಿಹಾರ ಕೊಡುವವರು ಯಾರು ಎಂದು ವಿಸ್ತಾರ ನ್ಯೂಸ್ ಬಳಿ ಸವಾರ ಅಳಲು ತೋಡಿಕೊಂಡರು.
ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ
ಡ್ರೈನೇಜ್ ದುರಸ್ತಿ ಕಾರ್ಯಕ್ಕೆ ಮುಂದಾದ ಪ್ರಾಧಿಕಾರ
ಮಾಧ್ಯಮಗಳ ನಿರಂತರ ವರದಿಯಿಂದ ಎಚ್ಚೆತ್ತ ಬೆಂಗಳೂರು-ಮೈಸೂರು ಹೆದ್ದಾರಿ ಪ್ರಾಧಿಕಾರ ತನ್ನ ಸಿಬ್ಬಂದಿ ಮೂಲಕ ಡ್ರೈನೇಜ್ ದುರಸ್ತಿ ಕಾರ್ಯಕ್ಕೆ ಮುಂದಾಯಿತು. ಬಳಿಕ ಡ್ರೈನೇಜ್‌ನಲ್ಲಿ ಕಟ್ಟಿಕೊಂಡಿದ್ದ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರು. ಇತ್ತ ಹೆದ್ದಾರಿ ಅಂಡರ್ ಪಾಸ್ ಕೆರೆಯಂತಾಗಿದ್ದರಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆಯುಂಟಾಗಿತ್ತು. ಮೈಸೂರು ಕಡೆಗೆ ಹೋಗುವ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಿತ್ತು. ಸಾಲು ಸಾಲಾಗಿ ವಾಹನಗಳು ನಿಂತಲ್ಲೇ ನಿಲ್ಲುವಂತಾಯಿತು.
ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಂಗಳೂರು-ಮೈಸೂರು ಹೈವೇ ಬಳಿ ಮಳೆ ಅವಾಂತರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಗಬಸವನದೊಡ್ಡಿ ಗ್ರಾಮದ ಬಳಿ ಪ್ರತಿಭಟನೆ ನಡೆಸಿದರು. ಎನ್ಎಚ್‌ಎಐ ಅಧಿಕಾರಿಗಳು ಹಾಗೂ ಸಂಸದ ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಮಳೆ ಬಂದು ನೀರು ನಿಂತಾಗ ದುರಸ್ತಿ ಮಾಡಲು ಬಂದಿದ್ದಾರೆಂದು, ಹಿಟಾಚಿ ಬಳಸಿ ಹೂಳು ತೆಗೆಯುವ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ತಡೆದರು.
ರಸ್ತೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ- ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವಾಂತರ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ರಸ್ತೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ, ಅದನ್ನೆಲ್ಲ ಸರಿಪಡಿಸುತ್ತೇವೆ. ಒಂದು ಮಳೆಯಾದಾಗಲೇ ಸಮಸ್ಯೆ ಗೊತ್ತಾಗುವುದು ಎಂದು ಸರ್ಮಥಿಸಿಕೊಂಡರು. ಇಂತಹ ರಸ್ತೆ ಉದ್ಘಾಟನೆ ಮಾಡಲು ಮೋದಿ ಬರಬೇಕಿತ್ತಾ ಎಂಬ ಟೀಕೆ ವಿಚಾರವಾಗಿಯೂ ಮಾತನಾಡಿದ ಸಿಎಂ, ಎಂಟು ಸಾವಿರ ಕೋಟಿ ಖರ್ಚು ಮಾಡಿ ರಸ್ತೆ ಮಾಡಿಸಿದ್ದೇವೆ. ಈ ರಸ್ತೆಯಿಂದ ಮೈಸೂರಿಗೆ ಇಡೀ ರಾಷ್ಟ್ರವೇ ಸಂಪರ್ಕಗೊಳ್ಳುತ್ತದೆ. ಇದಕ್ಕೆ ಎಲ್ಲರೂ ಹೆಮ್ಮೆ ಪಡಬೇಕು. ಇಂತಹ ಮಹತ್ವದ ಕೆಲಸಕ್ಕಲ್ಲದೆ ಮತ್ಯಾವುದಕ್ಕೆ ಪ್ರಧಾನಿ ಅವರನ್ನು ಕರೆಸಬೇಕು? ಎಂದು ಮರುಪ್ರಶ್ನೆ ಮಾಡಿದರು.
ಇದನ್ನೂ ಓದಿ: Banglore- Mysore expressway: ಮಳೆಯ ಅವಾಂತರ, ಹೆದ್ದಾರಿ ಜಲಾವೃತ
ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗೈರು ವಿಚಾರವಾಗಿಯೂ ಉತ್ತರಿಸಿದ ಸಿಎಂ ಬೊಮ್ಮಾಯಿ, ಯಡಿಯೂರಪ್ಪನವರು ವಿಜಯ ಸಂಕಲ್ಪ ಯಾತ್ರೆಯಲ್ಲಿ ತೊಡಗಿಕೊಂಡಿದ್ದಾರೆ. ಅದಕ್ಕಾಗಿ ಇಲ್ಲಿಗೆ ಬಂದಿಲ್ಲ ಎಂದು ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ