Site icon Vistara News

Rain News: ಮಳೆ ಭೀಕರತೆಗೆ ಮತ್ತೆರಡು ಬಲಿ, 7ಕ್ಕೇರಿದ ಸಾವಿನ ಸಂಖ್ಯೆ

rain deaths

ವಿಜಯನಗರ/ಮೈಸೂರು: ಭಾನುವಾರ ಅಪ್ಪಳಿಸಿದ ಮಳೆ- ಗಾಳಿ- ಸಿಡಿಲಿಗೆ (Rain News) ಮತ್ತಿಬ್ಬರು ಮೃತಪಟ್ಟಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 7ಕ್ಕೇರಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ. ಅಪ್ಪೇನಹಳ್ಳಿಯ ಗ್ರಾ.ಪಂ ಸದಸ್ಯ, ಡಿ. ಸಿದ್ದಾಪುರ ನಿವಾಸಿ ಮಲ್ಲಿಕಾರ್ಜುನ (38) ಮೃತಪಟ್ಟ ಗ್ರಾ.ಪಂ ಸದಸ್ಯ. ಮಲ್ಲಿಕಾರ್ಜುನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೊಲದಲ್ಲಿದ್ದ ಗ್ರಾ.ಪಂ ಸದಸ್ಯ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್‌ ತಂತಿ ತುಳಿದು ಸಾವು

ಮೈಸೂರು: ವಿದ್ಯುತ್ ತಂತಿ ತುಳಿದು ಯುವಕನೊಬ್ಬ ಸಾವಿಗೀಡಾದ ಘಟನೆ ಪಿರಿಯಾಪಟ್ಟಣ ತಾಲೂಕು ಬಾರಸೆ ಗ್ರಾಮದಲ್ಲಿ ನಡೆದಿದೆ. ಇಬ್ಬರಿಗೆ ಗಾಯಗಳಾಗಿವೆ. ಸ್ವಾಮಿ (18) ಮೃತ ಯುವಕ. ಹರೀಶ್ ಹಾಗೂ ಸಂಜಯ್‌ಗೆ ಗಾಯವಾಗಿದೆ. ಇಬ್ಬರನ್ನೂ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆ ಗಾಳಿಗೆ ಜಮೀನಿನಲ್ಲಿ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಪಕ್ಕಕ್ಕೆ ಸರಿಸುವ ವೇಳೆ ಅನಾಹುತ ನಡೆದಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿ ಸಿಡಿಲು ಬಡಿದು ಎತ್ತು, ಆಕಳು ಕೂಡ ಸಾವಿಗೀಡಾಗಿವೆ.

ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಡುವಲಹಟ್ಟಿ ಗ್ರಾಮದ ಕೃಷ್ಣಪ್ಪ ಎಂಬವರಿಗೆ ಸೇರಿದ ಒಂದು ಎತ್ತು ಮತ್ತು ಅಕಳು ಸಿಡಿಲು ಬಡಿದು ಮೃತಪಟ್ಟಿವೆ.

ಕೊಪ್ಪಳ: ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಟಾಟಾ ಏಸ್ ಮೇಲೆ ಮರ ಬಿದ್ದಿದ್ದು, ವಾಹನ ಜಖಂಗೊಂಡಿದೆ. ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ 1ನೇ ವಾರ್ಡ್‌ನಲ್ಲಿ ಘಟನೆ ನಡೆದಿದ್ದು, ಪರಶುರಾಮ ಪೊಳದ ಎಂಬವರಿಗೆ ಸೇರಿದ ಟಾಟಾಏಸ್ ವಾಹನವಾಗಿದೆ. ಮರ ಬಿದ್ದ ಪರಿಣಾಮ ಮನೆಯೊಂದರ ಮೇಲ್ಛಾವಣಿಗೆ ಧಕ್ಕೆಯಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

ಬಾಳೆ ತೋಟಕ್ಕೆ ಹಾನಿ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರಲ್ಲಿ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಬಾಳೆ ತೋಟ ನೆಲಸಮವಾಗಿದೆ. ಗಾಳೆ ಮಳೆಗೆ ಬೃಹತ್ ಮರಗಳು ನೆಲಕ್ಕುರುಳಿವೆ. ಸಿದ್ಧಿ ವಿನಾಯಕ ವೃತ್ತದಲ್ಲಿ ತೆಂಗಿನ ಮರನೆಲಕ್ಕುರುಳಿದೆ. ನಗರದ ಆಜಂ ಮಸೀದಿ ಎದುರಿಗೆ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮರದ ಕೊಂಬೆಗಳು ಬಿದ್ದು ವಿದ್ಯುತ್ ತಂತಿಗಳು ತುಂಡರಿಸಿವೆ. ನಗರದ ಹಲವೆಡೆ ವಿದ್ಯುತ್ ಸಂಚಾರ ಅಸ್ತವ್ಯಸ್ತವಾಗಿದೆ. ಗಾಳಿಯ ರಭಸಕ್ಕೆ ಶೆಡ್ಡುಗಳ ಮೇಲ್ಛಾವಣಿಗಳು ನೆಲಕಚ್ಚಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: Karnataka Rain: ಸಿಡಿಲು ಬಡಿದು ಚಿತ್ರದುರ್ಗದಲ್ಲಿ ಮಹಿಳೆ ಸಾವು, 5ಕ್ಕೆ ಏರಿದ ಮಳೆ ಸಾವಿನ ಸಂಖ್ಯೆ

Exit mobile version