ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವದಂದು (Karnataka Rajyotsava) ಕರಾಳ ದಿನಾಚರಣೆ (Black Day) ನಡೆಸಲು ಮುಂದಾಗಿರುವ ಎಂಇಎಸ್ (MES) ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Kannada and Culture Minister Shivaraj Thangadagi) ಗರಂ ಆಗಿದ್ದಾರೆ. ಎಂಇಎಸ್ ಏನಾದರೂ ಪುಂಡಾಟಿಕೆ ನಡೆಸಿದರೆ ಸರ್ಕಾರದಿಂದ ಕ್ರಮ ಗ್ಯಾರಂಟಿ ಎಂದು ಗುಡುಗಿದ್ದಾರೆ. ನಾಳೆ ಸರ್ಕಾರದಿಂದ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ (Karnataka Rajyotsava) ಆಚರಣೆ ನಡೆಯುತ್ತಿದೆ. ಇದಕ್ಕೆ ತೊಂದರೆ ಕೊಟ್ಟರೆ ಕ್ರಮ ತೆಗೆದುಕೊಳ್ಳಲಾಗುವುದು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಎಂಪಿಎಸ್ ಏನಾದರೂ ಪುಂಡಾಟಿಕೆ ನಡೆಸಿದರೆ, ಸರ್ಕಾರ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತದೆ. ಬೆಳಗಾವಿಯಲ್ಲಿರುವ ಮರಾಠಿಗರನ್ನು ನಾವು, ಪ್ರೀತಿ ವಿಶ್ವಾಸದಿಂದ ಗೌರವಿಸುತ್ತೇವೆ. ಆದರೆ, ನೀವು ನಮ್ಮ ಕನ್ನಡ ಭಾಷೆಯನ್ನು ಗೌರವಿಸಿಲ್ಲವೆಂದಾದರೆ ರಾಜ್ಯದಲ್ಲಿ ಇರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: CM Siddaramaiah : ಮೋದಿ ಸರ್ಕಾರದಿಂದ ಕರ್ನಾಟಕದ ವಿರುದ್ಧ ನಿರಂತರ ದ್ವೇಷ; ಶೇಖಾವತ್‌ಗೆ ಸಿದ್ದರಾಮಯ್ಯ ತಿರುಗೇಟು
ನಾಳೆಯೇ ಏಕೆ ನಿಮಗೆ ಕರಾಳ ದಿನಚಾರಣೆ? ನಾಳೆ ನಮಗೆ ಮಹತ್ವದ ದಿನವಾಗಿದೆ. ಎಲ್ಲ ಜಿಲ್ಲೆಗಳಲ್ಲಿ ನಡೆದಂತೆ ಬೆಳಗಾವಿಯಲ್ಲೂ ಕನ್ನಡ ರಾಜ್ಯೋತ್ಸವ ನಡೆಯಲಿದೆ. ಸರ್ಕಾರದಿಂದ ಎಲ್ಲ ಸಿದ್ಧತೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರೂ ಸಹ ಎಲ್ಲವನ್ನೂ ಗಮನಿಸುತ್ತಾ ಇದ್ದಾರೆ. ಬೆಳಗಾವಿಯಲ್ಲಿ ನಾಳೆ ರಾಜ್ಯೋತ್ಸವವನ್ನು ತಡೆಯಲು ಸಾಧ್ಯವಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಾನು ಸರಳ ಭಾಷೆಯಲ್ಲಿ ಹೇಳುತ್ತೇನೆ. ನಮ್ಮ ನೆಲ – ಜಲದಲ್ಲಿ ವಾಸವಾಗಿ ಈ ರೀತಿ ಮಾಡುವುದು ಸರಿಯಲ್ಲ. ಇದನ್ನೇ ಮುಂದುವರಿಸಿದರೆ ಸುಮ್ಮನಿರಲ್ಲ, ಸರ್ಕಾರ ಖಂಡಿತವಾಗಿಯೂ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ, ನೀವುಗಳು ಎಲ್ಲಿ ಇರುತ್ತೀರೋ ಅಲ್ಲಿಯ ಭಾಷೆಯನ್ನು ಗೌರವಿಸುವ ಕೆಲಸ ಮಾಡಿ ಎಂದು ಸಚಿವ ಶಿವರಾಜ ತಂಗಡಗಿ ಬುದ್ಧಿವಾದವನ್ನು ಹೇಳಿದ್ದಾರೆ.
ಮಹಾ ನಾಯಕರಿಗೆ ರಾಜ್ಯ ಪ್ರವೇಶವಿಲ್ಲವೆಂದ ಡಿಸಿ
ನವೆಂಬರ್ 1ರಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಸುವುದಾಗಿ ಎಂಇಎಸ್ ಘೋಷಣೆ ಮಾಡುತ್ತಿದ್ದಂತೆ ಅತ್ತ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ (Maharashtra CM Eknath Shinde) ಇದಕ್ಕೆ ಕುಮ್ಮಕ್ಕು ನೀಡಿದ್ದರು. ತಮ್ಮ ಸಂಪುಟ ಸದಸ್ಯರು ಭಾಗಿಯಾಗಲಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Belagavi Deputy Commissioner Nitesh Patil) ಖಡಕ್ ಉತ್ತರ ಕೊಟ್ಟಿದ್ದು, ಕರಾಳ ದಿನಾಚರಣೆಗೆ ಯಾವುದೇ ರೀತಿಯಲ್ಲೂ ಅನುಮತಿ ನೀಡುವುದಿಲ್ಲ. ಮಹಾರಾಷ್ಟ್ರದ ಯಾವೊಬ್ಬ ನಾಯಕನಿಗೂ ಅಂದು ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳುವ ಮೂಲಕ ರಾಜ್ಯ ವಿರೋಧ ಚಟುವಟಿಕೆಗೆ ಬಾಗಿಲು ಬಂದ್ ಮಾಡಿರುವುದಾಗಿ ಎಚ್ಚರಿಕೆಯನ್ನು ನೀಡಿದ್ದರು.
ಕ್ಯಾತೆ ತೆಗೆದಿದ್ದ ಏಕನಾಥ ಶಿಂಧೆ
ಕರ್ನಾಟಕದ ಗಡಿ ವಿಷಯ, ಅದರಲ್ಲೂ ಬೆಳಗಾವಿ ವಿಷಯ ಬಂದಾಗ ಮಹಾರಾಷ್ಟ್ರದ ಶಿವಸೇನೆ ಕ್ಯಾತೆ ತೆಗೆಯುತ್ತಲೇ ಬರುತ್ತಿದೆ. ಅದಕ್ಕೆ ಇಂಬು ನೀಡುವಂತೆ ರಾಜ್ಯದಲ್ಲಿರುವ ಎಂಇಎಸ್ ನಾಯಕರು, ಕಾರ್ಯಕರ್ತರು ಕುಣಿಯುತ್ತಿದ್ದರು. ಈಗ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆ ಮಾಡಲು ಎಂಇಎಸ್ ಮುಂದಾಗಿತ್ತು. ಈ ಕುರಿತು ಹೇಳಿಕೆಗಳನ್ನು ನೀಡಿತ್ತು. ಆದರೆ, ಇದಕ್ಕೆ ಜಿಲ್ಲಾಡಳಿತದ ಅನುಮತಿಯನ್ನು ಪಡೆದಿರಲಿಲ್ಲ. ಈ ನಡುವೆ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, “ಕರ್ನಾಟಕದಲ್ಲಿ ಎಂಇಎಸ್ ನಡೆಸುವ “ಕರಾಳ ದಿನಾಚರಣೆ”ಗೆ ಮಹಾರಾಷ್ಟ್ರದ ಸಚಿವರು ಭಾಗಿಯಾಗುತ್ತಾರೆ ಎಂದು ಹೇಳಿದ್ದರು. ಇದು ರಾಜ್ಯದಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.
ಇದನ್ನೂ ಓದಿ: CM Siddaramaiah : ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ
ಸಭೆ ನಡೆಸಿದ್ದ ಎಂಇಎಸ್
ಅತ್ತ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ನೀಡುತ್ತಿದ್ದಂತೆ ಇತ್ತ ಎಂಇಎಸ್ ನಾಯಕರು ಚಿಗುರಿದ್ದರು. ಕರಾಳ ದಿನಾಚರಣೆ ಕಾರ್ಯಕ್ರಮದ ರೂಪುರೇಷೆ ಬಗೆಗ ಚರ್ಚೆ ನಡೆಸಲು ಗೋವಾವೇಸ್ ಸರ್ಕಲ್ ನಲ್ಲಿರುವ ಮರಾಠಾ ಮಂದಿರದಲ್ಲಿ ಅಕ್ಟೋಬರ್ 29ರಂದು ಸಭೆ ಸೇರಿ ಮಾತುಕತೆಯನ್ನು ನಡೆಸಿದ್ದರು. ಮಹಾರಾಷ್ಟ್ರ ನಾಯಕರಿಗೆ ಆಹ್ವಾನ ಕೊಡುವ ಬಗ್ಗೆಯೂ ಈ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಿದ್ದರು. ಈಗ ಜಿಲ್ಲಾಧಿಕಾರಿ ಸಹಿತ ಸಚಿವ ಶಿವರಾಜ್ ತಂಗಡಗಿ ಸಹ ಗುಡುಗಿದ್ದಾರೆ.
ಕನ್ನಡ ರಥಕ್ಕೆ ಸಿಎಂ ಚಾಲನೆ
ಸಿಎಂ ಸಿದ್ದರಾಮಯ್ಯ ಹಂಪಿಯಲ್ಲಿ ರಥಕ್ಕೆ ಚಾಲನೆ ಕೊಡುತ್ತಾರೆ. ರಥದ ಸಂಪೂರ್ಣ ತಯಾರಿಯನ್ನು ವಿಕ್ಷಣೆ ಮಾಡಿ ಬದಲಾವಣೆಗೆ ಸಲಹೆ ನೀಡಲಾಗಿದೆ. ಚಿಕ್ಕಪುಟ್ಟ ಬದಲಾವಣ ಆಗಬೇಕಿದೆ. ರಾಜ್ಯದಾದ್ಯಂತ ಈ ರಥ ಸಂಚಾರ ಮಾಡುತ್ತದೆ. ರಥದಲ್ಲಿ ಕಲಾ ತಂಡ ಮತ್ತು ನಮ್ಮ ಅಧಿಕಾರಿಗಳಿರುತ್ತಾರೆ. ಪತ್ರಿ ಜಿಲ್ಲೆಗೆ ಹೊಗುವಾಗ ಪ್ರೊಟೋ ಕಾಲ್ ಪ್ರಕಾರ ಆಯಾ ಜಿಲ್ಲಾಧಿಕಾರಿಗಳು ಸ್ವಾಗತ ಮಾಡುತ್ತಾರೆ. ವರ್ಷ ಪೂರ್ತಿ ಈ ರಥ ಸಂಚಾರ ಮಾಡುತ್ತದೆ. ರಥದಲ್ಲಿ ನಾಡ ದೇವತೆ ಇರಲಿದ್ದಾಳೆ. ಕನ್ನಡ ಜ್ಯೋತಿಯೂ ರಥದಲ್ಲಿರಲಿದೆ. ಬುಧವಾರ ಸಿಎಂ ಸಿದ್ದರಾಮಯ್ಯ ಅವರು ರಥದಲ್ಲಿ ಜ್ಯೋತಿಯನ್ನು ಹಚ್ಚಲಿದ್ದಾರೆ. ಮುಂದಿನ ವರ್ಷ ಅಕ್ಟೋಬರ್ 31ಕ್ಕೆ ಪುನಃ ಈ ರಥ ವಿಧನಾಸೌಧಕ್ಕೆ ಬರಲಿದೆ.