ಬೆಂಗಳೂರು: ಕನ್ನಡ ರಾಜ್ಯೋತ್ಸವ (Karnataka Rajyotsava) ನಿಮಿತ್ತ ಕನ್ನಡ ನಾಡು ನುಡಿಯ ಮಹತ್ವವನ್ನು ಕವಿಗಳ ಹಾಗೂ ಕುರಾನ್ ಸಾಲುಗಳ ಮೂಲಕ ಉಲ್ಲೇಖಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar), ನಮ್ಮ ಸುತ್ತ ಈಗಲೂ ಛಿದ್ರ ಮಾಡುವಂತಹ ಮನೋಭಾವದವರು ಇರುತ್ತಾರೆ. ಆದರೆ, ನಾವದಕ್ಕೆ ಕಿವಿಗೊಡಬಾರದು. ಕೋಮು ದ್ವೇಷಕ್ಕೆ (Communal hatred) ಸಿಲುಕದೆ ಕರ್ನಾಟಕವನ್ನು ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವ ಸಂಕಲ್ಪವನ್ನು ಮಾಡೋಣ ಎಂದು ಕರೆ ನೀಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಮಾತು ಆರಂಭಿಸಿದರು.
ಡಿ.ಕೆ. ಶಿವಕುಮಾರ್ ಭಾಷಣದ ಸಾರಾಂಶ ಹೀಗಿದೆ
“ಆಚಾರಕ್ಕೆ ಅರಸನಾಗು
ನೀತಿಗೆ ಪ್ರಭುವಾಗು
|ಮಾತಿನಲಿ ಚೂಡಾಮಣಿಯಾಗು
ಕನ್ನಡ ಜ್ಯೋತಿ ಬೆಳಗು ಜಗಕೆಲ್ಲ!”ಆಚಾರಕ್ಕೆ ಅರಸನಾಗು
ನೀತಿಗೆ ಪ್ರಭುವಾಗು
|ಮಾತಿನಲಿ ಚೂಡಾಮಣಿಯಾಗು
ಕನ್ನಡ ಜ್ಯೋತಿ ಬೆಳಗು ಜಗಕೆಲ್ಲ!
ಕನ್ನಡ.. ಕನ್ನಡಿಗ.. ಕರ್ನಾಟಕ… ಈ ಮೂರಕ್ಕೂ ನವೆಂಬರ್ 1ಕ್ಕೂ ಬಿಡಿಸಲಾರದ ನಂಟು. ಆದರೆ, ಕನ್ನಡದ ಅಭಿಮಾನ ಬರೀ ನವೆಂಬರ್ 1ಕ್ಕೆ ಸೀಮಿತ ಆಗದಿರಲಿ. ಕನ್ನಡ ಹೃದಯದ ಭಾಷೆಯಾಗಲಿ. ಕನ್ನಡ ಮನಸ್ಸಿನ ಭಾಷೆಯಾಗಲಿ.
ಶ್ರೀ ರಾಮ ಹೇಳುತ್ತಾನೆ ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು. ಅಂದರೆ ಹುಟ್ಟಿದ ಊರು ಸ್ವರ್ಗಕ್ಕಿಂತಲೂ ಮಿಗಿಲು ಎಂಬುದು ಇದರ ಅರ್ಥ.
ಪಂಪ ಹೇಳುತ್ತಾನೆ:
ಆರಂಕುಶ ವಿಟ್ಟೊಡಂ ನೆನವುದೆನ್ನ ಮನಂ
ಬನವಾಸಿ ದೇಶಮಂ
ಅಂದರೆ, ಅಂಕುಶದಿಂದ ಚುಚ್ಚಿದರೂ ನಾನು ಹುಟ್ಟಿದ ಊರನ್ನು ಮರೆಯುವುದಿಲ್ಲ ಎಂಬುದು ಇದರ ಅರ್ಥ.
ಕುರಾನಿನಲ್ಲಿ ಹೇಳುತ್ತಾರೆ: ಸ್ವರ್ಗವು ತಂದೆ-ತಾಯಿಯ ಪಾದದ ಕೆಳಗೆ ಇದೆ ಎಂದು. ಅಂದರೆ ತಂದೆ-ತಾಯಿ ಸ್ಪರ್ಶಿಸಿದ ನೆಲವೇ ಸ್ವರ್ಗ ಎಂದು. ನಮಗೆ ಆ ಸ್ವರ್ಗ ಕರ್ನಾಟಕ. ನಮಗೆ ಸ್ವರ್ಗ ಕನ್ನಡ ಭೂಮಿ. ತುಂಗಾ, ಭದ್ರಾ, ಕೃಷ್ಣ, ಕಾವೇರಿ ಹರಿಯುವ ಈ ತಾಯಿ ನೆಲವೇ ನಮಗೆ ಸ್ವರ್ಗ.
ಕುವೆಂಪು ಹೇಳುತ್ತಾರೆ: “ಕನ್ನಡದಲ್ಲಿ ಬೇಡಿಕೊಂಡರೆ ಹರಿ ವರಗಳ ಮಳೆ ಗರೆಯುತ್ತಾನೆ. ಹರ ಮುನಿಯದೆ ಪೊರೆಯುತ್ತಾನೆ.”
ಈ ಪವಿತ್ರ ದಿನದಂದು ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಲಕ್ಷಾಂತರ ಜನರನ್ನ ನಾವು ನೆನೆಯೋಣ. 2000 ವರ್ಷಗಳ ಇತಿಹಾಸ ಇರುವ ಕನ್ನಡ ಮರೆತರೆ ತಾಯಿಯನ್ನು ಮರೆತಂತೆ.
ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡನಾಡೊಂದೇ
ಇನ್ನೆಂದೂ ತಾನೊಂದೇ.
ಅಂದರೆ, ನಾವು ಕೋಮು ದ್ವೇಷಕ್ಕೆ ಸಿಲುಕದೆ, ಕರ್ನಾಟಕದ ಮನಸ್ಸುಗಳನ್ನು ಒಡೆಯದೇ ಯಾವ ಹೊರಗಿನ ಶಕ್ತಿಗೂ ಹೆದರದೆ ಒಂದಾಗಿ ಬದುಕುತ್ತೇವೆ. ಸರ್ವಜನಾಂಗದ ಶಾಂತಿಯ ತೋಟ ಮರಳಿ ನಿರ್ಮಿಸುತ್ತೇವೆ ಎಂಬ ದೀಕ್ಷೆ ತೊಡೋಣ.
ಬಹಳಷ್ಟು ಮಂದಿಯ ತ್ಯಾಗ ಮತ್ತು ಬಲಿದಾನದ ಫಲವೇ ಅಖಂಡ ಕರ್ನಾಟಕ. ಇದನ್ನು ಜೋಪಾನವಾಗಿ ಕಾಪಾಡಬೇಕು. ಕರ್ನಾಟಕದ ಸ್ಫೂರ್ತಿ ನಿರಂತರವಾಗಿರಲಿ. ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ಮೈದಾಳಲಿ.
ಕುರಾನ್ ವಾಕ್ಯ ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್; ಇಲ್ಲಿದೆ ವಿಡಿಯೊ
ಕನ್ನಡಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದಾ
ಜೋಗುಳದ ಹರಕೆಯಿದು ಮರೆಯಿದಿರು ಚಿನ್ನಾ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ!
ನಾವು ಹುಟ್ಟಿದ ನಂತರ ಮಾತು ಕಲಿಯಲು ಎರಡು ವರ್ಷ ಬೇಕು. ಆದರೆ ಯಾವುದನ್ನು ಆಡಬಾರದು ಎಂಬುದನ್ನು ಕಲಿಯಲು ಇಡೀ ಜೀವಮಾನ ಸಾಲದು.
ಕುವೆಂಪು ಅವರು ಹೇಳಿದಂತೆ:
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು.
ಛಿದ್ರ ಮಾಡುವವರು ನಮ್ಮ ಸುತ್ತಲೂ ಇದ್ದಾರೆ
“ಛಿದ್ರ” ಮಾಡುವವರು ಈಗಲೂ ನಮ್ಮ ಸುತ್ತ ಇದ್ದಾರೆ. ಅವರಿಗೆ ಕುವೆಂಪು ಅವರ ಈ ಹಾಡನ್ನು ಕೇಳಿಸಬೇಕು:
“ಕರ್ನಾಟಕ ಎಂಬುದು
ಬರೀ ಹೆಸರೇ ಮಣ್ಣಿಗೆ
ಮಂತ್ರ ಕಣಾ ಶಕ್ತಿ ಕಣಾ
ತಾಯಿ ಕಣಾ ದೇವಿ ಕಣಾ
ಬೆಂಕಿ ಕಣಾ ಸಿಡಿಲು ಕಣಾ”.
ಬಸ್‌ಗೆ ಬೆಂಕಿ ಹಚ್ಚುವುದರಲ್ಲಿ ಭಾಷೆ ಅಭಿಮಾನ ಇರುವುದಿಲ್ಲ. ರೈಲಿಗೆ ಬೆಂಕಿ ಹಚ್ಚುವುದರಲ್ಲಿ ರಾಜ್ಯದ ಅಭಿಮಾನ ಇರುವುದಿಲ್ಲ. ಈ ದೇಶದ ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂಬುದನ್ನು ಅರಿಯಬೇಕು.
ಇದನ್ನೂ ಓದಿ: Karnataka Rajyotsava : ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ನೀರು – ವಿದ್ಯುತ್: ಸಿಎಂ ಸಿದ್ದರಾಮಯ್ಯ
ಪವಿತ್ರವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನಿಮಗೆ ಹಾಗೂ ರಾಜ್ಯದ ಗೌರವ, ನೆಲ, ಜಲ, ಭಾಷೆ ಉಳಿಸಲು ಮುಂದಾಗುವವರಿಗೆ ಶುಭವಾಗಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.