Site icon Vistara News

Karnataka Rajyotsava : ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ನೀರು – ವಿದ್ಯುತ್: ಸಿಎಂ ಸಿದ್ದರಾಮಯ್ಯ

karnataka rajyotsava celebration and CM Siddaramaiah

ಬೆಂಗಳೂರು: ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ (Karnataka Government School) ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಘೋಷಣೆ ಮಾಡಿದರು. ಕನ್ನಡ ರಾಜ್ಯೋತ್ಸವದ (Karnataka Rajyotsava) ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಅವರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯು ಕಂಠೀರವ ಕ್ರೀಡಾಂಗಣದಲ್ಲಿ (Kanteerava Stadium) ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ತಮ್ಮ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ, ಈ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಹಾಗೂ ವಿದ್ಯುತ್‌ ಅನ್ನು ಸರ್ಕಾರ ನೀಡಲಿದ್ದು, ಇದರ ಖರ್ಚನ್ನು ಭರಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Vistara Kannada Sambhrama : ನ. 4ರಂದು ವಿಸ್ತಾರ ಕನ್ನಡ ಸಂಭ್ರಮ; ಇದು ವಿಸ್ತಾರ ನ್ಯೂಸ್‌ ವರ್ಷ ವೈಭವ

ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡದಲ್ಲಿಯೇ ವ್ಯವಹರಿಸುವ ಪ್ರತಿಜ್ಞೆ ಮಾಡೋಣ

ದೇವರಾಜು ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಈ ದಿನ ನಾವು ಒಂದು ಪ್ರತಿಜ್ಞೆ ಮಾಡೋಣ. ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ನಾವು ಮಾಡುವ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸುವ ಕೆಲಸ ಮಾಡೋಣ. ಇಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು, ಸಂಭ್ರಮಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಪ್ರತಿ ಅಧಿಕಾರಿಯೂ ಕನ್ನಡ ಪಾಲಿಸಲಿ

ಕನ್ನಡ ನೆಲದಲ್ಲಿದ್ದೂ ಕನ್ನಡ ಮಾತನಾಡದವರು ಹಲವು ಭಾಗಗಳಲ್ಲಿ ಇದ್ದಾರೆ. ನಮ್ಮ ಆಡಳಿತ ಭಾಷೆ ಕನ್ನಡ. ಆದ್ದರಿಂದ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ಪ್ರತಿಯೊಬ್ಬರ, ಪ್ರತಿಯೊಂದು ಭಾಷೆಗೂ ನಾವು ಗೌರವ ಕೊಡಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯವಹರಿಸುವಾಗ, ಆಡಳಿತದಲ್ಲಿ ಕನ್ನಡ ಬಳಕೆ ಆಗಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯೂ ಚಾಚೂ ತಪ್ಪದೆ ಪಾಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲೂ ಪ್ರವೇಶ ಪರೀಕ್ಷೆ ನಡೆಸಲು ಈ ಹಿಂದೆಯೂ ಒತ್ತಾಯಿಸಿದ್ದೆ. ಅಗತ್ಯಬಿದ್ದರೆ ಮತ್ತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಇಂಗ್ಲಿಷ್ ಕಾನ್ವೆಂಟ್ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದು ಸರಿಯಲ್ಲ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಕಲಿಕಾ ವಾತಾವರಣ ಹಾಗೂ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು, ಅಗತ್ಯ ಎಲ್ಲ ಸವಲತ್ತುಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಾತೃಭಾಷೆಯ ಕಲಿಕೆ ವೈಜ್ಞಾನಿಕ

ತಮ್ಮ ಮಕ್ಕಳನ್ನು ಅವರ ಇಷ್ಟದ ಭಾಷೆಯಲ್ಲಿ ಕಲಿಸುವುದು ಪೋಷಕರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಮಾತೃಭಾಷೆಯ ಮಾಧ್ಯಮದಲ್ಲೇ ಕಲಿಯುವುದು ಅತ್ಯಂತ ವೈಜ್ಞಾನಿಕ ಎನ್ನುವುದನ್ನು ಗ್ರಹಿಸಬೇಕು ಎಂದರು.

ಇದನ್ನೂ ಓದಿ: Karnataka Weather : ಇಂದು ಕರಾವಳಿ, ಮಲೆನಾಡಿನಲ್ಲಿ ಭರ್ಜರಿ ಮಳೆ; ಬೆಂಗಳೂರಿನಲ್ಲಿ ರಾತ್ರಿ ವರ್ಷಧಾರೆ?

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಶಾಸಕ ರಿಜ್ವಾನ್ ಹರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Exit mobile version