ಜಾಗತಿಕ ಐಟಿ ಮುಂಚೂಣಿಯಲ್ಲಿ ಮಿಂಚುತ್ತಿರುವ ಕರ್ನಾಟಕ ಎಂಬತ್ತರ ದಶಕದಲ್ಲಿ ಜಗತ್ತಿನೆಲ್ಲೆಡೆ ಕಣ್ಣು ಬಿಡುತ್ತಿದ್ದ ಐಟಿ ಕ್ಷೇತ್ರವನ್ನು ತನ್ನ ಉಸಿರಾಗಿಸಿಕೊಂಡು, ಆ ಕ್ಷೇತ್ರದ ಜಾಗತಿಕ ದಿಗ್ಗಜ ಎಂಬ ಹೆಗ್ಗಳಿಕೆಯನ್ನು ಬೆಂಗಳೂರು (Karnataka Rajyotsava), ಈ ಮೂಲಕ ಕರ್ನಾಟಕ ಹೊತ್ತುಕೊಂಡಿದ್ದು ಈಗ ಇತಿಹಾಸ. ಕರ್ನಾಟಕದಲ್ಲಿ ಐಟಿ ಕ್ಷೇತ್ರದ ನಡಿಗೆಯನ್ನು ಕೊಂಚ ಪರಾಂಬರಿಸಿದರೆ, ಸಿಲಿಕಾನ್ ಕಣಿವೆಯೆಂಬ ಹೆಸರೇಕೆ ಬಂತು ಮತ್ತು ಐಟಿ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿಯಲ್ಲಿರುವುದೇಕೆ ಎಂಬುದು ಅರ್ಥವಾದೀತು. ಅಭಿವೃದ್ಧಿಗೆ ಹಲವು ಮುಖಗಳು. ಕಾಲಕ್ಕೆ ತಕ್ಕಂತೆ ತಾಳ-ಮೇಳಗಳನ್ನು ಹೊಂದಿಸಿಕೊಳ್ಳುವುದೂ ಇವುಗಳಲ್ಲೊಂದು. ನಾಡೊಂದರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಲಮಾನಕ್ಕೆ ಅಗತ್ಯವಾದ ಬದಲಾವಣೆಗಳನ್ನು ಒಳಗೊಂಡು ನಡೆಯುವ ಸರಕಾರ ಮತ್ತು ಪ್ರಜೆಗಳ ನಡವಳಿಕೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಎಂಬತ್ತರ ದಶಕದಲ್ಲಿ ಜಗತ್ತಿನೆಲ್ಲೆಡೆ ಕಣ್ಣು ಬಿಡುತ್ತಿದ್ದ ಐಟಿ ಕ್ಷೇತ್ರವನ್ನು ತನ್ನ ಉಸಿರಾಗಿಸಿಕೊಂಡು, ಆ ಕ್ಷೇತ್ರದ ಜಾಗತಿಕ ದಿಗ್ಗಜ ಎಂಬ ಹೆಗ್ಗಳಿಕೆಯನ್ನು ಬೆಂಗಳೂರು, ಈ ಮೂಲಕ ಕರ್ನಾಟಕ ಹೊತ್ತುಕೊಂಡಿದ್ದು ಈಗ ಇತಿಹಾಸ. ಕರ್ನಾಟಕದಲ್ಲಿ ಐಟಿ ಕ್ಷೇತ್ರದ ನಡಿಗೆಯನ್ನು ಕೊಂಚ ಪರಾಂಬರಿಸಿದರೆ, ಸಿಲಿಕಾನ್ ಕಣಿವೆಯೆಂಬ ಹೆಸರೇಕೆ ಬಂತು ಮತ್ತು ಐಟಿ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿಯಲ್ಲಿರುವುದೇಕೆ ಎಂಬುದು ಅರ್ಥವಾದೀತು. ಸುಮಾರು 1990ರ ದಶಕದ ಆದಿ ಭಾಗವದು.
ಆಗಿನ್ನೂ ಉದ್ಯಾನನಗರಿ, ನಿವೃತ್ತರ ಸ್ವರ್ಗ ಎಂಬೆಲ್ಲಾ ಅಭಿದಾನಗಳನ್ನು ಹೊತ್ತಿದ್ದ ಬೆಂಗಳೂರು ಗಡಿಬಿಡಿಯಿಲ್ಲದೆ ತಣ್ಣಗಿತ್ತು. ಹತ್ತು ವರ್ಷಗಳ ಹಿಂದಷ್ಟೇ ಕಣ್ಣು ತೆರೆದಿದ್ದ ಇನ್‌ಫೋಸಿಸ್ ಮತ್ತು ಇನ್ನೂ ಕೆಲವು ಐಟಿ ಸಂಸ್ಥೆಗಳು ತನ್ನ ದಿಸೆಗಳನ್ನು, ತನ್ನ ಗಮ್ಯವನ್ನು ಅರಸುತ್ತಿದ್ದ ದಿನಗಳವು. ಹೊಸದಾಗಿ ದಾರಿ ಮಾಡಿಕೊಳ್ಳುವಾಗಿನ ಸವಾಲುಗಳನ್ನೆಲ್ಲಾ ಎದುರಿಸುತ್ತಾ, 12 ಸಂಸ್ಥೆಗಳು ಒಟ್ಟಾಗಿ 16 ಕೋಟಿ ರೂ.ಗಳಷ್ಟು ಐಟಿ ರಫ್ತನ್ನು 1991-92ರಲ್ಲಿ ಸಾಧಿಸಿದ್ದವು. ಇವೆಲ್ಲ ಸಂಸ್ಥೆಗಳ ಉದ್ಯೋಗಿಗಳನ್ನು ಒಟ್ಟಾಗಿಸಿದರೆ, ಸಂಖ್ಯೆ 2000 ದಾಟುತ್ತಿರಲಿಲ್ಲ. ಮುಂದಿನ ವರ್ಷಕ್ಕೆ ಈ ಸಂಸ್ಥೆಗಳು ಸಾಧಿಸಿದ ರಫ್ತಿನ ಮೌಲ್ಯ ರೂ. 22 ಕೋಟಿಗೇರಿತು. ಹಾಗೆಯೇ, 1993-94ರ ಹೊತ್ತಿಗೆ ರೂ. 56 ಕೋಟಿಯಿದ್ದಿದ್ದು, 1999ರ (ವೈ2ಕೆ ಅಲೆ) 3,500 ಕೋಟಿ ರೂ.ಗಳ ರಫ್ತು ಸಾಧಿಸಿತ್ತು ಕರ್ನಾಟಕದ ಐಟಿ ಉದ್ದಿಮೆ.
ಐಟಿ ಉದ್ದಿಮೆಯ ಏರುಗತಿ
ಆನಂತರ ಕರ್ನಾಟಕದ ಐಟಿ ವಲಯದ್ದು ಏರುಗತಿ ಮಾತ್ರ. 2022ರ ಅಂಕಿ-ಅಂಶಗಳ ಪ್ರಕಾರ 1,400ರಕ್ಕಿಂತ ಹೆಚ್ಚಿನ ಸಣ್ಣ-ದೊಡ್ಡ ಐಟಿ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂದಾಜು 50 ಲಕ್ಷದಷ್ಟು ಉದ್ಯೋಗಿಗಳು ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಈ ಉದ್ದಿಮೆಗಳನ್ನು ಅವಲಂಬಿಸಿ, ಕೆಲಸ ಮಾಡುತ್ತಿರುವ ಅಸಂಘಟಿತ ವಲಯದ ಲೆಕ್ಕವೂ ಇದರಲ್ಲಿ ಸೇರಿದೆ. ಇವರೆಲ್ಲ ಸೇರಿ ದೇಶದ ಒಟ್ಟು ರಫ್ತಿನ ಶೇ. 40% ಭಾಗದಷ್ಟು, ಅಂದರೆ 6,30,000 ಕೋಟಿ ರೂ. ಮೌಲ್ಯದ ರಫ್ತು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೆಲ್ಲ ಪ್ರಗತಿಯನ್ನು ಸಾಧಿಸುವುದಕ್ಕೆ ಬೇಕಾಗಿದ್ದು ಮೂರು ದಶಕಗಳು ಮಾತ್ರ.
ಕರ್ನಾಟಕದ ಆರ್ಥಿಕ ಸಮೀಕ್ಷೆ 2022-23ರ ಪ್ರಕಾರ 5,500 ಐಟಿ ಮತ್ತು ಸಂಬಂಧಿತ ಉದ್ದಿಮೆಗಳು ಕರ್ನಾಟಕದಲ್ಲಿ ಕೆಲಸ ಮಾಡುತ್ತಿವೆ. ಸುಮಾರು 750 ಬಹುರಾಷ್ಟ್ರೀಯ ಸಂಸ್ಥೆಗಳು ಸುಮಾರು ೫೮ ಬಿಲಿಯನ್ ಅಮೆರಿಕನ್ ಡಾಲರ್ ರಫ್ತು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ. ಸುಮಾರು 12 ಲಕ್ಷ ಮಂದಿ ನೇರವಾಗಿ ಈ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದರೆ, ಸುಮಾರು 32 ಲಕ್ಷ ಪರ್ಯಾಯ ಉದ್ಯೋಗಗಳು ಇದರಿಂದ ಸೃಷ್ಟಿಯಾಗಿವೆ.
ಬೆಳವಣಿಗೆ ಹಂತಗಳು
ಕಳೆದ 30 ವರ್ಷಗಳ ಬೆಳವಣಿಗೆಯಲ್ಲೂ ಹಲವು ಮಜಲುಗಳನ್ನು ಕಾಣಬಹುದು. 2000 ಇಸವಿಯ ವರೆಗಿನ ಅವಧಿಯಲ್ಲಿ ಸೇವೆಗಳ ಔಟ್‌ಸೋರ್ಸಿಂಗ್ ಪ್ರವರ್ಧಮಾನಕ್ಕೆ ಬಂತು. ಆದರೆ ವೈ೨ಕೆ ಸಮಸ್ಯೆಯ ದಿನಗಳು ಭಾರತದಲ್ಲಿ (ಆಫ್‌ಶೋರ್) ಉದ್ಯೋಗಗಳು ಸೃಷ್ಟಿಯಾಗುವುದಕ್ಕೆ ಹೆಚ್ಚಿನ ಬಲ ನೀಡಿದವು. ಆನಂತರದ ವರ್ಷಗಳಲ್ಲಿ ಟೆಲೆಕಾಂ ಉದ್ದಿಮೆ ಮತ್ತು ಸಂಬಂಧಿತ ವಲಯಗಳಲ್ಲಿ ವಿಸ್ತರಣೆ ಪ್ರಾರಂಭವಾಗಿ, ಇದರಿಂದಲೂ ಐಟಿ ವಲಯ ತೀವ್ರಗತಿಯಲ್ಲಿ ಬೆಳೆಯತೊಡಗಿತು. 1997ರ ಹೊತ್ತಿಗೆ ಐಟಿ ವಲಯಕ್ಕಾಗಿ ಸರಕಾರದಿಂದ ನಿರ್ದಿಷ್ಟ ನೀತಿಗಳು ರೂಪುಗೊಂಡವು.
2010ರ ಹೊತ್ತಿಗೆ 90,000 ಕೋಟಿ ರೂ. ಮುಟ್ಟಿತ್ತು ರಾಜ್ಯದ ಐಟಿ ರಫ್ತು ಮೌಲ್ಯ. ಈ ದಿನಗಳಲ್ಲಿ ಪಶ್ಚಿಮ ದೇಶಗಳು ಉದ್ಯೋಗಗಳನ್ನು ಆಫ್‌ಶೋರ್‌ಗೆ ರವಾನಿಸುವ ಬಗ್ಗೆ ಒಲವು ತೋರಿ, ಈ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ದಾಖಲಾಗಿತ್ತು. ಇದೇ ಹಿನ್ನೆಲೆಯಲ್ಲಿ , ಫಾರ್ಚೂನ್ 500 ಪಟ್ಟಿಯ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿಯಿಂದ ಮುಂದೆ ಬಂದವು. ವಿಶ್ವದ ಮುಂಚೂಣಿಯ ಸಂಸ್ಥೆಗಳು ಭಾರತದಲ್ಲೂ ಕಾರ್ಯನಿರ್ವಹಿಸುವಂತಾಯಿತು.
ಹೊಸ ಕಂಪನಿಗಳ ಕಾಲ
2011ರ ನಂತರದಿಂದ ಈವರೆಗಿನ ದಿನಗಳು ಸ್ಟಾರ್ಟಪ್ ಕಂಪನಿಗಳ ಕಾಲದಂತೆ ತೋರುತ್ತಿದೆ. ಬಹಳಷ್ಟು ಸಣ್ಣ ಕಂಪೆನಿಗಳು ಹುಟ್ಟಿಕೊಂಡು, ದಿಟ್ಟ ಬೆಳವಣಿಗೆಯನ್ನು ಸಾಧಿಸಿದವು. ಈಗಲೂ ಸುಮಾರು ೬೦೦೦ಕ್ಕಿಂತ ಹೆಚ್ಚಿನ ಸ್ಟಾರ್ಟಪ್‌ಗಳು ಕರ್ನಾಟಕದಲ್ಲಿವೆ. ಮಾತ್ರವಲ್ಲ, ವಿಶ್ವದ ಮುಂಚೂಣಿಯ ಐಟಿ ನಗರಗಳಲ್ಲಿ ಬೆಂಗಳೂರು ಮೊದಲ ೨೦ ಸ್ಥಾನಗಳಲ್ಲಿದೆ. ಆದರೆ ಸಾವಿರಾರು ಸಂಸ್ಥೆಗಳು ಒಮ್ಮೆಲೆ ತಲೆ ಎತ್ತಿದ್ದರಿಂದ, ರಾಜ್ಯಕ್ಕೆ ಇರುವೊಂದು ರಾಜಧಾನಿಯಲ್ಲಿ ಮೂಲಸೌಕರ್ಯಗಳು ಸಾಲದೇ ಹೋದಾಗ, ʻಬಿಯಾಂಡ್ ಬೆಂಗಳೂರುʼ ಮಾದರಿಯ ಕಾರ್ಯಕ್ರಮಗಳು ಜಾರಿಗೊಂಡು ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಗಳೂರು ಮುಂತಾದ ನಗರಗಳಲ್ಲಿ ಐಟಿ ಉದ್ದಿಮೆ ವಿಸ್ತಾರಗೊಳ್ಳುತ್ತಿದೆ.
ಇದನ್ನೂ ಓದಿ: Kannada Rajyotsava : ರಾಜ್ಯೋತ್ಸವ ದಿನ ಹಾಡಬೇಕಾದ 5 ಹಾಡುಗಳು ಇಲ್ಲಿವೆ; ಸಾಹಿತ್ಯ ಸಂಗೀತ ಸಹಿತ!