ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಕಾರ್ಯಕ್ರಮ ಇನ್ನೊಂದು ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ವಿಧಾನಸೌಧದ ಮುಂದೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜರತ್ನ ಪುನೀತ್ ರಾಜ್‌ಕುಮಾರ್ ಅವರಿಗೆ ʼಕರ್ನಾಟಕ ರತ್ನʼ ನೀಡಲಾಗುತ್ತಿದೆ.
ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮದಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ನಟ ಜ್ಯೂ. ಎನ್‌ಟಿಆರ್ ಭಾಗವಹಿಸಲಿದ್ದಾರೆ. ಇಂದು ಮದ್ಯಾಹ್ನದ ವೇಳೆಗೆ ರಜನಿ ಮತ್ತು ಎನ್‌ಟಿಆರ್ ಬೆಂಗಳೂರು ತಲುಪಲಿದ್ದಾರೆ. ಈ ಹಿಂದೆ ಪುನೀತ್‌ಗಾಗಿ ಎನ್‌ಟಿಆರ್ ʼಗೆಳೆಯ ಗೆಳೆಯʼ ಹಾಡು ಹಾಡಿ ಆತ್ಮೀಯತೆ ಮೆರೆದಿದ್ದರು. ಇಂದು ವೇದಿಕೆ ಮೇಲೆ ಗೆಳೆತನದ ನೆನಪು ಹಂಚಿಕೊಳ್ಳಲಿದ್ದಾರೆ. ಅಂದು ʼಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿʼ ಎಂದು ಹಾರೈಸಿದ್ದ ರಜನಿಕಾಂತ್, ಇಂದು ರಾಜ್ ಕುಟುಂಬದ ಜತೆಗಿನ ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಮಧ್ಯಾಹ್ನ ಎಚ್‌ಎಎಲ್ ಏರ್‌ಪೋರ್ಟ್ ತಲುಪಲಿರುವ ಈ ತಾರೆಯರು ಸಂಜೆ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಮುಖ್ಯಮಂತ್ರಿಯಿಂದ ಪ್ರಶಸ್ತಿ ಪ್ರದಾನ
ದೊಡ್ಮನೆ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಸಂಜೆ ಕಾರ್ಯಕ್ರಮದಲ್ಲಿ ಸಿಎಂ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದಕ್ಕೂ ಮುನ್ನ ಮಧ್ಯಾಹ್ನ 2 ಘಂಟೆಯಿಂದ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದವರೆಗೆ ಪುನೀತ್ ಅಭಿಮಾನಿಗಳ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಅದ್ಧೂರಿ ವೇದಿಕೆ ನಿರ್ಮಿಸಲಾಗಿದೆ.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಕರ್ನಾಟಕ ರಾಜ್ಯ ಹೇಗಾಯಿತು ನಿಮಗೆ ಗೊತ್ತೇ?
ಹಂಪಿ ಮಾದರಿಯ ಬೃಹತ್ ವೇದಿಕೆ ಸಿದ್ಧಗೊಳಿಸಲಾಗಿದ್ದು, ವೇದಿಕೆ ಮೇಲೆ 30 ವಿವಿಐಪಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜ್ಯೂ..ಎನ್‌ಟಿಆರ್, ರಜನಿಕಾಂತ್, ಸುಧಾಮೂರ್ತಿ, ಶಿವಣ್ಣ, ರಾಘಣ್ಣ, ಅಪ್ಪು ಕುಟುಂಬಸ್ಥರು, ಮುಖ್ಯಮಂತ್ರಿ, ಕೆಲ ಸಚಿವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ 7 ಸಾವಿರ ವಿಐಪಿ ಪಾಸ್ ವಿತರಿಸಲಾಗಿದೆ. ಸಾರ್ವಜನಿಕರ ವೀಕ್ಷಣೆಗಾಗಿ 10 ಎಲ್‌ಇಡಿ ತೆರೆಗಳ ವ್ಯವಸ್ಥೆ ಮಾಡಲಾಗಿದೆ. ವಿಧಾನಸೌಧ ಪೂರ್ವ ಮತ್ತು ಹೈಕೋರ್ಟ್ ಮಧ್ಯದಲ್ಲಿರುವ ಅಂಬೇಡ್ಕರ್ ರಸ್ತೆ ಹಾಗೂ ಅಂಬೇಡ್ಕರ್ ಪಾರ್ಕ್‌ನ್ಲಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಟ್ರಾಫಿಕ್ ನಿರ್ಬಂಧ
ಭವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದ ರಸ್ತೆಯನ್ನು ಮಧ್ಯಾಹ್ನ ಪೂರ್ಣ ಬಂದ್ ಮಾಡಲಾಗುತ್ತಿದೆ. ಬಾಳೆಕುಂದ್ರಿ ಸರ್ಕಲ್ ಹಾಗೂ ಮೀಸೆ ತಿಮ್ಮಯ್ಯ ಸರ್ಕಲ್‌ನಿಂದ ಮತ್ತು ಕೆ.ಆರ್ ವೃತ್ತದಿಂದ ವಿಧಾನಸೌಧದ ಕಡೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದ್ದರಿಂದ ವಾಹನ ಸವಾರರು ಈ ರಸ್ತೆಗಳನ್ನು ಬಳಸದಿರಲು ಮತ್ತು ಪರ್ಯಾಯ ಮಾರ್ಗಗಳನ್ನು ಬಳಸಲು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿಧಾನಸೌಧದ ಮುಂಭಾಗದ ಡಾ.ಬಿಆರ್ ಅಂಬೇಡ್ಕರ್ ರಸ್ತೆಯನ್ನು ಬಂದ್ ಮಾಡಲಾಗುತ್ತಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಬಹುದು. ಈ ಸಂದರ್ಭದಲ್ಲಿ ಅಂಬೇಡ್ಕರ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಆಲಿ ಆಸ್ಕರ್ ರಸ್ತೆ, ಅರಮನೆ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಕ್ಲೀನ್ಸ್ ರಸ್ತೆ ಮತ್ತು ಕನ್ನಿಂಗ್ ಹ್ಯಾಮ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಟ್ಟ ದೇವರಾಜ ಅರಸರು ಏನೆಂದಿದ್ದರು ಗೊತ್ತೇ?