Site icon Vistara News

ಕರ್ನಾಟಕ ಗೆದ್ದಿದ್ದಕ್ಕೆ ಬೀಗಬೇಡಿ, ಲೋಕಸಭೆ ಎಲೆಕ್ಷನ್‌ನಲ್ಲಿ ಈ ಫಲಿತಾಂಶ ಬರೋದು ಡೌಟು; ಕಾಂಗ್ರೆಸ್‌ಗೆ ಎಚ್ಚರಿಸಿದ ಕಿಶೋರ್

No logic in Rahul Gandhi nyay yatra Says Prashant Kishor

ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಪಕ್ಷ ಅದ್ಭುತ ಜಯ ಸಾಧಿಸಿದೆ. ಆದರೆ, ಇದುವೇ ಲೋಕಸಭೆಗೆ ದಾರಿ ಎಂಬಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ತಿಳಿದುಕೊಳ್ಳುವುದು ಬೇಡ. ಆ ಬಗ್ಗೆ ಕಾಂಗ್ರೆಸ್ ಪಕ್ಷವು ಎಚ್ಚರಿಕೆಯಿಂದರಬೇಕು ಎಂದು ರಾಜಕೀಯ ತಂತ್ರಜ್ಞ ಮತ್ತು ಕಾರ್ಯಕರ್ತ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ. ಅವರ ಜನ್ ಸುರಾಜ್ ಸಂಘಟನೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ವಿಧಾನಸಭೆ ಚುನಾವಣೆಯನ್ನು ಲೋಕಸಭೆ ಚುನಾವಣೆಯ ಪೂರ್ವಸಿದ್ಧತೆಯ ರೀತಿಯಲ್ಲಿ ಪರಿಗಣಿಸಬೇಕಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ಫಲಿತಾಂಶವೇ ಲೋಕಸಭೆ ಚುನಾವಣೆಯಲ್ಲೂ ರಿಪೀಟ್ ಆಗಲಾರದು ಎಂಬುದಕ್ಕೆ ಈ ಹಿಂದಿನ ಚುನಾವಣೆಗಳ ಫಲಿಂತಾಶಗಳ ಅಂಕಿ ಸಂಖ್ಯೆಯನ್ನು ಒದಗಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅದ್ಭುತ ಗೆಲುವಿಗೆ ಅವರನ್ನು ಅಭಿನಂದಿಸುತ್ತೇನೆ. ಆದರೆ, ಆದರೆ ಲೋಕಸಭೆ ಚುನಾವಣೆಯಲ್ಲಿ ಏನಿದೆ ಎಂಬುದರ ಸುಳಿವಿಗಾಗಿ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ತಪ್ಪಾಗಿ ಗ್ರಹಿಸದಂತೆ ನಾನು ಆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಎಚ್ಚರಿಸಲು ಬಯಸುತ್ತೇನೆ ಎಂದು ಕಿಶೋರ್ ಹೇಳಿದ್ದಾರೆ.

2013ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿತಾದರೂ 2014ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿತು. ಅದೇ ಫಲಿತಾಂಶವು 2019ರ ಚುನಾವಣೆಯಲ್ಲಿ ಪುನರಾವರ್ತಿತವಾಯಿತು. ಆಗಲೂ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅಸ್ತಿತ್ವದಲ್ಲಿತ್ತು. ಆದರೆ, ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. 2019ಕ್ಕಿಂತ ಮುಂಚೆಯೂ ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಸಿದುಕೊಂಡರೂ ಲೋಕಸಭೆಯಲ್ಲಿ ಹೀನಾಯವಾಗಿ ಸೋತಿರುವ ಸಂಗತಿಗಳನ್ನು ಕಿಶೋರ್ ತಮ್ಮ ಹೇಳಿಕೆಯಲ್ಲಿ ಹೈಲೈಟ್ ಮಾಡಿದ್ದಾರೆ.

2012ರಲ್ಲೂ ಸಮಾಜವಾದಿ ಪಕ್ಷವು ಉತ್ತರಪ್ರದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಎರಡು ವರ್ಷಗಳ ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದ 80 ಸೀಟುಗಳ ಪೈಕಿ 73 ಸ್ಥಾನಗಳಲ್ಲಿ ಗೆಲುವು ಸಾಧಿಸಿತು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಇದನ್ನೂ ಓದಿ: Prashant Kishor | ಅವರು ದೊಡ್ಡ ಜನ! ರಾಹುಲ್ ಪಾದಯಾತ್ರೆಗೆ ಪ್ರಶಾಂತ್ ಕಿಶೋರ್ ವ್ಯಂಗ್ಯ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭವಿಷ್ಯವನ್ನು ಒತ್ತಿಹೇಳಲು ಅಂಕಿಅಂಶಗಳ ಮೇಲೆ ಹೆಚ್ಚು ಒತ್ತು ನೀಡಿದ ಕಿಶೋರ್ ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅದರ ಯಶಸ್ಸನ್ನು ಕಾಂಗ್ರೆಸ್ ನೆನಪಿಸಿಕೊಳ್ಳುವುದು ಒಳ್ಳೆಯದು. ಈ ರಾಜ್ಯಗಳಲ್ಲಿ ಕೆಲವೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೋಚನೀಯ ಪ್ರದರ್ಶನವನ್ನು ಕಾಂಗ್ರೆಸ್‌ ನೆನಪಿಟ್ಟುಕೊಳ್ಳಬೇಕು ಎಂದು ಕಿಶೋರ್ ಅವರು ಹೇಳಿದ್ದಾರೆ.

Exit mobile version