ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು (HD Deve Gowda) ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮಗ ಎಚ್.ಡಿ.ರೇವಣ್ಣ (HD Revanna) ಜೈಲು ಸೇರಿದ್ದಾನೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ (Prajwal Revanna) ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. 90ನೇ ವಯಸ್ಸಿನಲ್ಲಿ ಇದನ್ನೆಲ್ಲ ನೋಡಬೇಕಾಯಿತಲ್ಲ ಎಂದು ದೇವೇಗೌಡರು ಕುಗ್ಗಿಹೋಗಿದ್ದಾರೆ. ಹಾಗಾಗಿ, ಹಲವು ಮಠಾಧೀಶರು ದೇವೇಗೌಡರ ನಿವಾಸಕ್ಕೆ ತೆರಳಿ ಅವರಿಗೆ ಸಾಂತ್ವನ ಹೇಳಿದ್ದಾರೆ.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆಳಿದ ಮಠಾಧೀಶರು, ಅವರಿಗೆ ಸಾಂತ್ವನ ಹೇಳುವ ಜತೆಗೆ ಆಶೀರ್ವಾದ ಮಾಡಿದರು. ಛಲವಾದಿ ಗುರುಪೀಠದ ಬಸವನಾಗಿದೇವ ಶ್ರೀ, ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರು ಭೇಟಿಯಾಗಿ ದೇವೇಗೌಡರಿಗೆ ಸಾಂತ್ವನ ಹೇಳಿದರು. ಇನ್ನು ಕಲಬುರಗಿಯ ಪುಣ್ಯಕೋಟಿ ಆಶ್ರಮದ ವರಲಿಂಗ ಸ್ವಾಮೀಜಿ ಅವರು ದೇವೇಗೌಡರ ನಿವಾಸಕ್ಕೆ ತೆರಳಿದ್ದರು. ಆದರೆ, ಭೇಟಿಗೆ ಸಿಗದೆ ಅವರು ವಾಪಸಾದರು.
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ ಅವರು ವಿದೇಶದಲ್ಲಿ ತಲೆಮರೆಸಿಕೊಂಡು ಇರುವ ಕಾರಣ ಈಗಾಗಲೇ ಬ್ಲ್ಯೂ ಕಾರ್ನರ್ ನೋಟಿಸ್ ನೀಡಲಾಗಿತ್ತು. ಶತಾಯಗತಾಯ ಅವರನ್ನು ಬಂಧಿಸಿ ಕರೆತರಲೇಬೇಕು ಎಂದು ತೀರ್ಮಾನಿಸಿರುವ ಎಸ್‌ಐಟಿ ಈಗ ವಿದೇಶದಿಂದ ಪ್ರಜ್ವಲ್ ಅವರನ್ನು ಕರೆತರಲು ವಿಶೇಷ ತಂಡವನ್ನು ರಚಿಸಿದೆ.
ಓರ್ವ ಎಸ್‌ಪಿ, ಮೂವರು ಇನ್ಸ್‌ಪೆಕ್ಟರ್ ಹಾಗೂ ಮೂವರು ಜನ ಸಬ್ ಇನ್ಸ್‌ಪೆಕ್ಟರ್ ಒಳಗೊಂಡ ತಂಡವನ್ನು ರಚಿಸಲಾಗಿದೆ. ಯೂರೋಪ್ ಬಳಿ ಇರುವ ಹಂಗೇರಿ ತಲುಪಲಿರುವ ಕರ್ನಾಟಕ ಪೊಲೀಸರು ಅಲ್ಲಿ ಹುಡುಕಾಟ ನಡೆಸಲಿದ್ದಾರೆ. ಈಗಾಗಲೇ ಭಾರತ ಹಾಗೂ ಜರ್ಮನಿ ಬಳಿ ಮ್ಯೂಚುಯಲ್ ಲೀಗಲ್ ಅಸಿಸ್ಟೆಂಟ್ ಟ್ರೀಟಿ (MLAT) ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಸಿಬಿಐ ಸಹಾಯದಿಂದ ಇಂಟರ್ ಪೋಲ್ ಅಧಿಕಾರಿಗಳ ಜತೆ ಸಹ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: BS Yediyurappa: ಪ್ರಜ್ವಲ್ ಕೇಸ್‌ನಿಂದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಧಕ್ಕೆ? ಯಡಿಯೂರಪ್ಪ ಹೇಳಿದ್ದಿಷ್ಟು