ಬೆಂಗಳೂರು: ದೇಶದ ಎಲ್ಲ ರಾಜ್ಯಗಳ ಪೊಲೀಸ್ ಸಿಬ್ಬಂದಿಗೂ ಏಕರೂಪ ಸಮವಸ್ತ್ರವನ್ನು ರೂಪಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.
ಅಕ್ಟೋಬರ್ ಅಂತ್ಯದಲ್ಲಿ ಹರ್ಯಾಣದ ಸೂರಜ್‌ಕುಂಡ್‌ನಲ್ಲಿ ಕೇಂದ್ರ ಗೃಹ ಇಲಾಖೆಯಿಂದ ಆಯೋಜಿಸಲಾಗಿದ್ದ ಚಿಂತನ ಶಿಬಿರದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಪ್ರಸ್ತಾಪಿಸಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ಎನ್ನುವುದು ಆಯಾ ರಾಜ್ಯಗಳ ಜವಾಬ್ದಾರಿಯೇ ಆಗಿದ್ದರೂ, ಅದು ಇಡೀ ರಾಷ್ಟ್ರದ ಸಮಗ್ರತೆ ಮತ್ತು ಏಕತೆಗೆ ಸಂಬಂಧಪಟ್ಟ ವಿಷಯ. ರಾಜ್ಯಗಳು ಪರಸ್ಪರರಿಂದ ಕಲಿಯಬೇಕು. ಒಂದು ರಾಜ್ಯವನ್ನು ನೋಡಿ, ಮತ್ತೊಂದು ರಾಜ್ಯಗಳು ಸ್ಫೂರ್ತಿ ಪಡೆಯಬೇಕು. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದ ಪ್ರಧಾನಿ ಮೋದಿ ಇದೇ ಹೊತ್ತಲ್ಲಿ ‘ಒಂದು ದೇಶ, ಒಂದೇ ಪೊಲೀಸ್ ಸಮವಸ್ತ್ರ’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದರು. ಹೀಗೆ ರಾಷ್ಟ್ರಾದ್ಯಂತ ಎಲ್ಲ ರಾಜ್ಯಗಳ ಪೊಲೀಸರೂ ಒಂದೇ ಮಾದರಿಯವ ಯೂನಿಫಾರ್ಮ್ ಧರಿಸುವಂತೆ ನಿಯಮ ಜಾರಿ ಸಂಬಂಧ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೂ ಚರ್ಚಿಸಬೇಕು’ ಎಂದು ಹೇಳಿದ್ದರು.
ಕೇಂದ್ರ ಭದ್ರತಾ ಏಜೆನ್ಸಿಗಳು ಮತ್ತು ಪೊಲೀಸ್ ಸಶಸ್ತ್ರಪಡೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈಗೀಗ ಕ್ರೈಂಗಳು ಹೆಚ್ಚುತ್ತಿವೆ. ಗಡಿಗಳ ಎಲ್ಲೆ ಮೀರಿ ಕ್ರಿಮಿನಲ್ ಕೆಲಸಗಳು ನಡೆಯುತ್ತಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದರೆ ರಾಜ್ಯ ಮತ್ತು ಕೇಂದ್ರಗಳು ಒಂದಾಗಬೇಕು. ಹಾಗೆಯೇ, ಕಾನೂನು ಪರಿಪಾಲನೆ ಮಾಡುವ ನಾಗರಿಕರನ್ನು, ಋಣಾತ್ಮಕ ಶಕ್ತಿಗಳಿಂದ ಕಾಪಾಡುವ ಹೊಣೆ ನಮ್ಮದು ಎಂದಿದ್ದರು.
ಈ ಕುರಿತು ಕರ್ನಾಟಕಕ್ಕೆ ಪ್ರಸ್ತಾವನೆಯನ್ನು ಕಳಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಪೊಲೀಸ್ ಸಿಬ್ಬಂದಿಗೆ ಖಾಗಿ ವಸ್ತ್ರ, ಖಾಗಿ ಹ್ಯಾಟ್, ಕಪ್ಪು ಶೂ, ಬ್ಲಾಕ್ ಬೆಲ್ಟ್ ರೂಪಿಸಲಾಗಿದೆ. ಸಂಚಾರ ಪೊಲೀಸರಿಗೆ ಬಿಳಿ ಅಂಗಿ ಹಾಗೂ ಖಾಕಿ ಪ್ಯಾಂಟ್, ಬಿಳಿ ಹ್ಯಾಟ್, ಕಪ್ಪು ಶೂ, ಕಪ್ಪು ಬೆಲ್ಟ್. ಮಹಿಳಾ ಪೊಲೀಸ್ ಸಿಬ್ಬಂದಿಗೆ ಖಾಕಿ ವಸ್ತ್ರ, ಖಾಗಿ ಬೆರೆಟ್ ಕ್ಯಾಪ್, ಗರ್ಭಿಣಿಯಾಗಿದ್ದರೆ ಖಾಕಿ ಸೀರೆ ತೊಡಬಹುದು, ಕಪ್ಪು ಶೂ, ಕಪ್ಪು ಬೆಲ್ಟ್. ಈ ರೀತಿ ವಿವಿಧ ಪೊಲೀಸ್ ಸಿಬ್ಬಂದಿಗೆ ಸಮಾನ ಸಮವಸ್ತ್ರವನ್ನು ರೂಪಿಸುವ ಪ್ರಸ್ತಾವನೆ ಕಳಿಸಲಾಗಿತ್ತು.
ಈ ಬಗ್ಗೆ ಉತ್ತರ ಬರೆದಿರುವ ರಾಜ್ಯ ಗೃಹ ಇಲಾಖೆ, ಪ್ರಧಾನಮಂತ್ರಿಯವರು ಸೂಚಿಸಿದಂತೆ ದೇಶಾದ್ಯಂತ ಸಮಾನ ಪೊಲೀಸ್ ಸಮವಸ್ತ್ರಕ್ಕೆ ಸಹಮತವಿದೆ. ದೇಶಾದ್ಯಂತ ಕಾನೂನು ಜಾರಿ ಸಂಸ್ಥೆಗಳಲ್ಲಿ ಸಮಾನ ಗುರುತನ್ನು ಇದು ಮೂಡಿಸುತ್ತದೆ. ಈ ಯೋಜನೆಯನ್ನು ಜಾರಿಗೊಳಿಸಿದರೆ ಅದಕ್ಕೆ ಕರ್ನಾಟಕ ಪೊಲೀಸ್ ಬದ್ಧವಾಗಿರುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ | PM Modi | ಒಂದು ದೇಶ, ಒಂದು ಪೊಲೀಸ್ ಸಮವಸ್ತ್ರ ಪ್ರಸ್ತಾಪಿಸಿದ ಪ್ರಧಾನಿ ಮೋದಿ; ಚರ್ಚಿಸಲು ರಾಜ್ಯಗಳಿಗೆ ಸೂಚನೆ