Site icon Vistara News

Mahadayi Project: ಮಹದಾಯಿ ಕುರಿತು ಕೇಂದ್ರಕ್ಕೆ ಕರ್ನಾಟಕ ಪರಿಷ್ಕೃತ ಪ್ರಸ್ತಾಪ; ಗೋವಾಕ್ಕೆ ದಿಟ್ಟ ಸಂದೇಶ

Mahadayi River Project

Karnataka submits revised proposal to Central Government on Mahadayi project

ಬೆಂಗಳೂರು/ನವದೆಹಲಿ: ಮಹದಾಯಿ ಕಳಸಾ ನಾಲಾ ತಿರುವು ಯೋಜನೆ ಕುರಿತಂತೆ ರಾಜ್ಯ ಸರ್ಕಾರವು ಗೋವಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಮಹದಾಯಿ ನದಿ ನೀರು ಯೋಜನೆ (Mahadayi Project) ಕುರಿತಂತೆ ವನ್ಯಜೀವಿ ಅನುಮೋದನೆ ಪಡೆಯಲು ರಾಜ್ಯ ಸರ್ಕಾರವು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿದೆ. ಇದಲ್ಲದೆ, ಯೋಜನೆಗೆ ಅತ್ಯವಶ್ಯವಾಗಿ ಬೇಕಿರುವ 26.92 ಹೆಕ್ಟೇರ್‌ ಅರಣ್ಯ ಉಪಯೋಗಿಸಿಕೊಳ್ಳಲು ಕೇಂದ್ರ ಪರಿಸರ, ಅರಣ್ಯ ಮತ್ತು ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಹುಬ್ಬಳ್ಳಿ-ಧಾರವಾಡ ಸೇರಿ ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹದಾಯಿ ನದಿ ವಿವಾದವು ಹಲವು ವರ್ಷಗಳಿಂದ ಭುಗಿಲೆದ್ದಿದೆ. ಸಂರಕ್ಷಿತ ಅರಣ್ಯ ಪ್ರದೇಶವನ್ನು ನದಿ ನಾಲಾ ತಿರುವು ಯೋಜನೆಗೆ ಬಳಸಿಕೊಳ್ಳಲು ಇದಕ್ಕೂ ಮೊದಲು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ನಿರಾಕರಿಸಿತ್ತು. ಹಾಗಾಗಿ, ರಾಜ್ಯ ಸರ್ಕಾರವು ಹೊಸ ಪ್ರಸ್ತಾವನೆ ಸಲ್ಲಿಸಿದ್ದು, ಸಚಿವಾಲಯದ ಆಕ್ಷೇಪಗಳಿಗೆ ಸಮಜಾಯಿಷಿ ನೀಡಿದೆ.

ಇದನ್ನೂ ಓದಿ: Mahadayi Dispute: ಮಹದಾಯಿ ಬಿಕ್ಕಟ್ಟು ಶಮನಕ್ಕೆ ಕೇಂದ್ರ ದಿಟ್ಟ ಹೆಜ್ಜೆ, ಮಹದಾಯಿ ಪ್ರವಾಹ್‌ ರಚನೆಗೆ ಅಸ್ತು, ಏನು ಉಪಯೋಗ?

ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಮಧ್ಯೆ ಉಂಟಾಗಿರುವ ಜಲ ವಿವಾದ ಬಗೆಹರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮಹದಾಯಿ ಜಲ ಬಿಕ್ಕಟ್ಟು ನ್ಯಾಯಾಧಿಕರಣದ ತೀರ್ಪುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು, ರಾಜ್ಯಗಳ ಮಧ್ಯೆ ಸಮನ್ವಯ ಸಾಧಿಸಲು ʼಮಹದಾಯಿ ಪ್ರವಾಹ್‌ʼ (Mahadayi PRAWAH-Progressive River Authority for Welfare and Harmony) ರಚನೆಗೆ ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದೆ.

ಮಹದಾಯಿ ನದಿಯ ಉಪನದಿಗಳಾದ ಕಳಸಾ ಹಾಗೂ ಬಂಡೂರಿಗೆ ಅಣೆಕಟ್ಟು ನಿರ್ಮಿಸುವ ಮೂಲಕ ನದಿ ನೀರನ್ನು ತಿರುಗಿಸುವ ಕರ್ನಾಟಕದ ಯೋಜನೆಯ ಸಮಗ್ರ ವರದಿಗಳಿಗೆ ಈಗಾಗಲೇ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಆದರೆ, ಇದಕ್ಕೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಹಾಗಾಗಿ, ಬಿಕ್ಕಟ್ಟು ಮುಂದುವರಿಯುತ್ತಲೇ ಇದೆ. ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯಿಂದ ಗೋವಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ. ಗೋವಾದ ಯಾವುದೇ ಗೊಡ್ಡು ಬೆದರಿಕೆಗಳಿಗೆ ಹಿಂಜರಿಯುವುದಿಲ್ಲ ಹಾಗೂ ಯೋಜನೆ ಜಾರಿಯ ಪ್ರಯತ್ನ ನಿಲ್ಲಿಸುವುದಿಲ್ಲ ಎಂಬ ಸಂದೇಶವರನ್ನು ಕರ್ನಾಟಕ ಸರ್ಕಾರ ರವಾನಿಸಿದೆ.

Exit mobile version