ಬೆಂಗಳೂರು: ಜನವರಿ 26ರ ಗಣರಾಜ್ಯ ದಿನದಂದು (Republic Day) ನವದೆಹಲಿಯ ಕರ್ತವ್ಯ ಪಥದಲ್ಲಿ ಭಾಗವಹಿಸಲು ಪ್ರಾರಂಭದಲ್ಲಿ ಅನುಮತಿ ನಿರಾಕರಣೆಯಾಗಿ, ಕಳೆದ ವಾರವಷ್ಟೆ ಹಸಿರು ನಿಶಾನೆ ಪಡೆದ ಕರ್ನಾಟಕ ʼನಾರಿಶಕ್ತಿ ಸ್ತಬ್ಧ ಚಿತ್ರʼ ಒಂದೇ ವಾರದಲ್ಲಿ ಸಿದ್ಧವಾಗಿದೆ. ಸೋಮವಾರ ಇತರೆ ಸ್ತಬ್ಧ ಚಿತ್ರಗಳ ಜತೆಗೆ ಪೂರ್ವಾಭ್ಯಾಸದಲ್ಲೂ ಭಾಗವಹಿಸಿ ಗಮನ ಸೆಳೆದಿದೆ.
ಅನೇಕ ವರ್ಷಗಳಿಂದ ಸ್ತಬ್ಧಚಿತ್ರಗಳನ್ನು ಪ್ರದರ್ಶೀಸುತ್ತಿದ್ದ ಕರ್ನಾಟಕಕ್ಕೆ ಈ ಬಾರಿ ಅನುಮತಿ ನಿರಾಕರಿಸಲಾಗಿತ್ತು. ಈ ಕುರಿತು ಕರ್ನಾಟಕ ಮೂಲದ ಕೇಂದ್ರ ಸಚಿವರು, ಸಂಸದರು, ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಕಳೆದ ವಾರ ಅನುಮತಿ ನೀಡಿತ್ತು.
ಇದೀಗ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ತಬ್ಧಚಿತ್ರನ್ನು ನಿರ್ಮಾಣ ಮಾಡಲಾಗಿದೆ. ನಾರಿಶಕ್ತಿ ಹೆಸರಿನ ಸ್ತಬ್ಧ ಚಿತ್ರದಲ್ಲಿ ಮೂವರು ಅನಕ್ಷರಸ್ಥೆ, ಪದ್ಮ ಪುರಸ್ಕೃತ ಸಮಾಜ ಸೇವಕಿಯನ್ನು ಚಿತ್ರಿಸಲಾಗಿದೆ. ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆಯರಾದ ಸಾಲು ಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ.
ಈ ಕುರಿತು ಸೋಮವಾರ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಣ್ಣ ಭಾವನೆಗಳನ್ನು ಬಿಟ್ಟು,ಕರ್ನಾಟಕದ ಬಗ್ಗೆ ಎಲ್ಲರೂ ಒಂದಾಗಬೇಕು ಎಂದರು. ಕೆಪಿಸಿಸಿ ಅಧ್ಯಕ್ಷರು ಈ ಕುರಿತು ನೀಡಿರುವ ಹೇಳಿಕೆಗೆ ಉತ್ತರಿಸಿ, ನವದೆಹಲಿಯಲ್ಲಿ 2009 ರಲ್ಲಿ ಯು.ಪಿ.ಎ ಸರ್ಕಾರವಿತ್ತು. ರಾಜ್ಯದಿಂದ ಕಳುಹಿಸಿದ ಸ್ಥಬ್ಧಚಿತ್ರವನ್ನು ನಿರಾಕರಿಸಲಾಗಿತ್ತು. ಕರ್ನಾಟಕದ ಬಗ್ಗೆ ಅಷ್ಟು ಸ್ವಾಭಿಮಾನ ಇರುವವರು, ಆಗ ಯಾರ ಮೇಲಾದರೂ ಒತ್ತಡ ಹೇರಿ ಸ್ಥಬ್ಧಚಿತ್ರಕ್ಕೆ ಸ್ಥಾನಪಡೆದುಕೊಳ್ಳಬಹುದಿತ್ತು.
ಇದನ್ನೂ ಓದಿ | Karnataka Tableau | ಮೊದಲಿಗೆ ತಿರಸ್ಕರಿಸಿ, ಕೊನೆ ಗಳಿಗೆಯಲ್ಲಿ ಕರ್ನಾಟಕ ಟ್ಯಾಬ್ಲೋಗೆ ಓಕೆ ಎಂದಿದ್ದೇಕೆ?
ನಂತರ ಸತತ 14 ವರ್ಷ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದೆ. ಕಳೆದ ಬಾರಿ ಪ್ರಶಸ್ತಿ ಪಡೆದವರಿಗೆ ಬೇರೆಯದರಲ್ಲಿ ಅವಕಾಶ ನೀಡಬೇಕೆಂಬ ವಿಚಾರವಿತ್ತು. ಆದಾಗ್ಯೂ ನಾನು ರಕ್ಷಣಾ ಸಚಿವರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯವರೂ ಮಾತನಾಡಿ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡಿದ್ದಾರೆ. ಕೇವಲ ಎಂಟು ಹತ್ತು ದಿನಗಳಲ್ಲಿ ನಾರಿಶಕ್ತಿ ಎಂಬ ವಿಷಯದ ಕುರಿತು ಸ್ಥಬ್ಧಚಿತ್ರ ತಯಾರಿಸಲಾಗಿದೆ. ಅತ್ಯಂತ ಅದ್ಭುತವಾಗಿ ಸ್ಥಬ್ಧಚಿತ್ರ ಮೂಡಿಬಂದಿದೆ ಎಂದರು.