Site icon Vistara News

ಸುಗ್ರೀವಾಜ್ಞೆ ಮೂಲಕ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸರಕಾರ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಹಿಂದುತ್ವ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುತ್ತಿರುವ ರಾಜ್ಯ ಸರಕಾರ, ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಧಾರ ಮಾಡಿದೆ.
ಈ ಹಿಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿದೆ. ಆದರೆ ವಿಧಾನ ಪರಿಷತ್‌ನಲ್ಲಿ ಸಂಖ್ಯಾಬಲ ಕಡಿಮೆ ಇದ್ದದ್ದರಿಂದ ಅಂಗೀಕಾರ ಪಡೆಯಲು ಸರ್ಕಾರದಿಂದ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಮುಂದಿನ ಅಧಿವೇಶನದವರೆಗೆ ಕಾಯುವುದಕ್ಕಿಂತಲೂ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಸರಕಾರ ನಿರ್ಧಾರ ಮಾಡಿದೆ.

ಇದನ್ನೂ ಓದಿ | ಕಾಂಗ್ರೆಸ್‌ ಆಫರ್‌ Not OK ಎಂದ PK: ಪ್ರಶಾಂತ್‌ ಕಿಶೋರ್‌ ತೀರ್ಮಾನಕ್ಕೆ 4 ಕಾರಣಗಳು

ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಮಾಡಲಾಗುತ್ತದೆ. ಸಂಪುಟ ಸಭೆಗೂ ಮುನ್ನ ಪ್ರತಿಕ್ರಿಯೆ ನೀಡಿ ಇದನ್ನು ಖಚಿತ ಪಡಿಸಿದ ಬೊಮ್ಮಾಯಿ, ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರ ಸುಗ್ರೀವಾಜ್ಞೆಯಾಗಿ ಕಾಯ್ದೆಯನ್ನು ಜಾರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಮತಾಂತರ ನಿಷೇಧ ಕಾಯ್ದೆ ಎಂದು ಹೇಳಲಾಗುತ್ತದಾದರೂ ಕಾಯ್ದೆಯ ಪೂರ್ಣ ಹೆಸರು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಆಧ್ಯಾದೇಶ 2022. ಕಾಯ್ದೆಯ ಪ್ರಕಾರ, ಬಲವಂತದ ಮತಾಂತರ ಮಾಡುವಂತಿಲ್ಲ. ಅದು ಜಾಮೀನು ರಹಿತ ಅಪರಾಧ ಮತ್ತು ನಡೆಸಲಾದ ಮತಾಂತರ ಅಸಿಂಧು ಆಗುತ್ತದೆ. ಹಣ, ಉಡುಗೊರೆ, ಶಿಕ್ಷಣ ಮತ್ತಿತರ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ. ಭಾವನಾತ್ಮಕವಾಗಿ ತಮ್ಮತ್ತ ಸೆಳೆದುಕೊಂಡು ಮತಾಂತರ ಮಾಡುವಂತಿಲ್ಲ. ಆಮಿಷ ಒಡ್ಡಿ ಮಾಡಲಾದ ಮದುವೆಯೂ ಅಸಿಂಧುವಾಗುತ್ತದೆ ಎನ್ನುವುದು ಸೇರಿ ಅನೇಕ ಅಂಶಗಳಿವೆ.

ಯಾವುದೇ ಸುಗ್ರೀವಾಜ್ಞೆ ಹೊರಡಿಸಿದ ನಂತರ ರಾಜ್ಯಪಾಲರ ಸಮ್ಮತಿಗೆ ಕಳಿಸಬೇಕು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಒತ್ತಿಗೆ ನೀಡಿದ ಬಳಿಗ ಕಾಯ್ದೆ ಜಾರಿಗೆ ಬರಲಿದೆ. ಯಾವುದೇ ಸುಗ್ರೀವಾಜ್ಞೆ ಹೊರಡಿಸಿದ ನಂತರ ಆರು ತಿಂಗಳೊಳಗೆ ವಿಧಾನಮಂಡಲದ ಅನುಮೋದನೆ ಪಡೆಯಬೇಕು. ಇಲ್ಲದಿದ್ದರೆ ಸುಗ್ರೀವಾಜ್ಞೆ ಅಸ್ತಿತ್ವ ಕಳೆದುಕೊಳ್ಳುತ್ತದೆ. ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಕಾಯ್ದೆಯನ್ನು ಮಂಡಿಸಿರಲಿಲ್ಲ. ಅಂದು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸಂಖ್ಯಾಬಲ ಕಡಿಮೆ ಇತ್ತು. ಇದೀಗ ಜೂನ್‌ 3ರಂದು ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ಸ್ಥಾನಗಳು ಲಭಿಸುತ್ತವೆ ಆಗ ಸಂಖ್ಯಾಬಲ ಹೆಚ್ಚುತ್ತದೆ. ಹೀಗಾಗಿ, ಈಗ ಸುಗ್ರೀವಾಜ್ಞೆ ಹೊರಡಿಸಿ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಒಪ್ಪಿಗೆ ಪಡೆಯುವ ತೀರ್ಮಾನ ಮಾಡಲಾಗಿದೆ.

ಇದನ್ನೂ ಓದಿ | ಕೋಲಾರ, ಮಂಡ್ಯ ಭಾಗದಿಂದ ಬಿಜೆಪಿ ಹೆಚ್ಚು ಜನ ಬರುತ್ತಿದ್ದಾರೆ: ಅಚ್ಚರಿ ಮೂಡಿಸಿದ CM ಬೊಮ್ಮಾಯಿ

Exit mobile version