ಬೆಂಗಳೂರು: ನೈರುತ್ಯ ಮುಂಗಾರು ರಾಜ್ಯಾದ್ಯಂತ (karnataka weather forecast) ದುರ್ಬಲವಾಗಿದೆ. ಬಾಗಲಕೋಟೆಯ ಲೋಕಾಪುರದಲ್ಲಿ 1 ಸೆಂ.ಮೀ ಮಳೆಯಾಗಿದೆ. ಗರಿಷ್ಠ ಉಷ್ಣಾಂಶ ಕಲಬುರಗಿಯಲ್ಲಿ 34.8 ಡಿ.ಸೆ. ದಾಖಲಾಗಿದೆ. ಕಡಿಮೆ ಉಷ್ಣಾಂಶ 15.6 ಡಿ.ಸೆ. ಬಾಗಲಕೋಟೆಯಲ್ಲಿ ದಾಖಲಾಗಿದೆ.
ದಕ್ಷಿಣ ಒಳನಾಡಿನ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಚದುರಿದ ಮಳೆಯೊಂದಿಗೆ ಶುಷ್ಕ ವಾತಾವರಣವೇ ಮೇಲುಗೈ ಸಾಧಿಸಲಿದೆ.
ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆ
ಉತ್ತರ ಒಳನಾಡಿನ ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರತ್ಯೇಕ ಕಡೆ ಭಾರಿ ಮಳೆಯಾಗಬಹುದು. ಗದಗ, ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ಮಳೆ ನಿರೀಕ್ಷೆ ಇದ್ದು, ಉಳಿದ ಭಾಗಗಳಲ್ಲಿ ಒಣಹವೆ ಇರಲಿದೆ.
ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತಿ ಸಣ್ಣ ಮಳೆಯಾಗಬಹುದು. ಕೊಡಗು ಮತ್ತು ಹಾಸನದಲ್ಲಿ ಲಘುವಾಗಿ ಮಳೆ ಬರಬಹುದು. ಆದರೆ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುವ ಸಂಭವವಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Hassan News : ಹುತ್ತದ ಬಳಿ ಸ್ವಾಮೀಜಿಗಳ ಹತ್ತಾರು ಪಾದುಕೆ, ದಂಡ ಪ್ರತ್ಯಕ್ಷ!
ಈ ಜಿಲ್ಲೆಗಳಲ್ಲಿ ಸುಡುವ ಸೂರ್ಯ
ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಉಷ್ಣಾಂಶ ಏರಿಕೆ ಆಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಉತ್ತರ ಒಳನಾಡಿನ ಕಲಬುರಗಿ, ಕೊಪ್ಪಳ, ಬಾಗಲಕೋಟೆಯ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-2 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಬೆಂಗಳೂರಲ್ಲಿ ಧಗೆ ವಾತಾವರಣ
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದರೂ ಧಗೆ ಪ್ರಮಾಣ ಹೆಚ್ಚಾಗಿರಲಿದೆ. ಆಗಾಗ ಬಿರು ಬಿಸಿಲು ಜತೆಗೆ ದಿಢೀರ್ ಮೋಡ ಮುಸುಕಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯಂದು ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ