ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆಯಾದರೂ ಬುಧವಾರ (ನ. 29) ಒಂದೆರಡು ಕಡೆಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ (south and north interior Karnataka) ಜಿಲ್ಲೆಗಳ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ (coastal karnataka) ಹಾಗೂ ಮಲೆನಾಡಲ್ಲಿ (Malnad Districts) ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ತನ್ನ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ.
ಉತ್ತರ ಒಳನಾಡಿನ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಉಳಿದಂತೆ ಅಲ್ಪ ಪ್ರಮಾಣದ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿಯೂ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ವರದಿಯಾಗಿದೆ. ದಕ್ಷಿಣ ಕನ್ನಡದಲ್ಲಿ ಚದುರಿದಂತೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ.
ಮಂಡ್ಯ, ದಾವಣಗೆರೆ, ಚಿತ್ರದುರ್ಗದಲ್ಲಿ ಭಾರಿ ಮಳೆ
ದಕ್ಷಿಣ ಒಳನಾಡಿನ ಮಂಡ್ಯ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮೈಸೂರು ಮತ್ತು ತುಮಕೂರಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರಲ್ಲಿ ಎಲ್ಲ ಕಡೆ ಮಳೆ ಇಲ್ಲ
ಬೆಂಗಳೂರಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ ಇದ್ದರೆ, ಬೆಳಗ್ಗೆ ಹೊತ್ತು ಬಿಸಿಲಿನಿಂದ ಕೂಡಿರಲಿದೆ. ಮಧ್ಯಾಹ್ನದ ನಂತರ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಕೆಲವೊಮ್ಮೆ ಕೆಲವೇ ಕೆಲವು ಕಡೆ ಅಲ್ಪ ಪ್ರಮಾಣದ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಅಲ್ಲದೆ, ಡಿಸೆಂಬರ್ 2ರವರೆಗೆ ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಲಿದ್ದು, ರಾತ್ರಿ ವೇಳೆ ಹಾಗೂ ಬೆಳಗಿನ ಜಾವ ಚಳಿಯ ವಾತಾವರಣ ಇರಲಿದೆ ಎಂದು ಅಂದಾಜಿಸಲಾಗಿದೆ. ಜತೆಗೆ ಶೀತಗಾಳಿ ಹೆಚ್ಚಿದ್ದು, ಹೊರ ಹೋಗುವಾಗ ಕಿವಿ, ಮೂಗನ್ನು ಕವರ್ ಮಾಡಿಕೊಂಡು ಹೋಗಬೇಕು. ಜತೆಗೆ ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು ಎಂಬ ಸಲಹೆಗಳನ್ನು ನೀಡಲಾಗಿದೆ.
ಇದನ್ನೂ ಓದಿ: FDA SDA Recruitment : ಎಫ್‌ಡಿಎ, ಎಸ್‌ಡಿಎ ನೇಮಕಾತಿಗೆ ಅರ್ಜಿ ಯಾವಾಗ? ಕಾಯುತ್ತಿರುವ ಲಕ್ಷಾಂತರ ಆಕಾಂಕ್ಷಿಗಳು!
ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆ
ಮಂಗಳೂರಿನಲ್ಲಿ ಸಹ ಡಿಸೆಂಬರ್ 2ರವರೆಗೆ ಮೋಡ ಕವಿದ ವಾತಾವರಣ ಹೆಚ್ಚಿರಲಿದ್ದು, ಅಲ್ಲಲ್ಲಿ ಆಗಾಗ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಹೊನ್ನಾವರದಲ್ಲಿ ಮುಂದಿನ 3 ದಿನ ಮತ್ತು ಕಲಬುರಗಿ, ಚಿತ್ರದುರ್ಗದಲ್ಲಿ ನ. 30 ಹಾಗೂ ಡಿ. 1ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ.