ಬೆಂಗಳೂರು: ರಾಜ್ಯದಲ್ಲಿ ಮುಂದಿನ 48 ಗಂಟೆಯಲ್ಲಿ (ಗುರುವಾರ ಮತ್ತು ಶುಕ್ರವಾರ) ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಬಿಸಿಲಿನ ವಾತಾವರಣ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ಉಲ್ಲೇಖಿಸಿದೆ. ಗರಿಷ್ಠ ತಾಪಮಾನದಲ್ಲಿನ (Maximum Temperature) ಬದಲಾವಣೆ ಬಹುತೇಕ ಎಲ್ಲ ಕಡೆ ಕಾಣಲಿದೆ. ಅಂದರೆ, ಉತ್ತರ ಒಳನಾಡು (North Inland), ದಕ್ಷಿಣ ಒಳನಾಡು (South Inland) ಹಾಗೂ ಕರಾವಳಿ (Coastal Karnataka) ಭಾಗಗಳಲ್ಲಿ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೀಗಾಗಿ, ಚಪ್ಪಲಿ ಇಲ್ಲದಿದ್ದರೆ ಕಾಲು ಸುಡುತ್ತದೆ, ಛತ್ರಿ ಇಲ್ಲದಿದ್ದರೆ ತಲೆ ಬಿಸಿಯಾಗುತ್ತದೆ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಬೇಸಿಗೆಯೇ ಕಾಲಿಟ್ಟಿಲ್ಲ. ಆದರೆ, ಉತ್ತರ ಒಳನಾಡಿನ ಜನತೆ ಬೇಸಿಗೆ ಕಾಲವನ್ನು ಅನುಭವಿಸುತ್ತಿದ್ದಾರೆ. ಈ ಭಾಗದ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಿರಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿಯೂ ಭಾರಿ ಸೆಕೆ
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಸೆಕೆ ಕಾಣಿಸಿಕೊಂಡಿದೆ. ಸಮುದ್ರ ತೀರ ಸಮೀಪ ಇದ್ದರೂ ಇವರಿಗೆ ಸೆಕೆ ಮಾತ್ರ ತಪ್ಪಿಲ್ಲ. ಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಕರಾವಳಿ ಜಿಲ್ಲೆಗಳ ಕೆಲವೆಡೆ ಕನಿಷ್ಠ ಹಾಗೂ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ದಕ್ಷಿಣ ಒಳನಾಡಿನಲ್ಲೂ ಸೂರ್ಯ ಶಾಖ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಮತ್ತು ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದಲ್ಲಿ ಶುಷ್ಕ ವಾತಾವರಣ ಇರಲಿದೆ. ಇಲ್ಲಿಯೂ ಸಹ ನಿಯಮಿತವಾಗಿ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶಗಳಲ್ಲಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಸಿ ಬಿಸಿಯಾದ ಬೆಂಗಳೂರು
ರಾಜಧಾನಿ ಬೆಂಗಳೂರು ಈಗ ಬಿಸಿ ಬಿಸಿ. ಮುಂಜಾನೆ ಕೆಲವು ಕಡೆ ಮಂಜಿನ ವಾತಾವರಣ ಕಂಡರೂ ಬೆಳಕು ಹರಿದ ಮೇಲೆ ಬಿಸಿಲೇ ಹೆಚ್ಚು. ಇದರಿಂದಾಗಿ ಸೆಕೆ ಹೆಚ್ಚಾಗುತ್ತಿದೆ. ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: HSRP Number Plate ಅವಧಿ ಮತ್ತೆ 3 ತಿಂಗಳು ವಿಸ್ತರಣೆ; ವಿಧಾನ ಪರಿಷತ್‌ನಲ್ಲಿ ಸರ್ಕಾರ ಘೋಷಣೆ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 32 ಡಿ.ಸೆ -18 ಡಿ.ಸೆ
ಮಂಗಳೂರು: 34 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 33 ಡಿ.ಸೆ – 18 ಡಿ.ಸೆ
ಗದಗ: 35 ಡಿ.ಸೆ – 17 ಡಿ.ಸೆ
ಹೊನ್ನಾವರ: 33 ಡಿ.ಸೆ- 23 ಡಿ.ಸೆ
ಕಲಬುರಗಿ: 35 ಡಿ.ಸೆ – 21 ಡಿ.ಸೆ
ಬೆಳಗಾವಿ: 34 ಡಿ.ಸೆ – 15 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ