ಬೆಂಗಳೂರು: ಶ್ರೀಲಂಕಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಶ್ರೀಲಂಕಾ ಪಶ್ಚಿಮ ಕರಾವಳಿ ದಾಟಿ ಅರಬ್ಬಿ ಸಮುದ್ರದಲ್ಲಿ ಮತ್ತಷ್ಟು ತೀವ್ರಗೊಂಡಿದೆ. ಹೀಗಾಗಿ ಕರ್ನಾಟಕದ ಹಲವೆಡೆ ಮೋಡದ ಕವಿದ ವಾತಾವರಣ (Karnataka weather Forecast) ಇರಲಿದ್ದು, ಮಳೆಯಾಗುವ (Rain News) ಲಕ್ಷಣಗಳಿವೆ.
ಭಾನುವಾರ ರಾಜ್ಯಾದ್ಯಂತ ಒಣ ಹವೆ ಇತ್ತು. ಕಡಿಮೆ ಉಷ್ಣಾಂಶ ಶಿವಮೊಗ್ಗದಲ್ಲಿ 15.8 ಡಿ.ಸೆ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ದಕ್ಷಿಣ ಒಳನಾಡಿನ ಮೈಸೂರು ಮತ್ತು ಮಂಡ್ಯ, ಚಾಮರಾಜನಗರದಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಮಳೆ ಇರಲಿದ್ದು, ಉತ್ತರ ಕನ್ನಡದಲ್ಲಿ ಶುಷ್ಕ ವಾತಾವರಣ ಇರಲಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲೂ ಮಳೆಯಾಗಲಿದೆ. ಉತ್ತರ ಒಳನಾಡಿಗೆ ಯಾವುದೇ ಮಳೆ ಸೂಚನೆ ಇಲ್ಲ, ಬದಲಿಗೆ ಬಿಸಿಲಿನಿಂದ ಕೂಡಿರಲಿದೆ.
ಬೆಂಗಳೂರಲ್ಲಿ ಮಳೆಯಿಲ್ಲ, ಭಾರಿ ಚಳಿಯಷ್ಟೇ
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಯಾವುದೇ ಮಳೆ ಸೂಚನೆಯನ್ನು ನೀಡಿಲ್ಲ. ಬೆಳಗಿನ ಜಾವ ಮುಸುಕುವ ಸಾಧ್ಯತೆ ಇರಲಿದೆ. ಗರಿಷ್ಠ ಉಷ್ಣಾಂಶ 24 ಹಾಗೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Boar Attack: ಹಾಸನದಲ್ಲಿ ಕಾಡುಹಂದಿ ದಾಳಿಗೆ ರೈತ ಸಾವು; ಮಹಿಳೆಯರು ಗಂಭೀರ ಗಾಯ
ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…
ಚಳಿಗಾಲ (Health Tips for Winter) ಬಂತೆಂದರೆ ಉಸಿರಾಟದ ಸಮಸ್ಯೆಯಿರುವ ಮಂದಿಗೆ ಅದು ಸತ್ವಪರೀಕ್ಷೆಯ ಕಾಲ. ಚಳಿಯನ್ನು ಅನುಭವಿಸುವಂತಿಲ್ಲ, ಬಿಡುವಂತಿಲ್ಲ. ಚಳಿಗಾಲ ಶುರುವಾಗುತ್ತಿದ್ದಂತೆ, ಉಸಿರಾಟ, ಶ್ವಾಸಕೋಶದ ಸಮಸ್ಯೆಗಳೂ ಹೆಚ್ಚಾಗಲು ಆರಂಭವಾಗುತ್ತದೆ. ಉಬ್ಬಸ, ಅಸ್ತಮಾದಂತಹ ಖಾಯಿಲೆಯಿರುವ ಮಂದಿಗೆ, ಆಗಾಗ ಸಣ್ಣ ಸಣ್ಣ ಥಂಡಿಗೂ ಶೀತ, ನೆಗಡಿಯಂತಹ ಸಮಸ್ಯೆಗಳನ್ನು ತಂದುಕೊಳ್ಳುವ ಮಂದಿಗೆ ಚಳಿಗಾಲವೆಂದರೆ ದುಃಸ್ವಪ್ನ. ಹೊರಗೆ ಕಾಲಿಟ್ಟರೆ ಸಾಕು ಬೀಸುವ ಒಣ ಚಳಿಗಾಳಿಯ ಹವೆಗೆ ಇತ್ತೀಚೆಗೆ ಎಲ್ಲರಿಗೂ ನೆಗಡಿ, ಶೀತ, ಗಂಟಲಿನ ತೊಂದರೆಯಂತಹ ಸಮಸ್ಯೆಗಳನ್ನು ತಂದೊಡ್ಡುತ್ತಿದ್ದು, ವೈದ್ಯರ ಎದುರು ಸರತಿಯ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ನ್ಯುಮೋನಿಯಾದಂತಹ ಪ್ರಕರಣಗಳು ಈ ಸಂದರ್ಭ ಹೆಚ್ಚಾಗುವ ಸಂಭವವಿದ್ದು, ಬೀಸುವ ಚಳಿಗಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ.
ತಜ್ಞರ ಪ್ರಕಾರ, ಸದ್ಯ ವಾತಾವರಣದಲ್ಲಿ ಶುಷ್ಕ ಚಳಿಗಾಳಿಯು ಬೀಸುತ್ತಿರುವುದರಿಂದ ಮೂಗಿನ ರಂಧ್ರಗಳನ್ನು ಇನ್ನಷ್ಟು ಒಣಗಿಸುತ್ತದೆ. ಇದರಿಂದ ಕಿರಿಕಿರಿಯ ಅನುಭವಗಳಾಗುವುದಷ್ಟೇ ಅಲ್ಲ, ಇದು ಶೀತ ನೆಗಡಿ, ಗಂಟಲು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ, ಸಾಮಾನ್ಯವಾಗಿ, ಯಾವಾಗಲೂ ಮನೆಯೊಳಗೇ ಕಳೆಯುವ ಹಿರಿಯ ವಯಸ್ಸಿನವರು ಇಂಥ ಸಂದರ್ಭ ಹೊರಗೆ ಕಾಲಿಟ್ಟಾಗ ಸುಲಭವಾಗಿ ಇಂಥ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಹಿರಿಯರಲ್ಲಿ, ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುವುದರಿಂದ, ಉಸಿರಾಡಲು ಕಷ್ಟವಾಗುವುದು, ಎದೆಯಲ್ಲಿ ಕಫ ಕಟ್ಟಿದಂಥ ಸಮಸ್ಯೆಗಳು, ನ್ಯುಮೋನಿಯಾದಂತಹ ಕಾಯಿಲೆಗೆ ಈಗ ತುತ್ತಾಗುವ ಸಂಭವ ಅಧಿಕವಿದೆ ಎನ್ನುತ್ತಾರೆ.
ಸಂಶೋಧನೆಗಳ ಪ್ರಕಾರ, ಶೀತ ಹಾಗೂ ಒಣ ಹವೆಯ ಸಂದರ್ಭಗಳಲ್ಲಿ ವೈರಸ್‌ನ ಬೆಳವಣಿಗೆಯೂ ಹೆಚ್ಚಾಗುತ್ತದೆ. ಜೊತೆಗೆ ಗಾಳಿಯಲ್ಲಿ ಈ ವೈರಸ್‌ಗಳು ಹೆಚ್ಚು ಕಾಲ ಇರಬಲ್ಲವಾದ್ದರಿಂದ ಸುಲಭವಾಘಿ ಒಬ್ಬರಿಂದ ಒಬ್ಬರಿಗೆ ಹರಡುವಂಥ ಖಾಯಿಲೆಗಳು ಹೆಚ್ಚಾಗುತ್ತವೆ.
ಹಾಗಾದರೆ, ಚಳಿಗಾಲದಲ್ಲಿ ಮನೆಯ ಒಳಗೇ ಇರಲು ಸಾಧಯವೇ? ಖಂಡಿತಾ ಇಲ್ಲ. ಕೆಲಸ ಕಾರ್ಯಗಳ ನಿಮಿತ್ತ ಹೊರಗಡೆ ಓಡಾಡುವ ಸಂದರ್ಭಗಳು ಬಂದೇ ಬರುತ್ತವೆ. ಆದ್ದರಿಂದ ಈ ಸಮಸ್ಯೆಗಳು ಬಾರದಂತೆ ಹೇಗೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು ಎಂಬುದನ್ನು ನೋಡೋಣ.
ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಹ್ಯಾಂಡ್‌ವಾಶ್ ಬಳಸಿ ಕೈಕಾಲುಗಳನ್ನು ಹೊರಗೆ ಹೋಗಿ ಬಂದಾಗ ತೊಳೆಯುವುದನ್ನು ಮರೆಯಬೇಡಿ. ಮುಖ್ಯವಾಗಿ ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಿ. ವೈದ್ಯರುಗಳ ಪ್ರಕಾರ, ನಮ್ಮ ಕೈಗಳ ಮೂಲಕವೇ ರೋಗವು ಸುಲಭವಾಗಿ ಕಣ್ಣು, ಮೂಗು ಹಾಗೂ ಬಾಯಿಯ ಮೂಲಕ ಹರಡುತ್ತವೆ.
ಹೆಚ್ಚು ಕಾಳಜಿ ವಹಿಸಿ
ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ಹೆಚ್ಚು ಕಾಳಜಿ ವಹಿಸಿ. ಉದಾಹರಣೆಗೆ ಹೃದಯದ ಸಮಸ್ಯೆ, ಮಧುಮೇಹದಂತಹ ತೊಂದರೆಗಳಿದ್ದಲ್ಲಿ, ಅಂತಹ ಮಂದಿಗೆ ಬಹುಬೇಗನೆ ನ್ಯುಮೋನಿಯಾದಂತಹ ಖಾಯಿಲೆಗಳು ಬರುತ್ತವೆ. ಅದಕ್ಕಾಗಿ, ಚಳಿಗಾಲದಲ್ಲಿ, ಮುಖ್ಯವಾಗಿ ಹಿರಿಯ ನಾಗರಿಕರಿ ಹಾಗೂ ಈ ಸಮಸ್ಯೆಗಳಿರುವ ಮಂದಿ ತಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವತ್ತ ಗಮನ ಹರಿಸಬೇಕು.
ಬೆಚ್ಚಗೆ ಇರಿ
ಯಾವುದೇ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರು ಹಾಗೂ ಹಿರಿಯ ನಾಗರಿಕರು ಚಳಿಗಾಲದಲ್ಲಿ ತಮ್ಮನ್ನು ತಾವು ಬೆಚ್ಚಗಿಟ್ಟಿರುವುದು ಬಹಳ ಮುಖ್ಯ. ಬೆಚ್ಚಗಿಟ್ಟಿರುವುದು ಎಂದರೆ ಕೇವಲ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಮಾತ್ರವಲ್ಲ, ದೇಹವನ್ನು ಬೆಚ್ಚಗಿಡುವ ಆಹಾರಗಳನ್ನು ಸೇವಿಸುವುದು, ಶೀತ ಪ್ರಕೃತಿಯ ಆಹಾರಗಳನ್ನು ಕಡಿಮೆ ಮಾಡುವುದು ಅಥವಾ ಬಿಡುವುದು, ಬಿಸಿಬಿಸಿಯಾಗಿರುವಾಗಲೇ ಆಹಾರ ಸೇವಿಸುವುದು ಇತ್ಯಾದಿ ಗಮನ ಹರಿಸುವುದು ಒಳ್ಳೆಯದು.
ಸಾಮಾಜಿಕ ಅಂತರ
ಸಾಮಾಜಿಕವಾಗಿ ಅಂತರವನ್ನು ಕಾಯ್ದುಕೊಳ್ಳುವುದೂ ಕೂಡಾ ಬಹಳ ಮುಖ್ಯ. ಚಳಿಗಾಲದಲ್ಲಿ ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಿಕೊಳ್ಳಿ. ಕಿವಿ, ಮೂಗನ್ನು ಶಾಲಿನಿಂದ ಹೊದೆದುಕೊಳ್ಳುವುದು ಇತ್ಯಾದಿ ಮಾಡಬಹುದು. ವಾತಾವರಣ ಶುಷ್ಕವಾಗಿರುವುದರಿಂದ ಅಸ್ತಮಾ, ಸಿಒಪಿಡಿ ಹಾಗೂ ಬ್ರಾಂಖೈಟಿಸ್ ಮತ್ತಿತರ ಸಮಸ್ಯೆಗಳೂ ಬರುವ ಸಂಭವ ಹೆಚ್ಚಿರುವುದರಿಂದ ಶಾಲು ಹೊದೆದುಕೊಂಡು, ಬೆಚ್ಚಗಿನ ಉಡುಪುಗಳನ್ನು ಧರಿಸಿಯೇ ಹೊರಗೆ ಹೋಗುವುದು ಒಳ್ಳೆಯದು.
ಬೆಂಕಿ ಶಾಖ ಬೇಡ
ಮರವನ್ನು ಉರಿಸುವುದು, ಬೆಂಕಿಯನ್ನು ಹಾಕುವುದು ಇತ್ಯಾದಿಗಳಿಂದ ಚಳಿ ತಾತ್ಕಾಲಿಕವಾಗಿ ಕಡಿಮೆಯಾದಂತೆ ಅನಿಸಿದರೂ ಇದರ ಹೊಗೆ ಶ್ವಾಸಕೋಶದ ಸಮಸ್ಯೆ ಇರುವ ಮಂದಿಗೆ, ಅಸ್ತಮಾ, ಹಾಗೂ ಅಲರ್ಜಿಯ ಸಮಸ್ಯೆ ಇರುವ ಮಂದಿಗೆ ಒಳ್ಳೆಯದಲ್ಲ. ಇದರಿಂದಲೂ ದೂರವಿರಿ.
ಧೂಮಪಾನ ತ್ಯಜಿಸಿ
ಧೂಮಪಾನ ಮಾಡುವ ಅಭ್ಯಾಸವಿದ್ದರೆ ಅದರಿಂದ ದೂರವಿರಿ. ಬಿಡಲು ಪ್ರಾಮಾಣಿಕ ಪ್ರಯತ್ನ ಮಾಡಿ. ತಂಬಾಕಿನಿಂದ ಶ್ವಾಸಕೋಶದ ಖಾಯಿಲೆಗಳು ಉಲ್ಬಣಿಸುತ್ತವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಲಿಂಕ್ ಕ್ಲಿಕ್ ಮಾಡಿ